ಸಾರಾಂಶ
ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ಪಾರಮ್ಯಕ್ಕಾಗಿ ಚೀನಾ, ಅಮೆರಿಕ, ರಷ್ಯಾ ನಡುವಿನ ಸಮರದ ನಡುವೆಯೇ, ಭೂಮಿಯಿಂದ 35000 ಕಿ.ಮೀ ಎತ್ತರದಲ್ಲಿ ಉಪಗ್ರಹವೊಂದಕ್ಕೆ ಇಂಧನ ತುಂಬಿಸುವ ಐತಿಹಾಸಿಕ ಸಾಧನೆಯೊಂದನ್ನು ಚೀನಾ ಮಾಡಿದೆ
ಬೀಜಿಂಗ್: ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ಪಾರಮ್ಯಕ್ಕಾಗಿ ಚೀನಾ, ಅಮೆರಿಕ, ರಷ್ಯಾ ನಡುವಿನ ಸಮರದ ನಡುವೆಯೇ, ಭೂಮಿಯಿಂದ 35000 ಕಿ.ಮೀ ಎತ್ತರದಲ್ಲಿ ಉಪಗ್ರಹವೊಂದಕ್ಕೆ ಇಂಧನ ತುಂಬಿಸುವ ಐತಿಹಾಸಿಕ ಸಾಧನೆಯೊಂದನ್ನು ಚೀನಾ ಮಾಡಿದೆ. ಅಮೆರಿಕ, ರಷ್ಯಾಕ್ಕೂ ಸಾಧ್ಯವಾಗದ ಈ ಸಾಧನೆ ಮೂಲಕ ಬಾಹ್ಯಾಕಾಶ ಯುಗದಲ್ಲಿ ಚೀನಾ ಒಂದು ಹೆಜ್ಜೆ ಮುಂದಿಟ್ಟಿದೆ.
ಈ ವರ್ಷ ಜನವರಿಯಲ್ಲಿ ಉಡಾವಣೆ ಮಾಡಲಾಗಿದ್ದ ಶಿಜಿಯಾನ್-25 ಉಪಗ್ರಹವು, 2021ರ ಅ.24ರಂದು ಉಡ್ಡಯನಗೊಂಡಿದ್ದ ಶಿಜಿಯಾನ್-21ಕ್ಕೆ ಅಂತರಿಕ್ಷದಲ್ಲೇ ಇಂಧನ ತುಂಬಿಸಿದೆ.
ಇಂಧನ ಮರುಭರ್ತಿ ಹೇಗೆ?
ಉಪಗ್ರಹದ ಕಕ್ಷೆಯ ಅವಧಿಯು ಭೂಮಿಯ ತಿರುಗುವಿಕೆಯ ವೇಗಕ್ಕೆ ಹೊಂದಿಕೆಯಾಗುವ ಜಿಯೋಸಿಂಕ್ರೋನಸ್ ಕಕ್ಷೆಯಲ್ಲಿ ಶಿಜಿಯಾನ್-21 ಮತ್ತು 25ನ್ನು ಜು.2ರಂದು ಡಾಕ್(ಕೂಡಿಸುವಿಕೆ) ಮಾಡಲಾಗಿದ್ದು, ಇಂಧನ ತುಂಬಿಸಲಾಗಿದೆ. ಬಳಿಕ ಎರಡೂ ಉಪಗ್ರಹಗಳು ಸ್ವಸ್ಥಾನಕ್ಕೆ ಮರಳಿವೆ. ಈ ಪ್ರಕ್ರಿಯೆ ವೇಳೆ ಅಮೆರಿಕದ ಕಣ್ಗಾವಲು ಉಪಗ್ರಹಗಳು ಇಂಧನ ಭರ್ತಿಯನ್ನು ಗಮನಿಸುತ್ತಿದ್ದವು ಎನ್ನಲಾಗಿದೆ.
ಇಂಧನ ಭರ್ತಿ ಎಂದರೇನು?
ಇಂಧನ ಭರ್ತಿ ಎಂದರೆ ಉಪಗ್ರಹಗಳಿಗೆ ಶಕ್ತಿಯ ಮೂಲವಾದ ಸೌರಫಲಕಗಳು, ಪ್ರೊಫೆಲೆಂಟ್‌ಗಳು ಸೇರಿದಂತೆ ಅವು ಹೆಚ್ಚಿನ ಕಾಲ ಕಾರ್ಯನಿರ್ವಹಿಸಲು ಅಗತ್ಯವಾದ ಪರಿಕರಗಳ ಬದಲಾವಣೆಯಾಗಿದೆ. ಜತೆಗೆ, ಹೈಡ್ರಾಜಿನ್, ಏರೋಜಿನ್-50, ದ್ರವ ರೂಪದ ಹೈಡ್ರೋಜನ್ ಆಮ್ಲಜನಕವನ್ನೂ ಉಪಗ್ರಹಗಳಿಗೆ ಇಂಧನವಾಗಿ ಬಳಸಲಾಗುತ್ತದೆ. ಇದರಿಂದ ಉಪಗ್ರಹಗಳು ಬಾಹ್ಯಾಕಾಶದಲ್ಲಿ ದೀರ್ಘ ಕಾಲ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ. ಹೊಸ ಉಪಗ್ರಹ ಉಡ್ಡಯನದ ವೆಚ್ಚವೂ ಉಳಿಯುತ್ತದೆ. ಜತೆಗೆ ಅವಧಿ ಮೀರಿದ ಉಪಗ್ರಹಗಳ ಅವಶೇಷಗಳು ಅಂತರಿಕ್ಷದಲ್ಲೇ ನಿರುಪಯುಕ್ತವಾಗಿ ಸುತ್ತುವುದು ತಪ್ಪುತ್ತದೆ.