ಕುಡಿಯುವ ನೀರು, ನೀರಾವರಿ ಹಾಗೂ ಬರ ಪರಿಹಾರದ ಅಗತ್ಯಗಳನ್ನು ಈಡೇರಿಸಲು ಅನುಕೂಲವಾಗುವಂತೆ ಮೇಕೆದಾಟು, ಭದ್ರಾ ಮೇಲ್ದಂಡೆ ಸೇರಿ ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳಿಗೆ ಬಾಕಿ ಇರುವ ಅನುಮತಿಗಳನ್ನು ಶೀಘ್ರವೇ ದೊರಕಿಸಿಕೊಡಲು ಮಧ್ಯಸ್ಥಿಕೆ ವಹಿಸುವಂತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕೇಂದ್ರ ಸರ್ಕಾರಕ್ಕೆ ಮನವಿ
ನವದೆಹಲಿ : ಕುಡಿಯುವ ನೀರು, ನೀರಾವರಿ ಹಾಗೂ ಬರ ಪರಿಹಾರದ ಅಗತ್ಯಗಳನ್ನು ಈಡೇರಿಸಲು ಅನುಕೂಲವಾಗುವಂತೆ ಮೇಕೆದಾಟು, ಭದ್ರಾ ಮೇಲ್ದಂಡೆ ಸೇರಿ ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳಿಗೆ ಬಾಕಿ ಇರುವ ಅನುಮತಿಗಳನ್ನು ಶೀಘ್ರವೇ ದೊರಕಿಸಿಕೊಡಲು ಮಧ್ಯಸ್ಥಿಕೆ ವಹಿಸುವಂತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ದೆಹಲಿಯಲ್ಲಿ ಸೋಮವಾರ ಕೇಂದ್ರ ಜಲಶಕ್ತಿ ಸಚಿವ ಸಿ.ಆರ್.ಪಾಟೀಲ್ ಅವರನ್ನು ಭೇಟಿಯಾದ ಡಿ.ಕೆ.ಶಿವಕುಮಾರ್, ರಾಜ್ಯದ ವಿವಿಧ ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ಕೇಂದ್ರದ ಮಧ್ಯಸ್ಥಿಕೆ ಹಾಗೂ ಅಗತ್ಯ ಅನುಮತಿಗಳನ್ನು ಕೋರಿ ಮನವಿ ಸಲ್ಲಿಸಿದರು. ಇದೇ ವೇಳೆ, ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿಯಾದ ಡಿಕೆಶಿ, ಬೆಂಗಳೂರಿನ 7 ಅಭಿವೃದ್ಧಿ ಯೋಜನೆಗಳಿಗೆ ರಕ್ಷಣಾ ಇಲಾಖೆಯ ಜಾಗ ಹಾಗೂ ಅನುಮತಿ ನೀಡಬೇಕು ಎಂದು ಮನವಿ ಮಾಡಿದರು.
1. ಮೇಕೆದಾಟು ಡಿಪಿಆರ್‌ಗೆ ಶೀಘ್ರ ಅನುಮೋದನೆ ಕೊಡಿ:
ಮೇಕೆದಾಟು ಸಮತೋಲನ ಜಲಾಶಯ ಮತ್ತು ಕುಡಿಯುವ ನೀರಿನ ಯೋಜನೆಗೆ ರಾಜ್ಯ ಸರ್ಕಾರ 16,745 ಕೋಟಿ ರು. ವೆಚ್ಚದ ಡಿಪಿಆರ್ ಸಲ್ಲಿಸಿದೆ. ಯೋಜನೆಗೆ ಯಾವುದೇ ಕಾನೂನು ಅಥವಾ ಇತರ ಅಡೆತಡೆಗಳಿಲ್ಲ. ಹೀಗಾಗಿ, ಡಿಪಿಆರ್ ಪರಿಶೀಲನೆ ಹಾಗೂ ಅನುಮೋದನೆ ಪ್ರಕ್ರಿಯೆಯನ್ನು ವೇಗಗೊಳಿಸಲು ಕೇಂದ್ರ ಜಲ ಆಯೋಗಕ್ಕೆ ನಿರ್ದೇಶನ ನೀಡಿ ಎಂದು ಡಿಕೆಶಿ ಅವರು ಜಲಶಕ್ತಿ ಸಚಿವರನ್ನು ಕೋರಿದ್ದಾರೆ.
2. ಕೃಷ್ಣಾ ನ್ಯಾಯಾಧಿಕರಣ ತೀರ್ಪಿನ ಅಧಿಸೂಚನೆ
ಕೃಷ್ಣಾ ಮೇಲ್ದಂಡೆ ಯೋಜನೆ (ಯುಕೆಪಿ) ಜಾರಿಗೆ ಕೃಷ್ಣಾ ಜಲ ವಿವಾದ ನ್ಯಾಯಾಧಿಕರಣ-2ರ ತೀರ್ಪಿನ ಅಧಿಸೂಚನೆ ಬಾಕಿ ಇರುವುದರಿಂದ ರಾಜ್ಯದ ನೀರಾವರಿ ಯೋಜನೆಗಳ ಮೇಲೆ ಪರಿಣಾಮ ಬೀರಿದೆ. ಈ ಪ್ರಕರಣ ಸುಪ್ರೀಂಕೋರ್ಟ್‌ನ ಪರಿಶೀಲನೆಯಲ್ಲಿರುವ ಹಿನ್ನೆಲೆಯಲ್ಲಿ, ಅಧಿಸೂಚನೆ ಹೊರಡಿಸುವ ಸಂಬಂಧ ಜಲಶಕ್ತಿ ಸಚಿವಾಲಯವು ಸುಪ್ರೀಂಕೋರ್ಟ್‌ಗೆ ತುರ್ತು ಮಧ್ಯಂತರ ಅರ್ಜಿ ಸಲ್ಲಿಸಬೇಕು. ಅಧಿಸೂಚನೆ ಹೊರಬಂದರೆ ಕರ್ನಾಟಕಕ್ಕೆ ಹಂಚಿಕೆಯಾಗಿರುವ ನೀರಿನ ಪಾಲನ್ನು ಬಳಸಿಕೊಳ್ಳಲು ಹಾಗೂ ಸಂಬಂಧಿತ ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಅನುಕೂಲವಾಗಲಿದೆ ಎಂದು ಅವರು ಮನವಿ ಮಾಡಿದರು.
3. ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ:
21,167.93 ಕೋಟಿ ರು. ಅಂದಾಜು ವೆಚ್ಚದ ಭದ್ರಾ ಮೇಲ್ದಂಡೆ ಯೋಜನೆಯನ್ನು ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ (ಪಿಎಂಕೆಎಸ್‌ವೈ) ಅಡಿಯಲ್ಲಿ ಸೇರಿಸಲು 16ನೇ ಹಣಕಾಸು ಆಯೋಗಕ್ಕೆ ಶಿಫಾರಸ್ಸು ಮಾಡಬೇಕು ಹಾಗೂ 2023-24ರ ಕೇಂದ್ರ ಬಜೆಟ್‌ನಲ್ಲಿ ಘೋಷಿಸಲಾಗಿರುವ ಅನುದಾನವನ್ನು ಶೀಘ್ರ ಬಿಡುಗಡೆ ಮಾಡಬೇಕು ಎಂದು ಕೋರಿದರು.
4. ಪ್ರವಾಹ ನಿಯಂತ್ರಣ ಯೋಜನೆ
ಪಿಎಂಕೆಎಸ್‌ವೈ ಹಾಗೂ ಪ್ರವಾಹ ನಿರ್ವಹಣೆ ಮತ್ತು ಗಡಿ ಪ್ರದೇಶಗಳ ಕಾರ್ಯಕ್ರಮದಡಿ ಕರ್ನಾಟಕ ಸಲ್ಲಿಸಿರುವ ವಿವಿಧ ನೀರಾವರಿ ಅಭಿವೃದ್ಧಿ, ಆಧುನೀಕರಣ, ಪ್ರವಾಹ ನಿಯಂತ್ರಣ ಮತ್ತು ಜಲ ನಿರ್ವಹಣಾ ಯೋಜನೆಗಳನ್ನು ಶೀಘ್ರ ಪರಿಶೀಲಿಸಿ, ಅಗತ್ಯ ಅನುಮತಿ ನೀಡಲು ಕೇಂದ್ರ ಜಲ ಆಯೋಗದ ಅಧಿಕಾರಿಗಳಿಗೆ ನಿರ್ದೇಶನ ನೀಡಿ ಎಂದು ಸಚಿವರಿಗೆ ಮನವಿ ಮಾಡಿದ್ದಾರೆ.
5. ಗೋದಾವರಿ-ಕಾವೇರಿ, ಬೇಡ್ತಿ-ವರದಾ ನದಿ ಜೋಡಣೆ
ಗೋದಾವರಿ-ಕಾವೇರಿ ಹಾಗೂ ಬೇಡ್ತಿ-ವರದಾ (ಹಿರೆವಡ್ಡಟ್ಟಿ) ನದಿಗಳ ಜೋಡಣೆ ಯೋಜನೆಗಳಿಗೆ ಸಂಬಂಧಿಸಿದ ಒಪ್ಪಂದದ ಜ್ಞಾಪಕ ಪತ್ರಕ್ಕೆ ಸಹಿ ಹಾಕಲು 2026ರ ಸೆಪ್ಟೆಂಬರ್ 3ರಂದು ರಾಜ್ಯ ಸರ್ಕಾರ ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆಗೆ ತಾತ್ವಿಕ ಒಪ್ಪಿಗೆ ನೀಡಿದೆ. ಈ ಸಂಬಂಧ ಫಲಾನುಭವಿ ರಾಜ್ಯಗಳಿಗೆ ಪ್ರಸ್ತಾಪಿಸಿರುವ ನೀರಿನ ಹಂಚಿಕೆಯನ್ನು ಮರುಪರಿಶೀಲಿಸಬೇಕು ಎಂದು ಅವರು ಒತ್ತಾಯಿಸಿದರು.
ಜೊತೆಗೆ, ಕೃಷ್ಣಾ ಮತ್ತು ಕಾವೇರಿ ಜಲಾನಯನ ಪ್ರದೇಶಗಳಲ್ಲಿನ ಕರ್ನಾಟಕದ ಅಗತ್ಯತೆ ಹಾಗೂ ಹಿತಾಸಕ್ತಿಗಳನ್ನು ಪರಿಗಣಿಸಿ ರಾಜ್ಯಕ್ಕೂ ಸಮಾನ ಪಾಲು ದೊರೆಯುವಂತೆ ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆಗೆ ನಿರ್ದೇಶನ ನೀಡಬೇಕು ಎಂದು ಅವರು ಮನವಿ ಮಾಡಿದರು.
ಪಂಚ ಜಲ ಬೇಡಿಕೆಗಳು
1. ಮೇಕೆದಾಟು ಅಣೆಕಟ್ಟೆ ಯೋಜನೆಗೆ ಯಾವುದೇ ಅಡ್ಡಿ ಇಲ್ಲ. ರಾಜ್ಯದ ಡಿಪಿಆರ್ ಅನ್ನು ಪರಿಶೀಲಿಸಿ, ಬೇಗನೆ ಅನುಮೋದನೆ ನೀಡಬೇಕು
2. ಕೃಷ್ಣಾ ನ್ಯಾಯಾಧಿಕರಣ-2ರ ಐತೀರ್ಪಿನ ಅಧಿಸೂಚನೆ ಬಾಕಿ ಇದೆ. ಈ ಸಂಬಂಧ ಸುಪ್ರೀಂಗೆ ಅರ್ಜಿ ಸಲ್ಲಿಸಿ ನಮ್ಮ ನೀರು ಬಳಕೆಗೆ ನೆರವಾಗಬೇಕು
3. ಭದ್ರಾ ಮೇಲ್ದಂಡೆಯನ್ನು ಪ್ರಧಾನಿ ಕೃಷಿ ಸಿಂಚಾಯಿ ಯೋಜನೆಗೆ ಸೇರಿಸಬೇಕು. 2023ರ ಬಜೆಟ್‌ನಲ್ಲಿ ಘೋಷಿಸಿದ್ದ ಅನುದಾನ ಬಿಡುಗಡೆ ಮಾಡಬೇಕು
4. ನೀರಾವರಿ ಅಭಿವೃದ್ಧಿ, ಆಧುನೀಕರಣ, ಪ್ರವಾಹ ನಿಯಂತ್ರಣ, ಜಲನಿರ್ವಹಣಾ ಯೋಜನೆಗಳನ್ನು ಶೀಘ್ರ ಪರಿಶೀಲಿಸಿ ಅಗತ್ಯ ಅನುಮತಿ ನೀಡಬೇಕು
5. ಗೋದಾವರಿ- ಕಾವೇರಿ, ಬೇಡ್ತಿ- ವರದಾ ನದಿ ಜೋಡಣೆಗೆ ರಾಜ್ಯ ತಾತ್ವಿಕ ಒಪ್ಪಿಗೆ ನೀಡಿದೆ. ಫಲಾನುಭವಿಗಳ ರಾಜ್ಯಗಳ ನೀರು ಹಂಚಿಕೆ ಮರುಪರಿಶೀಲಿಸಬೇಕು
ಕರ್ನಾಟಕ, ಗೋವಾ, ಮಹಾರಾಷ್ಟ್ರ ನಡುವೆ ಮಹದಾಯಿ ಸಭೆ?
ಮಹದಾಯಿ ಮತ್ತು ಅರಣ್ಯ ವಿಚಾರಕ್ಕೆ ಸಂಬಂಧಿಸಿದಂತೆ ಜಂಟಿ ಸಭೆಯನ್ನು ಕೈಗೊಳ್ಳುವುದಾಗಿ ಕೇಂದ್ರ ಜಲ ಸಂಪನ್ಮೂಲ ಸಚಿವರು ಭರವಸೆ ನೀಡಿದ್ದಾರೆ. ಯೋಜನೆಗೆ ಸಂಬಂಧಿಸಿದಂತೆ ಅಕ್ಕ ಪಕ್ಕದ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾಹಿತಿ ನೀಡಿದರು.
ರಾಜ್ಯದ ಬೇಡಿಕೆಗಳಿಗೆ ಸಕಾರಾತ್ಮಕ ಸ್ಪಂದನೆ
ಕೃಷ್ಣಾ, ಮೇಕೆದಾಟು ಸೇರಿದಂತೆ ಇತರೆ ಜಲವಿವಾದಗಳ ಕುರಿತು ಕೇಂದ್ರ ಜಲಶಕ್ತಿ ಸಚಿವ ಸಿ.ಆರ್.ಪಾಟೀಲ್ ಅವರೊಂದಿಗೆ ಚರ್ಚಿಸಿದ್ದೇನೆ. ರಾಜ್ಯದ ನೀರಾವರಿ ಯೋಜನೆಗಳಿಗೆ ಕೇಂದ್ರದ ಮಧ್ಯಸ್ಥಿಕೆ ವಹಿಸಿ ಸಹಕರಿಸಲು ಮನವಿ ಮಾಡಲಾಗಿದೆ. ಸಚಿವರು ಸಕಾರಾತ್ಮಕ ಸ್ಪಂದಿಸಿದ್ದಾರೆ. ರಾಜ್ಯದ ಯೋಜನೆಗಳಿಗೆ ಬರಬೇಕಾದ ಅನುದಾನಗಳ ಬಗ್ಗೆ ಮನವಿ ಮಾಡಲಾಗಿದೆ.
- ಡಿ.ಕೆ.ಶಿವಕುಮಾರ್, ಮುಖ್ಯಮಂತ್ರಿ
