ಸಾರಾಂಶ
ನವದೆಹಲಿ: ಬದುಕುವ ಹಕ್ಕು ಹಾಗೂ ಸಮಾನತೆಯ ಹಕ್ಕಿನ ವ್ಯಾಪ್ತಿಯಲ್ಲಿ ಹವಾಮಾನ ಬದಲಾವಣೆ ವಿರುದ್ಧದ ಹಕ್ಕು ಕೂಡ ಸೇರಿದೆ ಎಂದು ಸುಪ್ರೀಂಕೋರ್ಟ್ ಮಹತ್ವದ ಆದೇಶ ನೀಡಿದೆ. ಈ ಆದೇಶವು ಹವಾಮಾನ ಬದಲಾವಣೆ ವಿರುದ್ಧದ ಹೋರಾಟಕ್ಕೆ ಕಾಯ್ದೆಯ ಬಲವನ್ನು ತುಂಬುವ ಸಾಧ್ಯತೆಯಿದೆ.
ರಾಜಸ್ಥಾನದಲ್ಲಿ ಅಳಿವಿನಂಚಿನಲ್ಲಿರುವ ಗ್ರೇಟ್ ಇಂಡಿಯನ್ ಬಸ್ಟರ್ಡ್ ಪಕ್ಷಿಯ ರಕ್ಷಣೆಗೆ ಸಂಬಂಧಿಸಿದ ಅರ್ಜಿಯೊಂದರ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಈ ಆದೇಶ ನೀಡಿದೆ. ಸಂವಿಧಾನದ 21 ಹಾಗೂ 14ನೇ ಪರಿಚ್ಛೇದದಲ್ಲಿ ಮೂಲಭೂತ ಹಕ್ಕುಗಳನ್ನು ಹೇಳಲಾಗಿದ್ದು, ಅದೇ ಸಾಲಿಗೆ ಹವಾಮಾನ ಬದಲಾವಣೆಯ ವಿರುದ್ಧದ ಹಕ್ಕೂ ಸೇರುತ್ತದೆ. ನಾನಾ ರೀತಿಯ ಮಾಲಿನ್ಯಗಳಿಂದ ಆರೋಗ್ಯದ ಹಕ್ಕಿನ ಉಲ್ಲಂಘನೆಯಾಗುತ್ತಿದೆ. ತಾಪಮಾನ ಏರಿಕೆ, ಬರಗಾಲ, ಆಹಾರದ ಕೊರತೆ, ಬೆಳೆ ವೈಫಲ್ಯ, ಪ್ರವಾಹ ಮುಂತಾದವುಗಳಿಂದಲೂ ಬದುಕುವ ಹಕ್ಕಿನ ಉಲ್ಲಂಘನೆಯಾಗುತ್ತಿದೆ ಎಂದು ಸುಪ್ರೀಂಕೋರ್ಟ್ ವ್ಯಾಖ್ಯಾನಿಸಿದೆ.
ಆದೇಶದ ಪರಿಣಾಮ ಏನು?: ಈ ಆದೇಶದೊಂದಿಗೆ, ಹವಾಮಾನ ಬದಲಾವಣೆ ಹಾಗೂ ತಾಪಮಾನ ಏರಿಕೆಯ ವಿರುದ್ಧ ಸರ್ಕಾರಗಳು ಏನು ಕ್ರಮಗಳನ್ನು ಕೈಗೊಳ್ಳುತ್ತಿವೆಯೋ ಅವುಗಳನ್ನುಜನರು ಇನ್ನುಮುಂದೆ ತಮ್ಮ ಹಕ್ಕಿನ ರೀತಿಯಲ್ಲಿ ಪ್ರಶ್ನಿಸಬಹುದಾಗಿದೆ.