ದಿಲ್ಲಿ ಏರ್‌ಪೋರ್ಟ್‌ ಟಿ1 ಕುಸಿತ: ರಾಜಕೀಯ ಕೆಸರೆರಚಾಟ

| Published : Jun 29 2024, 12:33 AM IST / Updated: Jun 29 2024, 05:12 AM IST

ಸಾರಾಂಶ

ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್‌-1 ಮೇಲ್ಛಾವಣಿ ಕುಸಿತವು ರಾಜಕೀಯ ವಾಕ್ಸಮರಕ್ಕೆ ನಾಂದಿ ಹಾಡಿದೆ. ಕಳೆದ 10 ವರ್ಷಗಳಲ್ಲಿ ಮಾಡಿದ ‘ಭ್ರಷ್ಟಾಚಾರ’ ಮತ್ತು ‘ಆಪರಾಧಿಕ ನಿರ್ಲಕ್ಷ್ಯ’ವು ಇಂಥ ಕಳಪೆ ಮೂಲಸೌಕರ್ಯಕ್ಕೆ ಕಾರಣವಾಗಿದೆ ಎಂದು ಕಾಂಗ್ರೆಸ್‌ ಪಕ್ಷ ವಾಗ್ದಾಳಿ ನಡೆಸಿದೆ.

 ನವದೆಹಲಿ : ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್‌-1 ಮೇಲ್ಛಾವಣಿ ಕುಸಿತವು ರಾಜಕೀಯ ವಾಕ್ಸಮರಕ್ಕೆ ನಾಂದಿ ಹಾಡಿದೆ. ಕಳೆದ 10 ವರ್ಷಗಳಲ್ಲಿ ಮಾಡಿದ ‘ಭ್ರಷ್ಟಾಚಾರ’ ಮತ್ತು ‘ಆಪರಾಧಿಕ ನಿರ್ಲಕ್ಷ್ಯ’ವು ಇಂಥ ಕಳಪೆ ಮೂಲಸೌಕರ್ಯಕ್ಕೆ ಕಾರಣವಾಗಿದೆ ಎಂದು ಕಾಂಗ್ರೆಸ್‌ ಪಕ್ಷ ವಾಗ್ದಾಳಿ ನಡೆಸಿದೆ. ಆದರೆ, ‘ಇದು 2009ರಲ್ಲಿ ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರ ಇದ್ದಾಗ ಉದ್ಘಾಟಿಸಲಾದ ಟರ್ಮಿನಲ್‌’ ಎಂದು ಕೇಂದ್ರ ಸರ್ಕಾರ ತಿರುಗೇಟು ನೀಡಿದೆ.

ಈ ನಡುವೆ ಅಂದಿ ವಿಮಾನಯಾನ ಸಚಿವರಾಗಿದ್ದ ಎನ್‌ಸಿಪಿ ಮುಖಂಡ ಪ್ರಫುಲ್‌ ಪಟೇಲ್‌ ಪ್ರತಿಕ್ರಿಯಿಸಿ, ‘ಈ ಬಗ್ಗೆ ರಾಜಕೀಯ ಬೇಡ. 15 ವರ್ಷದ ಹಿಂದಿನ ಕಾಮಗಾರಿ ಅದು. ತನಿಖೆ ನಡೆದು ಸತ್ಯಾಂಶ ಹೊರಬರಲಿ’ ಎಂದು ಪ್ರತಿಕ್ರಿಯಿಸಿದ್ದಾರೆ. ಅಂದು ಕಾಂಗ್ರೆಸ್‌ ಮೈತ್ರಿಯಲ್ಲಿದ್ದ ಪ್ರಫುಲ್‌ ಈಗ ಬಿಜೆಪಿ ಮೈತ್ರಿಯಲ್ಲಿದ್ದಾರೆ ಎಂಬುದು ಗಮನಾರ್ಹ.

ಖರ್ಗೆ ಕಿಡಿ:ಈ ಕುರಿತು ಟ್ವೀಟ್‌ ಮಾಡಿರುವ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ‘ಕಳೆದ 10 ವರ್ಷಗಳ ಮೋದಿ ಸರ್ಕಾರ ನಿರ್ಮಿಸಿರುವ ಕಳಪೆ ಮೂಲಸೌಕರ್ಯಗಳು ಇಸ್ಪೀಟು ಎಲೆಯಂತೆ ಕುಸಿದು ಬೀಳುತ್ತಿವೆ, ಇದಕ್ಕೆ ಭ್ರಷ್ಟಾಚಾರ ಮತ್ತು ಕ್ರಿಮಿನಲ್ ನಿರ್ಲಕ್ಷ್ಯ ಕಾರಣವಾಗಿದೆ’ ಎಂದಿದ್ದಾರೆ.

ಇದಕ್ಕೆ, ‘ಈಗ ದೆಹಲಿ ವಿಮಾನ ನಿಲ್ದಾಣದ (ಟಿ 1) ಛಾವಣಿ ಕುಸಿದಿದೆ. ಮೊನ್ನೆಯ ಜಬಲ್ಪುರ ವಿಮಾನ ನಿಲ್ದಾಣದ ಮೇಲ್ಛಾವಣಿ ಕುಸಿತ, ಅಯೋಧ್ಯೆಯ ಹೊಸ ರಸ್ತೆಗಳ ಹೀನಾಯ ಸ್ಥಿತಿ, ರಾಮಮಂದಿರ ಸೋರಿಕೆ, ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್ ರಸ್ತೆಯಲ್ಲಿ ಬಿರುಕುಗಳು, ಬಿಹಾರದ 13 ಸೇತುವೆ ಕುಸಿತ, ದಿಲ್ಲಿ ಪ್ರಗತಿ ಮೈದಾನದ ಸುರಂಗ ಮುಳುಗುವಿಕೆ, ಗುಜರಾತ್‌ನಲ್ಲಿ ಮೋರ್ಬಿ ಸೇತುವೆ ಕುಸಿತದ ದುರಂತ’ ಎಂದು ಉದಾಹರಣೆ ನೀಡಿದ್ದಾರೆ.

ತೃಣಮೂಲ ಕಾಂಗ್ರೆಸ್‌ನ ಸಾಕೇತ್‌ ಗೋಖಲೆ ಟ್ವೀಟ್ ಮಾಡಿ, ‘ಚುನಾವಣೆಗೂ ಮುನ್ನ ಮಾರ್ಚ್‌ನಲ್ಲಿ ತರಾತುರಿಯಲ್ಲಿ ಮೋದಿ ಉದ್ಘಾಟಿದ್ದ ಟರ್ಮಿನಲ್‌ ಇದು’ ಎಂದು ಟೀಕಿಸಿದ್ದಾರೆ.ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧೀ ಪ್ರತಿಕ್ರಿಯಿಸಿ, ‘ಈ ಭ್ರಷ್ಟ ಕಾಮಗಾರಿಗಳ ನಿರ್ಮಾಣ ಜವಾಬ್ದಾರಿಯನ್ನು ಪ್ರಧಾನಿ ಹೊತ್ತುಕೊಳ್ಳುತ್ತಾರಾ?’ ಎಂದು ಪ್ರಶ್ನಿಸಿದ್ದಾರೆ.

ಕೇಂದ್ರ ತಿರುಗೇಟು:

ಇದು ಮೋದಿ ಅವಧಿಯ ಕಾಮಗಾರಿ ಎಂಬ ಕಾಂಗ್ರೆಸ್ ಹಾಗೂ ಟಿಎಂಸಿ ಟೀಕೆಗೆ ಪ್ರತಿಕ್ರಿಯಿಸಿರುವ ಕೇಂದ್ರ ವಿಮಾನಯಾನ ಸಚಿವ ರಾಮಮೋಹನ ನಾಯ್ಡು, ‘ಇದು 2009ರಲ್ಲಿ (ಮನಮೋಹನ ಸಿಂಗ್‌ ಪ್ರಧಾನಿ ಆಗಿದ್ದಾಗ) ಕಟ್ಟಿದ್ದ ರಚನೆ’ ಎಂದಿದ್ದಾರೆ.ಕೇಂದ್ರ ಸರ್ಕಾರದ ಮೂಲಗಳು ಮಾತನಾಡಿ, ‘ಟಿ-1ನಲ್ಲಿ ನಲ್ಲಿ ಕುಸಿದಿರುವ ಮೇಲ್ಛಾವಣಿಯನ್ನು 2008-09 ರ ಅವಧಿಯಲ್ಲಿ ನಿರ್ಮಿಸಲಾಗಿದೆ ಮತ್ತು ಜಿಎಂಆರ್‌ ಕಂಪನಿ ಇದರ ಕಾಮಗಾರಿಯ ಗುತ್ತಿಗೆ ಪಡೆದಿತ್ತು’ ಎಂದಿವೆ.

2009ರ ಸೋರಿಕೆ ವಿಡಿಯೋ:

ಈ ನಡುವೆ, 2009ರಲ್ಲಿ ಟಿ1 ಮೇಲ್ಛಾವಣಿ ಉದ್ಘಾಟನೆಯ 3 ತಿಂಗಳ ನಂತರ, ‘ಕಳಪೆ ಕಾಮಗಾರಿ ಕಾರಣ ಅದು ಸೋರುತ್ತಿದೆ’ ಎಂದು ಎನ್‌ಡಿಟೀವಿ ವರದಿ ಮಾಡಿದ್ದ ವಿಡಿಯೋ ಶುಕ್ರವಾರ ವೈರಲ್ ಆಗಿವೆ.