ಸಾರಾಂಶ
ಡೊನಾಲ್ಡ್ ಟ್ರಂಪ್ ಅವರ ಭಾರತದ ವಿರುದ್ಧ ತೆರಿಗೆ ದಾಳಿಗೆ ಪ್ರತಿತಂತ್ರವಾಗಿ ಪ್ರಧಾನಿ ಮೋದಿ ಚೀನಾ ಪ್ರವಾಸ ಕೈಗೊಂಡಿರುವ ಬೆನ್ನಲ್ಲೇ ನೆರೆಯ ರಾಷ್ಟ್ರ ಭಾರತ ಪರ ನಿಂತಿದೆ.
ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭಾರತದ ವಿರುದ್ಧ ತೆರಿಗೆ ದಾಳಿಗೆ ಪ್ರತಿತಂತ್ರವಾಗಿ ಪ್ರಧಾನಿ ಮೋದಿ ಚೀನಾ ಪ್ರವಾಸ ಕೈಗೊಂಡಿರುವ ಬೆನ್ನಲ್ಲೇ ನೆರೆಯ ರಾಷ್ಟ್ರ ಭಾರತ ಪರ ನಿಂತಿದೆ. ಭಾರತದ ಸಾರ್ವಭೌಮತ್ವ ವಿನಿಮಯ ಮಾಡುವಂಥದ್ದಲ್ಲ. ಅಲ್ಲಿನ ವಿದೇಶಾಂಗ ನೀತಿಯನ್ನು ಇತರ ದೇಶಗಳು ನಿರ್ವಹಿಸಲು ಸಾಧ್ಯವಿಲ್ಲ ಎಂದು ಚೀನಾ ಭಾರತಕ್ಕೆ ನೈತಿಕವಾಗಿ ಬೆಂಬಲ ಘೋಷಿಸಿದೆ.
ಟ್ರಂಪ್ ಭಾರತದ ಮೇಲೆ ಹೆಚ್ಚುವರಿಯಾಗಿ ತೆರಿಗೆ ಹೇರಿದ್ದನ್ನು ಖಂಡಿಸಿ ಭಾರತದ ಪತ್ರಿಕೆಯೊಂದು ತನ್ನ ಸಂಪಾದಕೀಯದಲ್ಲಿ ‘ಅಮೆರಿಕ ಮತ್ತು ಯುರೋಪಿಯನ್ ದೇಶಗಳ ಬೆದರಿಕೆ ತಂತ್ರಗಳನ್ನು ಭಾರತ ಸರ್ಕಾರ ನೇರವಾಗಿ ವಿರೋಧಿಸಿದೆ’ ಎಂದು ಬರೆದಿತ್ತು. ಈ ಸಂಪಾದಕೀಯ ಮತ್ತು ಅದರೊಳಗಿನ ಅಂಶಗಳನ್ನು ಉಲ್ಲೇಖಿಸಿ ಟ್ವೀಟ್ ಮಾಡಿರುವ ಭಾರತದಲ್ಲಿನ ಚೀನಾ ರಾಯಭಾರಿ ಕಚೇರಿಯ ವಕ್ತಾರೆ ಯು ಜಿಂಗ್ ‘ಭಾರತದ ಸಾರ್ವಭೌಮತ್ವ ವಿನಿಮಯ ಮಾಡಿಕೊಳ್ಳುವಂಥದ್ದಲ್ಲ. ಭಾರತದ ಜೊತೆಗೆ ಆ ದೇಶ ಅದೆಷ್ಟೇ ಆಪ್ತವಾಗಿದ್ದರೂ ಅಲ್ಲಿನ ವಿದೇಶಾಂಗ ನೀತಿಯನ್ನು ಇತರ ದೇಶಗಳು ನಿರ್ವಹಿಸಲು ಸಾಧ್ಯವಿಲ್ಲ’ ಎಂದು ಬರೆದುಕೊಂಡಿದ್ದಾರೆ.
ಆ.31ರಿಂದ ಚೀನಾದಲ್ಲಿ ಶಾಂಘೈ ಸಹಕಾರ ಶೃಂಗದ ಸಭೆ ಆಯೋಜನೆಯಾಗಿದ್ದು, ಅದರಲ್ಲಿ ಪ್ರಧಾನಿ ಮೋದಿ ಭಾಗಿಯಾಗಲಿದ್ದಾರೆ ಎನ್ನಲಾಗಿದೆ. 2020ರ ಗಲ್ವಾನ್ ಸಂಘರ್ಷದ ಬಳಿಕ ಭಾರತ- ಚೀನಾ ಸಂಬಂಧ ಪೂರ್ಣ ಹದಗೆಟ್ಟಿತ್ತು. ಅದನ್ನು ಸರಿಪಡಿಸಲು ಇತ್ತೀಚೆಗೆ ಎರಡೂ ದೇಶಗಳು ಹಲವು ಹೆಜ್ಜೆಗಳನ್ನು ಇಟ್ಟಿದ್ದವು. ಅದರ ನಡುವೆಯೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಚೀನಾ, ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ತೆರಿಗೆ ದಾಳಿ ನಡೆಸಿದ್ದರು.
ಹೀಗಾಗಿ ಈ ಶೃಂಗ ಸನ್ನಿವೇಶವನ್ನು ಅಮೆರಿಕದ ವಿರುದ್ಧ ತಮ್ಮ ಒಗ್ಗಟ್ಟಿನ ಶಕ್ತಿ ತೋರಿಸಲು ಭಾರತ- ಚೀನಾ ಮುಂದಾಬಹುದು. ಇದೇ ಕಾರಣಕ್ಕೆ 7 ವರ್ಷಗಳ ಬಳಿಕ ಮೋದಿ ಚೀನಾ ಪ್ರವಾಸ ಕೈಗೊಳ್ಳುತ್ತಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.
ಹೇಳಿದಂತೆ ಟ್ರಂಪ್ ಬಿಟ್ಟು ಪ್ರಧಾನಿ ಮೋದಿಗೆ ಕರೆ ಮಾಡಿದ ಬ್ರೆಜಿಲ್ ಅಧ್ಯಕ್ಷ
ನವದೆಹಲಿ/ರಿಯೋ ಡಿ ಜನೈರೋ: ವ್ಯಾಪಾರ ಒಪ್ಪಂದದ ಮಾತುಕತೆ ಕುರಿತು ಅಮೆರಿಕ ಅಧ್ಯಕ್ಷರ ಆಹ್ವಾನವನ್ನು ತಿರಸ್ಕರಿಸಿ ಪ್ರಧಾನಿ ಮೋದಿ ಜತೆ ಮಾತನಾಡುವೆ ಎಂದು ತಿರುಗೇಟು ನೀಡಿದ್ದ ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯಾ ಲುಲ ಡ ಸಿಲ್ವಾ ಅವರು ಗುರುವಾರ ಮೋದಿ ಜೊತೆ ದೂರವಾಣಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಅಮೆರಿಕದ ತೆರಿಗೆ ವಿಷಯ, ಜಾಗತಿಕ ಸಮಸ್ಯೆಗಳ ಕುರಿತು ಮಾತುಕತೆ ನಡೆಸಿದ್ದಾರೆ. ಇದಲ್ಲದೇ ಪ್ರಾದೇಶಿಕ ಸಾರಿಗೆ, ವ್ಯಾಪಾರ, ತಂತ್ರಜ್ಞಾನ ಮತ್ತು ರಕ್ಷಣಾ ಸಹಕಾರದ ಕುರಿತು ಉಭಯ ದೇಶಗಳ ನಾಯಕರು ಸುದೀರ್ಘ ಮಾತುಕತೆ ನಡೆಸಿದರು.
ಟ್ರಂಪ್ ತೆರಿಗೆ ಬಿಕ್ಕಟ್ಟು ಬೆನ್ನಲ್ಲೇ ರಷ್ಯಾ ಅಧ್ಯಕ್ಷ ಶೀಘ್ರ ಭಾರತ ಭೇಟಿ?
ಮಾಸ್ಕೊ: ರಷ್ಯಾದಿಂದ ಭಾರತದ ತೈಲ ಆಮದನ್ನು ವಿರೋಧಿಸಿ ಅಮೆರಿಕ ಅಧ್ಯಕ್ಷ ಟ್ರಂಪ್ ಭಾರತದ ಮೇಲೆ ಶೇ.50ರಷ್ಟು ತೆರಿಗೆ ವಿಧಿಸಿದ ಬೆನ್ನಲ್ಲೇ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಶೀಘ್ರದಲ್ಲೇ ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ತಿಳಿಸಿದ್ದಾರೆ. ಆದರೆ ಪುಟಿನ್ ಆಗಮನದ ನಿಖರ ದಿನಾಂಕವನ್ನು ತಿಳಿಸಿಲ್ಲ. ಪ್ರಸ್ತುತ ರಷ್ಯಾ ಪ್ರವಾಸದಲ್ಲಿರುವ ದೋವಲ್, ‘ನಾವು (ಭಾರತ-ರಷ್ಯಾ) ವಿಶೇಷವಾದ ಹಾಗೂ ದೀರ್ಘವಾದ ಸಂಬಂಧ ಹೊಂದಿದ್ದೇವೆ ಹಾಗೂ ಈ ಸಂಬಂಧವನ್ನು ಗೌರವಿಸುತ್ತೇವೆ. ನಾವು ಉನ್ನತ ಮಟ್ಟದ ಸಹಭಾಗಿತ್ವ ಹೊಂದಿದ್ದೇವೆ. ಇದರಿಂದ ಗಣನೀಯ ಕೊಡುಗೆಗಳೂ ಸಿಕ್ಕಿವೆ. ಅಧ್ಯಕ್ಷ ಪುಟಿನ್ ಅವರ ಭಾರತ ಭೇಟಿಯ ಬಗ್ಗೆ ತಿಳಿಯಲು ನಾವು ತುಂಬಾ ಉತ್ಸುಕರಾಗಿದ್ದೇವೆ ಮತ್ತು ಸಂತೋಷಪಡುತ್ತೇವೆ. ದಿನಾಂಕಗಳನ್ನು ಈಗ ಬಹುತೇಕ ಅಂತಿಮಗೊಳಿಸಲಾಗಿದೆ’ ಎಂದು ತಿಳಿಸಿದ್ದಾರೆ.