ಭಾರತ ಮತ್ತು ಚೀನಾ ನಡುವಿನ ಹೊಸ ಒಪ್ಪಂದ - ಪೂರ್ವ ಲಡಾಖ್‌ನಲ್ಲಿ ಸೇನಾ ಹಿಂತೆಗೆತ ಪ್ರಕ್ರಿಯೆ ಸುಗಮ

| Published : Oct 27 2024, 02:32 AM IST / Updated: Oct 27 2024, 04:51 AM IST

ಸಾರಾಂಶ

ಭಾರತ ಮತ್ತು ಚೀನಾ ನಡುವಿನ ಹೊಸ ಒಪ್ಪಂದದಂತೆ ಪೂರ್ವ ಲಡಾಖ್‌ನಲ್ಲಿ ಉಭಯ ದೇಶಗಳ ಸೇನಾ ಹಿಂತೆಗೆತ ಪ್ರಕ್ರಿಯೆ ಆರಂಭವಾಗಿದ್ದು, ಇದು ಸುಗಮವಾಗಿ ನಡೆಯುತ್ತಿದೆ ಎಂದು ಚೀನಾ ಹೇಳಿದೆ.

ಬೀಜಿಂಗ್‌: ಭಾರತ ಮತ್ತು ಚೀನಾ ನಡುವಿನ ಹೊಸ ಒಪ್ಪಂದದಂತೆ ಪೂರ್ವ ಲಡಾಖ್‌ನಲ್ಲಿ ಉಭಯ ದೇಶಗಳ ಸೇನಾ ಹಿಂತೆಗೆತ ಪ್ರಕ್ರಿಯೆ ಆರಂಭವಾಗಿದ್ದು, ಇದು ಸುಗಮವಾಗಿ ನಡೆಯುತ್ತಿದೆ ಎಂದು ಚೀನಾ ಹೇಳಿದೆ. ರಷ್ಯಾದಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯಲ್ಲಿ ಅ.23ರಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ನಡುವೆ ನಡೆದ ಒಪ್ಪಂದದ ಪ್ರಕಾರ ಸೇನಾ ಪಡೆಗಳನ್ನು ಹಿಂದಕ್ಕೆ ತೆಗೆದುಕೊಳ್ಳುವ ಪ್ರಕ್ರಿಯೆ ಆರಂಭವಾಗಿದೆ. 

‘ಗಡಿ ಸಮಸ್ಯೆಗಳ ಬಗ್ಗೆ ಇತ್ತೀಚಿಗೆ ಭಾರತ ಮತ್ತು ಚೀನಾದ ನಿರ್ಣಯಗಳಿಗೆ ಅನುಗುಣವಾಗಿ ಚೀನಾ ಮತ್ತು ಭಾರತ ಗಡಿ ಸಂಬಂಧಿತ ಕೆಲಸದಲ್ಲಿ ತೊಡಗಿವೆ. ಅದು ಈ ಕ್ಷಣದಲ್ಲಿ ಸುಗಮವಾಗಿ ನಡೆಯುತ್ತಿದೆ’ ಎಂದು ಚೀನಾದ ವಿದೇಶಾಂಗ ಇಲಾಖೆ ವಕ್ತಾರ ಲಿನ್‌ ಜಿಯಾನ್‌ ಹೇಳಿದ್ದಾರೆ. ಒಪ್ಪಂದದ ಪ್ರಕಾರ ಎರಡೂ ದೇಶಗಳು ಪೂರ್ವ ಲಡಾಖ್‌ನ ಡೆಮ್ಚೋಕ್ ಮತ್ತು ಡೆಸ್ಪಾಂಗ್‌ನಿಂದ ತಮ್ಮ ತಮ್ಮ ಸೇನಾ ಪಡೆಗಳನ್ನು ಹಿಂದಕ್ಕೆ ತೆಗೆದುಕೊಳ್ಳುವ ಪ್ರಕ್ರಿಯೆಯನ್ನ ಆರಂಭಿಸಿವೆ. ಈ ಪ್ರಕ್ರಿಯೆ ಅ.28-29ರ ಒಳಗೆ ಮುಕ್ತಾಯಗೊಳ್ಳಲಿದೆ.

ಜಿಯೋ ಭಾರತ್‌ನಿಂದ ದೀಪಾವಳಿ ಆಫರ್‌: 699 ರು.ಗೆ 4ಜಿ ಮೊಬೈಲ್‌

ನವದೆಹಲಿ: ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್‌ ಜಿಯೋ ತನ್ನ ಗ್ರಾಹಕರಿಗೆ ದೀಪಾವಳಿಗೆ ವಿಶೇಷ ಆಫರ್‌ವೊಂದನ್ನು ನೀಡಿದೆ. ಜಿಯೋ ಭಾರತ್‌ 4ಜಿ ಮೊಬೈಲ್‌ ಬೆಲೆಯನ್ನು ಶೇ.30ರಷ್ಟು ಇಳಿಕೆ ಮಾಡಲಾಗಿದ್ದು, 699 ರು.ಗೆ ಮೊಬೈಲ್‌ ಸಿಗಲಿದೆ.ದೀಪಾವಳಿ ವಿಶೇಷ ಸೀಮಿತ ಕೊಡುಗೆಯಲ್ಲಿ 999 ರು.ಬೆಲೆಯ ಮೊಬೈಲ್‌ನ್ನು 699 ರು.ರ ವಿಶೇಷ ಬೆಲೆಗೆ ಮಾರಾಟ ಮಾಡಲು ಕಂಪನಿ ನಿರ್ಧರಿಸಿದೆ. ಇನ್ನು ಜಿಯೋದ ಮಾಸಿಕ ರೀಚಾರ್ಜ್‌ ಕೂಡ ಇತರ ಆಪರೇಟರ್‌ಗಳಿಗಿಂತ ಅಗ್ಗವಾಗಿದ್ದು ಮಾಸಿಕ 123 ರು. ರೀಚಾರ್ಜ್‌ ಮಾಡಿಕೊಳ್ಳಬಹುದು. ಈ ರೀಚಾರ್ಜ್‌ನಲ್ಲಿ ಗ್ರಾಹಕರು ಅನ್‌ಲಿಮಿಟೆಡ್‌ ಕರೆ, 14ಜಿಬಿ ಡೇಟಾ ಪ್ರಯೋಜನ ಕೂಡ ಪಡೆದುಕೊಳ್ಳಬಹುದು.

ನ.26ರಂದು ಸಂಸತ್‌ ಜಂಟಿ ಅಧಿವೇಶನ ಸಾಧ್ಯತೆ

ನವದೆಹಲಿ: ದೇಶದ ಸಂವಿಧಾನವನ್ನು ಅಂಗೀಕರಿಸಿ ನ.26ಕ್ಕೆ 75 ವರ್ಷ ಆಗುತ್ತಿರುವ ಹಿನ್ನೆಲೆಯಲ್ಲಿ ಅಂದು ಸಂಸತ್‌ ವಿಶೇಷ ಜಂಟಿ ಅಧಿವೇಶನ ನಡೆಯುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.ಸಂಸತ್ತಿನ ಸಂವಿಧಾನ ಸದನದ ಸೆಂಟ್ರಲ್‌ ಹಾಲ್‌ನಲ್ಲಿ ಅಂದು ಅಧಿವೇಶನ ನಡೆಯಲಿದೆ. ಇದೇ ಸ್ಥಳದಲ್ಲಿ 1949ರ ನ.26ರಂದು ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರು ರಚಿಸಿದ ಸಂವಿಧಾನವನ್ನು ಭಾರತವು ಅಧಿಕೃತವಾಗಿ ಸ್ವೀಕರಿಸಿತ್ತು. ಇದರ ನೆನಪಿಗಾಗಿ ರಾಜ್ಯಸಭೆ ಮತ್ತು ಲೋಕಸಭೆಯ ಸದಸ್ಯರನ್ನು ಒಟ್ಟುಗೂಡಿಸಿ ಜಂಟಿ ಅಧಿವೇಶನ ಕರೆಯುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.

ನನಗೆ ಹಿಂದಿ ಬರಲ್ಲ: ಡಿಎಂಕೆ ಸಂಸದನಿಂದ ಸಚಿವಗೆ ತಮಿಳಲ್ಲಿ ಉತ್ತರ!

ನವದೆಹಲಿ: ಕೇಂದ್ರ ಸಚಿವ ರವನೀತ್‌ ಸಿಂಗ್‌ ಬಿಟ್ಟೂ ಕಳಿಸಿದ ಹಿಂದಿ ಪತ್ರಕ್ಕೆ ಕಿಡಿಕಾರಿರುವ ತಮಿಳುನಾಡು ಡಿಎಂಕೆ ಸಂಸದ ಎಂ.ಎಂ. ಅಬ್ದುಲ್ಲಾ, ‘ನನಗೆ ಹಿಂದಿ ತಿಳಿಯದು. ಆದಕಾರಣ ಅಧಿಕೃತ ಸಂವಹನಗಳನ್ನು ಆಂಗ್ಲ ಭಾಷೆಯಲ್ಲಿ ನಡೆಸಬೇಕು’ ಎಂದು ಆಗ್ರಹಿಸಿದ್ದಾರೆ ಹಾಗೂ ಈ ಆಗ್ರಹವನ್ನು ಅವರು ತಮಿಳಿನಲ್ಲಿ ಬರೆದ ಪತ್ರದಲ್ಲಿ ಮಾಡಿದ್ದಾರೆ.ರೈಲ್ವೆ ಇಲಾಖೆಯಲ್ಲಿನ ಸಮಸ್ಯೆಯೊಂದರ ಬಗ್ಗೆ ಅಬ್ದುಲ್ಲಾ ಪ್ರಸ್ತಾಪಿಸಿದ್ದರು. ಇದಕ್ಕೆ ಹಿಂದಿಯಲ್ಲಿ ಬಿಟ್ಟೂ ಉತ್ತರಿಸಿದ್ದರು.ಈ ಪತ್ರದ ಹಾಗೂ ತಮ್ಮ ಪ್ರತಿಕ್ರಿಯೆಯ ಫೋಟೋವನ್ನು ಹಂಚಿಕೊಂಡ ಅಬ್ದುಲ್ಲಾ, ಎಷ್ಟೇ ಮನವಿ ಮಾಡಿದರೂ ಸಚಿವರು ಹಿಂದಿಯಲ್ಲೇ ಸಂವಹನ ಮುಂದುವರೆಸಿದ್ದರು. ಆದ್ದರಿಂದ ಅದಕ್ಕೆ ತಕ್ಕ ಉತ್ತರ ನೀಡಿದ್ದೇನೆ ಎಂದಿದ್ದಾರೆ.

ತಮಿಳುನಾಡಿನಲ್ಲಿ ಹಿಂದಿ ವಿರೋಧಿ ಚಳವಳಿಯ ಇತಿಹಾಸವೇ ಇದೆ ಎಂಬುದು ಇಲ್ಲಿ ಗಮನಾರ್ಹ.2015ಕ್ಕೂ ಮುನ್ನ ನ.26ನೇ ದಿನಾಂಕವನ್ನು ರಾಷ್ಟ್ರೀಯ ಕಾನೂನು ದಿನ ಎಂದು ಆಚರಿಸಲಾಗುತ್ತಿತ್ತು. ಆದರೆ ಮೋದಿ ಸರ್ಕಾರ ಬಂದ ನಂತರ 2015ರ ಬಳಿಕ ಈ ದಿನವನ್ನು ಸಂವಿಧಾನ ದಿನವನ್ನಾಗಿ ಆಚರಿಸಲಾಗುತ್ತಿದೆ.