‘ನಿರುದ್ಯೋಗಿ ಜಿರಳೆ’ ವಿವಾದದ ಬೆನ್ನಲ್ಲೇ ಸ್ಪಷ್ಟನೆ

ನವದೆಹಲಿ: ‘ನಕಲಿ ಮತ್ತು ಬೋಗಸ್‌ ಪದವಿಗಳನ್ನು ಪಡೆದು ಕಾನೂನು ವೃತ್ತಿಯನ್ನು ಪ್ರವೇಶಿಸುವವರನ್ನು ಉದ್ದೇಶಿಸಿ ನಾನು ಜಿರಳೆಗಳು ಎಂಬ ಹೇಳಿಕೆ ನೀಡಿದ್ದೆ. ಆದರೆ ಮಾಧ್ಯಮದ ಒಂದು ವರ್ಗ ನನ್ನ ಮಾತನ್ನು ತಪ್ಪಾಗಿ ಅರ್ಥೈಸಿದೆ. ಇದರಿಂದ ತೀವ್ರ ನೋವಾಗಿದೆ’ ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್‌ ಸ್ಪಷ್ಟನೆ ನೀಡಿದ್ದಾರೆ. ಕೆಲ ನಿರುದ್ಯೋಗಿಗಳು ಜಿರಳೆಗಳಂತೆ ವರ್ತಿಸುತ್ತಿದ್ದಾರೆ ಎಂದು ಶುಕ್ರವಾರ ಅವರು ನೀಡಿದ್ದ ಹೇಳಿಕೆ ವಿವಾದಕ್ಕೆ ಗ್ರಾಸವಾಗಿತ್ತು. ಈ ಕುರಿತು ಸ್ಪಷ್ಟನೆ ನೀಡಿದ ಅವರು, ‘ನಾನು ಟೀಕಿಸಿದ್ದು ನಕಲಿ ಪದವಿಗಳ ಸಹಾಯದಿಂದ ಕಾನೂನು ವೃತ್ತಿ ಪ್ರವೇಶಿಸಿದವರನ್ನು. ಇದೇ ರೀತಿಯ ವ್ಯಕ್ತಿಗಳು ಮಾಧ್ಯಮ, ಸಾಮಾಜಿಕ ಮಾಧ್ಯಮ ಮತ್ತು ಇತರ ವೃತ್ತಿಗಳಿಗೂ ನುಸುಳಿದ್ದಾರೆ. ಆದ್ದರಿಂದ ಅವರು ಪರಾವಲಂಬಿಗಳು ಎಂದಿದ್ದೆ. ನನ್ನ ಮಾತುಗಳನ್ನು ಕೆಲ ಮಾಧ್ಯಮಗಳು ತಪ್ಪಾಗಿ ಅರ್ಥೈಸಿಕೊಂಡಿವೆ. ಇದರಿಂದ ನೋವಾಗಿದೆ’ ಎಂದರು.

==

ಲೀಕ್‌ ಆದ ಪ್ರಶ್ನೆಪತ್ರಿಕೆ ಆಫರ್‌ ನೀಡಿ ವಿದ್ಯಾರ್ಥಿಗೆ ಶಿಕ್ಷಕನ ಕೀಳು ಸಂದೇಶ


ಲಖನೌ: ಶಿಕ್ಷಕನೊಬ್ಬ ವಿದ್ಯಾರ್ಥಿನಿಗೆ ಲೀಕ್‌ ಮಾಡಲಾದ ಪ್ರಶ್ನೆಪತ್ರಿಕೆಯ ಆಮಿಷ ಒಡ್ಡಿ ಆಕೆಯನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಯತ್ನಿಸಿದ ಘಟನೆ ಲಖನೌ ವಿಶ್ವವಿದ್ಯಾಲಯದಲ್ಲಿ ನಡೆದಿದೆ. ಪ್ರಾಣಿಶಾಸ್ತ್ರ ಪ್ರಾಧ್ಯಾಪಕ ಪರಮ್ಜಿತ್ ಸಿಂಗ್‌ ಕರೆ ಮಾಡಿ, ‘ನನಗಾಗಿ ನಾನು 2 ಪ್ರಶ್ನೆಪತ್ರಿಕೆ ಪಡೆದಿದ್ದೇನೆ. ಪರೀಕ್ಷೆಗೂ ಮುನ್ನ, 7 ದಿನಗಳ ಒಳಗೆ ಬಾ’ ಎಂದ ಧ್ವನಿಮುದ್ರಣವನ್ನು ಬಿಎಸ್‌ಸಿ ವಿದ್ಯಾರ್ಥಿಯೊಬ್ಬಳು ವಿವಿಯ ಆಡಳಿತ ಮಂಡಳಿಗೆ ಸಲ್ಲಿಸಿದ್ದಾಳೆ. ಅದರಲ್ಲಿ ಆಕೆ, ‘ನಾನು ಎಲ್ಲವನ್ನೂ ಓದಿ ಆಗಿದೆ’ ಎನ್ನುವುದು, ತನ್ನನ್ನು ಭೇಟಿಯಾಗಲೇಬೇಕೆಂದು ಸಿಂಗ್‌ ಒತ್ತಾಯಿಸಿದಾಗ ಆಕೆ ಅನಿವಾರ್ಯವಾಗಿ, ‘ಸಾಧ್ಯವಾದರೆ ಬರುವೆ’ ಎನ್ನುವುದೂ ರೆಕಾರ್ಡ್‌ ಆಗಿದೆ. ಸದ್ಯ ಪ್ರಾಧ್ಯಾಪಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

==

₹2000 ಬಾಡಿಗೆ ಕಟ್ಟಲಾಗದೆ ಪತ್ನಿ, ಪುತ್ರಿ ಮೇಲೆ ರೇಪ್‌ಗೆ ಅವಕಾಶ!

ಗುಜರಾತ್‌ನಲ್ಲೊಂದು ಅಮಾನವೀಯ ಘಟನೆ

ಗಾಂಧಿನಗರ: ಗುಜರಾತಿನಲ್ಲಿ ವ್ಯಕ್ತಿಯೊಬ್ಬ 2000 ರು. ಮನೆ ಬಾಡಿಗೆ ಕಟ್ಟಲಾಗದೇ ತನ್ನ ಪತ್ನಿ, ಪುತ್ರಿಯನ್ನು ಮನೆ ಮಾಲೀಕನಿಗೆ ಲೈಂಗಿಕವಾಗಿ ಬಳಸಿಕೊಳ್ಳಲು ಅಡವಿಟ್ಟ ಆಘಾತಕಾರಿ ಘಟನೆ ನಡೆದಿದೆ. ಈ ಸಂಬಂಧ ಪಾಪಿ ತಂದೆ ಹಾಗೂ ಮನೆ ಮಾಲೀಕನ ಬಂಧನವಾಗಿದೆ.

ಇಲ್ಲಿನ ಸುರೇಂದ್ರನಗರದ ಕುಟುಂಬ 6 ತಿಂಗಳ ಹಿಂದಷ್ಟೇ ಮೊರ್ಬಿಗೆ ಸ್ಥಳಾಂತರವಾಗಿತ್ತು. ಆರ್ಥಿಕವಾಗಿ ತೀರಾ ಹಿಂದಿಳಿದಿದ್ದ ಕುಟುಂಬ ಕೆಲ ತಿಂಗಳಿನಿಂದ ಮನೆ ಬಾಡಿಗೆಯನ್ನೂ ಕಟ್ಟಿರಲಿಲ್ಲ. ಇದರಿಂದ ಪಾರಾಗಲೂ ಆತ ತನ್ನ ಪತ್ನಿ ಮತ್ತು ಮಗಳನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಮಾಲೀಕನ ಜತೆ ಒಪ್ಪಂದ ಮಾಡಿಕೊಂಡಿದ್ದಾನೆ. ಈ ವಿಚಾರ ತಿಳಿಯುತ್ತಿದ್ದಂತೆ ಆತನ ಅತ್ತೆ ಸ್ಥಳೀಯ ಠಾಣೆಯಲ್ಲಿ ದೂರು ದಾಖಲಿಸಿದ್ದು ತಂದೆ ಹಾಗೂ ಮಾಲೀಕನ ಬಂಧನವಾಗಿದೆ.

==

ಕಲ್ಲಂಗಡಿ ಸೇವಿಸಿ ವ್ಯಕ್ತಿ ಸಾವು, ಪುತ್ರ ಗಂಭೀರ: ದೇಶದಲ್ಲಿ 3ನೇ ಪ್ರಕರಣ

ಭೋಪಾಲ್‌: ಮಧ್ಯಪ್ರದೇಶದ ಇಂದ್ರಕುಮಾರ್‌ ಪರಿಹಾರ್‌ (43) ಎಂಬುವವರು ಕಲ್ಲಂಗಡಿ ತಿಂದ ಬಳಿಕ ಮೃತಪಟ್ಟು, ಅವರ ಪುತ್ರನ ಆರೋಗ್ಯ ಗಂಭೀರಸ್ಥಿತಿಗೆ ತಲುಪಿದೆ ಘಟನೆ ನಡೆದಿದೆ. ಪ್ರಕಾರ, ಗುರುವಾರ ರಾತ್ರಿ ಊಟವಾದ ಬಳಿಕ ತಂದೆ, ಮಗನಿಗೆ ಎದೆ ಹಾಗೂ ಹೊಟ್ಟೆ ಉರಿ ಕಾಣಿಸಿಕೊಂಡಿತು. ಅದರ ಶಮನಕ್ಕಾಗಿ ಶುಕ್ರವಾರ ಬೆಳಗ್ಗೆ ಕಲ್ಲಂಗಡಿ ಸೇವಿಸಿದ್ದರು. ಆದರೂ ಆರೋಗ್ಯ ಸುಧಾರಿಸದ ಕಾರಣ ಇಬ್ಬರನ್ನೂ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿಂದ ಬೇರೊಂದು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಇಂದ್ರಕುಮಾರ್‌ ಮೃತಪಟ್ಟಿದ್ದು, ಅವರ ಮರಣೋತ್ತರ ವರದಿ ಬರುವುದು ಬಾಕಿ ಇದೆ. ಇತ್ತ ಪುತ್ರನ ಸ್ಥಿತಿ ಗಂಭೀರವಾಗಿದೆಈ ಬಗ್ಗೆ ಮಾತನಾಡಿರುವ ವೈದ್ಯರು, ‘ವಾಂತಿ, ಅತಿಸಾರದಂತಹ ಲಕ್ಷಣಗಳು ಕಂಡುಬಂದಿಲ್ಲ. ಅಂತೆಯೇ ಅವರು ಕಲ್ಲಂಗಡಿ ಸೇವೆನೆಗೂ ಮುನ್ನವೇ ಅಸ್ವಸ್ಥರಾಗಿದ್ದರು. ಹಾಗಾಗಿ ಹಣ್ಣಿಂದಲೇ ಸಾವು ಸಂಭವಿಸಿದೆ ಎನ್ನಲಾಗದು’ ಎಂದು ಸ್ಪಷ್ಟನೆ ನೀಡಿದ್ದಾರೆ. ಇದು ಇತ್ತೀಚಿನ ದಿನಗಳಲ್ಲಿ ಕಲ್ಲಂಗಡಿ ಹಣ್ಣು ತಿಂದ ಬಳಿಕ ಜನರು ಸಾವನ್ನಪ್ಪಿದ ಮೂರನೇ ಘಟನೆಯಾಗಿದೆ. ಆದರೆ ಈ ಹಿಂದಿನ 2 ಘಟನೆಗಳಲ್ಲೂ ಸಾವಿಗೆ ಹಣ್ಣು ಕಾರಣವಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದರು.