ಸಾರಾಂಶ
ನಾಗ್ಪುರ ಹಿಂಸಾಚಾರದ ರೂವಾರಿ ಎನ್ನಲಾದ ಫಹೀಮ್ ಖಾನ್‌ನ 2 ಅಂತಸ್ತಿನ ಮನೆಯನ್ನು ನಾಗ್ಪುರ ಮಹಾನಗರ ಪಾಲಿಕೆ ಸೋಮವಾರ ಧ್ವಂಸ ಮಾಡಿದೆ.
ನಾಗ್ಪುರ: ನಾಗ್ಪುರ ಹಿಂಸಾಚಾರದ ರೂವಾರಿ ಎನ್ನಲಾದ ಫಹೀಮ್ ಖಾನ್‌ನ 2 ಅಂತಸ್ತಿನ ಮನೆಯನ್ನು ನಾಗ್ಪುರ ಮಹಾನಗರ ಪಾಲಿಕೆ ಸೋಮವಾರ ಧ್ವಂಸ ಮಾಡಿದೆ.
ಅನಧಿಕೃತ ನಿರ್ಮಾಣ ಆರೋಪದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.ಪ್ರಕರಣದ ಇನ್ನೊಬ್ಬ ಆರೋಪಿ ಯೂಸುಫ್ ಶೇಖ್‌ನ ಮನೆಯ ಅಕ್ರಮವಾಗಿ ನಿರ್ಮಿಸಲಾದ ಭಾಗವನ್ನು ಸಹ ತೆಗೆದುಹಾಕಲಾಗಿದೆ.‘ಖಾನ್‌ನ ಮನೆ ಆತನ ತಾಯಿಯ ಹೆಸರಿನಲ್ಲಿ ನೋಂದಾಯಿಸಿದ್ದು, ನಾಗ್ಪುರ ಇಂಪ್ರೂವ್‌ಮೆಂಟ್ ಟ್ರಸ್ಟ್‌ನಿಂದ ಭೋಗ್ಯಕ್ಕೆ ಪಡೆದಿದ್ದರು. ಆದರೆ 2020ರಲ್ಲಿಯೇ ಭೋಗ್ಯದ ಅವಧಿ ಕೊನೆಗೊಂಡಿತ್ತು. ಕಟ್ಟಡಕ್ಕೆ ಯಾವುದೇ ಮಂಜೂರಾತಿ ಇರಲಿಲ್ಲ. ಸಂಪೂರ್ಣ ಅನಧಿಕೃತವಾಗಿ ನಿರ್ಮಾಣವಾಗಿತ್ತು. ಮಾ.21ರಂದು ಎನ್‌ಎಂಸಿ ಅಧಿಕಾರಿಗಳು ಮನೆ ನೆಲಸಮ ಮಾಡುವ ಬಗ್ಗೆ ನೋಟಿಸ್ ನೀಡಿದ್ದರು. ಆದರೆ ಅವರ ಕುಟುಂಬ ನೊಟೀಸ್‌ಗೆ ಉತ್ತರಿಸಿರಲಿಲ್ಲ. ಮಹಾರಾಷ್ಟ್ರ ಪ್ರಾದೇಶಿಕ ಮತ್ತು ಪಟ್ಟಣ ಯೋಜನಾ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರೀ ಪೊಲೀಸ್ ಭದ್ರತೆಯಲ್ಲಿ 2 ಜೆಸಿಬಿಗಳ ಮೂಲಕ ಮನೆಯನ್ನು ಧ್ವಂಸಗೊಳಿಸಲಾಗಿದೆ. ಖಾನ್ ಜೈಲಿನಲ್ಲಿರುವಾಗಲೇ ಕ್ರಮ ಜರುಗಿದೆ.