ನವದೆಹಲಿ : ‘ಕೆಲವು ನಿರುದ್ಯೋಗಿ ಯುವಕರು ಜಿರಳೆಗಳ ರೀತಿ ವರ್ತಿಸುತ್ತಿದ್ದಾರೆ. ಅವರಲ್ಲಿ ಕೆಲವರು ಮಾಧ್ಯಮಗಳಲ್ಲಿ, ಇನ್ನು ಕೆಲವರು ಸಾಮಾಜಿಕ ಮಾಧ್ಯಮದಲ್ಲಿದ್ದರೆ, ಇನ್ನು ಕೆಲವರು ಆರ್‌ಟಿಐ ಕಾರ್ಯಕರ್ತರಾಗಿದ್ದಾರೆ’ ಎಂದು ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಶುಕ್ರವಾರ ಕಿಡಿಕಾರಿದ್ದಾರೆ.
ಹಿರಿಯ ವಕೀಲ ಸ್ಥಾನ ನೀಡಿಲ್ಲ ಎಂದು ಆರೋಪ
ವಕೀಲರೊಬ್ಬರು, ‘ನನಗೆ ದೆಹಲಿ ಹೈಕೋರ್ಟ್ ಹಿರಿಯ ವಕೀಲ ಸ್ಥಾನ ನೀಡಿಲ್ಲ. ಇದು ಸುಪ್ರೀಂಕೋರ್ಟ್‌ನ ಆದೇಶ ಉಲ್ಲಂಘನೆ ಹಾಗೂ ನ್ಯಾಯಾಂಗ ನಿಂದನೆ ಆಗುತ್ತದೆ’ ಎಂದು ಆರೋಪಿಸಿ ಸುಪ್ರೀಂ ಕೋರ್ಟ್ ಕದ ಬಡಿದಿದ್ದರು.
ಈ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ನ್ಯಾ. ಸೂರ್ಯಕಾಂತ್ ಹಾಗೂ ನ್ಯಾ। ಜಯಮಾಲ್ಯ ಬಾಗ್ಚಿ ಅವರ ಪೀಠ, ‘ನಿಮಗೆ ಗೌರವವಿಲ್ಲದಿದ್ದರೆ, ಬೇರೆಯವರು ಗೌರವ ಕೊಡಲಿ ಎಂದು ಏಕೆ ಬಯಸುತ್ತೀರಿ? ಈಗಾಗಲೇ ವ್ಯವಸ್ಥೆಯ ಮೇಲೆ ದಾಳಿ ಮಾಡುವ ಪರಾವಲಂಬಿಗಳು ಸಮಾಜದಲ್ಲಿ ಇದ್ದಾರೆ. ಉದ್ಯೋಗವಿಲ್ಲದ ಯುವಕರು ಜಿರಳೆಗಳ ರೀತಿ ವರ್ತಿಸುತ್ತಿದ್ದಾರೆ. ಅವರಲ್ಲಿ ಕೆಲವರು ಸಾಮಾಜಿಕ ಮಾಧ್ಯಮದಲ್ಲಿದ್ದರೆ, ಇನ್ನು ಕೆಲವರು ಆರ್‌ಟಿಐ ಕಾರ್ಯಕರ್ತರಾಗಿದ್ದಾರೆ. ಈಗ ನೀವು ಹೈಕೋರ್ಟ್ ಏನೂ ಕ್ರಮ ಕೈಗೊಂಡಿಲ್ಲ ಎಂಬ ಕಾರಣಕ್ಕೆ ನ್ಯಾಯಾಂಗ ನಿಂದನೆ ಅರ್ಜಿಗಳನ್ನು ಸಲ್ಲಿಸುತ್ತೀರಿ’ ಎಂದು ಕಿಡಿಕಾರಿತು.
‘ತಮ್ಮ ಪದವಿಯ ಬಗ್ಗೆ ಗಂಭೀರ ಅನುಮಾನ ಹೊಂದಿರುವ ಸಾವಿರಾರು ವಂಚಕರು ಕಪ್ಪು ನಿಲುವಂಗಿ ತೊಟ್ಟು ನಿಂತಿದ್ದಾರೆ. ಅವರಿಗೆ ಸಿಬಿಐ ಏನಾದರೂ ಮಾಡಬೇಕಿದೆ’ ಎನ್ನುವ ಮೂಲಕ ವಕೀಲಿ ವೃತ್ತಿಗೆ ನ್ಯಾಯ ಒದಗಿಸದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸಿಜೆಐ ಹೇಳಿದ್ದೇನು?
- ಕೆಲಸವಿಲ್ಲದ ಕೆಲವರು ಇಂದು ಆರ್‌ಟಿಐ ಕಾರ್ಯಕರ್ತರು
- ಕಪ್ಪು ನಿಲುವಂಗಿ ತೊಟ್ಟ ಸಾವಿರಾರು ವಂಚಕರಿದ್ದಾರೆ
- ಸೋಷಿಯಲ್ ಮೀಡಿಯಾ ದುರ್ಬಳಕೆ ಮಾಡುತ್ತಾರೆ
- ಇಂಥವರ ವಿರುದ್ಧ ಕ್ರಮ ಕೈಗೊಳ್ಳುವ ಅಗತ್ಯವಿದೆ
ಅಲ್ಲದೆ ಹಿರಿಯ ವಕೀಲ ಸ್ಥಾನಮಾನ ಕೋರಿದ ವಕೀಲನ ನಡವಳಿಕೆ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ನ್ಯಾಯಪೀಠ, ‘ಇಂಥ ಸ್ಥಾನಮಾನವನ್ನು ನ್ಯಾಯಾಲಯ ನೀಡಬೇಕೇ ಹೊರತೂ, ಆಕ್ರಮಣಕಾರಿ ಭಾಷೆಯಲ್ಲಿ ಕೇಳುವುದಲ್ಲ. ನಿಮಗೆ ಇದನ್ನು ಬಿಟ್ಟು ಸಲ್ಲಿಸುವುದಕ್ಕೆ ಬೇರೆ ಅರ್ಜಿ ಇರಲಿಲ್ಲವೇ?’ ಎಂದು ಪ್ರಶ್ನಿಸಿತು. ಜೊತೆಗೆ, ‘ಒಂದು ವೇಳೆ ದೆಹಲಿ ಹೈಕೋರ್ಟ್ ನಿಮಗೇನಾದರೂ ಹಿರಿಯ ವಕೀಲರ ಸ್ಥಾನಮಾನ ನೀಡಿದರೆ ಅದನ್ನು ತೆಗೆದು ಹಾಕುತ್ತೇವೆ’ ಎಂದು ಎಚ್ಚರಿಸಿತು.
ಫೇಸ್‌ಬುಕ್ ಪೋಸ್ಟ್‌ಗೆ ಕಿಡಿ:
ಜೊತೆಗೆ, ಅರ್ಜಿದಾರ ವಕೀಲ ಫೇಸ್ಬುಕ್‌ನಲ್ಲಿ ಮಾಡಿದ ಆಕ್ಷೇಪಾರ್ಹ ಪೋಸ್ಟ್‌ಗಳನ್ನು ಉಲ್ಲೇಖಿಸಿದ ಸಿಜೆಐ, ‘ಫೇಸ್ಬುಕ್‌ನಲ್ಲಿ ನೀವು ಯಾವ ರೀತಿಯ ಭಾಷೆ ಬಳಸಿದ್ದೀರಿ ಎಂಬುದು ಜನರಿಗೂ ತಿಳಿಯಲಿ. ವೃತ್ತಿಯಲ್ಲಿ ಶಿಸ್ತು ಎಂದರೆ ಏನು ಎಂಬುದನ್ನು ನಾನು ನಿಮಗೆ ತೋರಿಸುತ್ತೇನೆ’ ಎಂದು ಚಾಟಿ ಬೀಸಿದರು.
ಇದೇ ವೇಳೆ ಮಧ್ಯಪ್ರವೇಶಿಸಿದ ನ್ಯಾ. ಜೊಯ್‌ಮಲ್ಯ ಬಾಗ್ಚಿ, ‘ಹಿರಿಯ ವಕೀಲ ಎನ್ನುವ ಸ್ಥಾನಮಾನದ ಸಂಕೇತ ಇರುವುದು ಅಲಂಕಾರಕ್ಕಾಗಿಯೇ ಅಥವಾ ನ್ಯಾಯ ವ್ಯವಸ್ಥೆಯಲ್ಲಿ ನಿಮ್ಮ ಭಾಗವಹಿಸುವಿಕೆಗಾಗಿಯೇ?’ ಎಂದು ಕಟುವಾಗಿ ಪ್ರಶ್ನಿಸಿದರು.
