ಸಾರಾಂಶ
ನವದೆಹಲಿ: ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ನ್ಯಾ। ಡಿ.ವೈ. ಚಂಡ್ರಚೂಡ್ ಅವರು ತಮ್ಮ ಉತ್ತರಾಧಿಕಾರಿಯಾಗಿ ಹಿರಿಯ ನ್ಯಾಯಾಧೀಶ ನ್ಯಾ। ಸಂಜೀವ್ ಖನ್ನಾ ಹೆಸರು ಪ್ರಸ್ತಾಪಿಸಿದ್ದಾರೆ. ಈ ಕುರಿತು ಚಂದ್ರಚೂಡ್ ಅವರು ಕೇಂದ್ರ ಕಾನೂನು ಸಚಿವಾಲಯಕ್ಕೆ ಶಿಫಾರಸು ಪತ್ರ ರವಾನಿಸಿದ್ದಾರೆ.
ಈ ಪ್ರಸ್ತಾಪವನ್ನು ಸರ್ಕಾರ ಅನುಮೋದಿಸಿದರೆ ಖನ್ನಾ ಅವರು ನ.10ರಂದು 51ನೇ ಸಿಜೆಐ ಆಗಿ ನೇಮಕಗೊಳ್ಳಲಿದ್ದು, 2025ರ ಮೇ 13ರವರೆಗೆ(6 ತಿಂಗಳು) ಸೇವೆ ಸಲ್ಲಿಸಲಿದ್ದಾರೆ. ನ್ಯಾ। ಚಂದ್ರಚೂಡ್ ನ.8ರಂದು ನಿವೃತ್ತಿ ಹೊಂದಲಿದ್ದಾರೆ.
ಖನ್ನಾ ಅವರು ಚುನಾವಣೆಯಲ್ಲಿ ಇವಿಎಂ ಯಂತ್ರಗಳ ಬಳಕೆಯನ್ನು ಎತ್ತಿಹಿಡಿದು ತೀರ್ಪು ಹೊರಡಿಸಿದ್ದರು. ಚುನಾವಣಾ ಬಾಂಡ್‌ಗಳು ಅಸಂವಿಧಾನಿಕ ಎಂದ ಸಾಂವಿಧಾನಿಕ ಪೀಠ ಹಾಗೂ 370 ವಿಧಿಯನ್ನು ರದ್ದುಗೊಳಿಸಿದ ಸಾಂವಿಧಾನಿಕ ಪೀಠದ ಭಾಗವಾಗಿದ್ದರು. ದೆಹಲಿ ಮಾಜಿ ಸಿಎಂ ಅರವಿಂದ ಕೇಜ್ರಿವಾಲ್‌ಗೆ ಇವರು ಜಾಮೀನು ನೀಡಿದ್ದರು.
1983ರಲ್ಲಿ ದೆಹಲಿಯ ಬಾರ್ ಕೌನ್ಸಿಲ್‌ನಲ್ಲಿ ವಕೀಲರಾಗಿ ವೃತ್ತಿಜೀವನವನ್ನು ಆರಂಭಿಸಿದ ನ್ಯಾ।ಸಂಜೀವ್ ಖನ್ನಾ, ತೀಸ್ ಹಜಾರಿ ಸಂಕೀರ್ಣದಲ್ಲಿರುವ ಜಿಲ್ಲಾ ನ್ಯಾಯಾಲಯಗಳಲ್ಲಿ ಅಭ್ಯಾಸ ಮಾಡಿದರು. ಬಳಿಕ 2005ರಲ್ಲಿ ಇವರನ್ನು ದೆಹಲಿ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಾಧೀಶರಾಗಿ ಪದೋನ್ನತಿ ಹೊಂದಿ, 2006ರಲ್ಲಿ ಖಾಯಂ ನ್ಯಾಯಾಧೀಶರಾಗಿ ನೇಮಕವಾಗಿದ್ದರು. 2019ರ ಜ.18ರಂದು ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರಾಗಿ ನೇಮಕಗೊಂಡಿದ್ದರು.