ತಮಿಳುನಾಡು ಮುಖ್ಯಮಂತ್ರಿ ಹುದ್ದೆ : ನಟ ವಿಜಯ್‌ ಫೇವರಿಟ್‌ ನಂ. 2, ಅಣ್ಣಾಮಲೈ ನಂ. 4

| N/A | Published : Mar 29 2025, 12:38 AM IST / Updated: Mar 29 2025, 05:31 AM IST

ಸಾರಾಂಶ

ತಮಿಳುನಾಡು ಮುಖ್ಯಮಂತ್ರಿ ಹುದ್ದೆಗೆ ಎಂ.ಕೆ. ಸ್ಟಾಲಿನ್ ಅತ್ಯಂತ ಆದ್ಯತೆಯ ಆಯ್ಕೆಯಾಗಿದ್ದು, ಶೇ. 27 ರಷ್ಟು ಜನರು ಅವರ ಪರವಾಗಿದ್ದಾರೆ.

ಚೆನ್ನೈ : ತಮಿಳುನಾಡು ಮುಖ್ಯಮಂತ್ರಿ ಹುದ್ದೆಗೆ ಎಂ.ಕೆ. ಸ್ಟಾಲಿನ್ ಅತ್ಯಂತ ಆದ್ಯತೆಯ ಆಯ್ಕೆಯಾಗಿದ್ದು, ಶೇ. 27 ರಷ್ಟು ಜನರು ಅವರ ಪರವಾಗಿದ್ದಾರೆ. ಸಿವೋಟರ್ ಸಮೀಕ್ಷೆಯ ಪ್ರಕಾರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ ವಿಜಯ್, ಶೇ. 18 ರಷ್ಟು ಮತಗಳೊಂದಿಗೆ ಸ್ಟಾಲಿನ್ ಅವರ ಹಿಂದೆ ಇದ್ದಾರೆ. ವಿರೋಧ ಪಕ್ಷದ ನಾಯಕ ಮತ್ತು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ ಪಳನಿಸ್ವಾಮಿ ಶೇ.10 ರಷ್ಟು ಬೆಂಬಲದೊಂದಿಗೆ ಮೂರನೇ ಸ್ಥಾನದಲ್ಲಿದ್ದರೆ, ತಮಿಳುನಾಡು ಬಿಜೆಪಿ ಮುಖ್ಯಸ್ಥ ಕೆ ಅಣ್ಣಾಮಲೈ ಶೇ.9ರಷ್ಟು ಬೆಂಬಲ ಪಡೆದು 4ನೇ ಸ್ಥಾನದಲ್ಲಿದ್ದಾರೆ.

ಏ.3ರಿಂದ 4 ದಿನ ಮೋದಿ ಥಾಯ್ಲೆಂಡ್, ಶ್ರೀಲಂಕಾ ಪ್ರವಾಸ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಏ.3ರಿಂದ 6ರವರೆಗೆ ಥಾಯ್ಲೆಂಡ್‌ ಮತ್ತು ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದ್ದಾರೆ.ಭಾರತ ಇತ್ತೀಚೆಗೆ ಘೋಷಿಸಿದ ‘ಮಹಾಸಾಗರ’ ನೀತಿಯಡಿ ಪ್ರಾದೇಶಿಕ ಸಹಕಾರವನ್ನು ಹೆಚ್ಚಿಸುವ ಮತ್ತು ಇಂಡೋ-ಪೆಸಿಫಿಕ್ ಸಂಬಂಧವನ್ನು ವೃದ್ಧಿಸುವ ಉದ್ದೇಶದಿಂದ ಈ ಭೇಟಿ ನಡೆಯಲಿದೆ. ಎಂದು ಭಾರತದ ವಿದೇಶಾಂಗ ಸಚಿವಾಲಯ ಹೇಳಿದೆ.

‘ಪ್ರಧಾನಿ ಏ.3 ಮತ್ತು 4ಕ್ಕೆ ಬ್ಯಾಂಕಾಕ್‌ಗೆ ಭೇಟಿ ನೀಡಿ ಥಾಯ್ಲೆಂಡ್‌ ಆಯೋಜಿಸಿರುವ ಬಿಮ್‌ಸ್ಟೆಕ್ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಇದು ಅವರ 3ನೇ ಥಾಯ್ಲೆಂಡ್‌ ಭೇಟಿಯಾಗಲಿದೆ. ಆ ಬಳಿಕ ಏ.5 ಹಾಗೂ 6ರಂದು ಶ್ರೀಲಂಕಾಕ್ಕೆ ಭೇಟಿ ನೀಡಲಿದ್ದಾರೆ. ಪೌರ್ವಾತ್ಯ ದೇಶಗಳೊಂದಿಗೆ ಸಂಬಂಧ ವೃದ್ಧಿಸಲು ಮತ್ತು ಇಂಡೋ-ಪೆಸಿಫಿಕ್ ನೀತಿಗೆ ಬಲ ತುಂಬಲು ಭಾರತದ ಬದ್ಧತೆಯನ್ನು ಇದು ಎತ್ತಿ ತೋರಿಸುತ್ತದೆ’ ಎಂದು ಅದು ಮಾಹಿತಿ ನೀಡಿದೆ.

ತಮಿಳ್ನಾಡು ಜತೆ ಎಚ್ಚರಿಕೆಯಿಂದ ವರ್ತಿಸಿ: ಮೋದಿಗೆ ವಿಜಯ್ ಎಚ್ಚರಿಕೆ

ಚೆನ್ನೈ: ಕೇಂದ್ರ ಸರ್ಕಾರ ಪ್ರಸ್ತಾವಿಸಿರುವ ಒಂದು ದೇಶ-ಒಂದು ಚುನಾವಣೆ ವಿರೋಧಿಸಿ ನಟ, ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಮುಖ್ಯಸ್ಥ ವಿಜಯ್ ಪ್ರಧಾನಿ ನರೇಂದ್ರ ಮೋದಿಯವರಿಗೆ ಸವಾಲೆಸೆದಿದ್ದಾರೆ. ಅಲ್ಲದೆ, ಮುಂದಿನ ಚುನಾವಣೆಯಲ್ಲಿ ಡಿಎಂಕೆ ಹಾಗೂ ಟಿವಿಕೆ ನಡುವೆ ನೇರಾನೇರ ಹಣಾಹಣಿ ನಡೆಯಲಿದೆ ಎಂದು ಹೇಳಿದ್ದಾರೆ.ತಿರುವಣಮಿಯೂರ್‌ನಲ್ಲಿ ನಡೆದ ಟಿವಿಕೆ ಪಕ್ಷದ ಮೊದಲ ಸಾಮಾನ್ಯ ಮಂಡಳಿ ಸಭೆಯಲ್ಲಿ ಮಾತನಾಡಿದ ಅವರು, ‘ಪ್ರಧಾನಿಗಳೇ, ನೀವು ಒಂದು ದೇಶ-ಒಂದು ಚುನಾವಣೆ ಬಗ್ಗೆ ಮಾತಾಡುತ್ತೀರೆಂದರೆ, ನಿಮ್ಮ ಯೋಜನೆ ನಮಗೆ ಅರ್ಥವಾಗುತ್ತದೆ. ತಮಿಳುನಾಡಿನೊಂದಿಗೆ ಎಚ್ಚರಿಕೆಯಿಂದ ವರ್ತಿಸಿ. ಹಲವು ಬಾರಿ ತಮಿಳುನಾಡು ತನ್ನ ಶಕ್ತಿಯನ್ನು ತೋರಿಸಿದೆ. ಹಾಗಾಗಿ ಹುಷಾರಾಗಿರಿ ಎಂದು ಹೇಳುತ್ತೇನೆ’ ಎಂದರು.

ಕೌಂಟರ್‌ ರೈಲು ಟಿಕೆಟ್‌ ಆನ್‌ಲೈನ್‌ನಲ್ಲೇ ರದ್ದು ಸಾಧ್ಯ: ರೈಲ್ವೆ ಸಚಿವ

ನವದೆಹಲಿ: ರೈಲ್ವೆ ಟಿಕೆಟ್ ಕೌಂಟರ್‌ನಿಂದ ಭೌತಿಕ ಟಿಕೆಟ್ ಖರೀದಿಸಿದ ಪ್ರಯಾಣಿಕರು ಐಆರ್‌ಸಿಟಿಸಿ ವೆಬ್‌ಸೈಟ್ ಅಥವಾ 1 39 ಸಹಾಯವಾಣಿ ಮೂಲಕ ಆನ್‌ಲೈನ್‌ನಲ್ಲಿ ಅದನ್ನು ರದ್ದುಗೊಳಿಸಬಹುದು, ಆದರೆ ಮೊತ್ತವನ್ನು ಪಡೆಯಲು ರಿಸರ್ವೇಶನ್‌ ಕೌಂಟರ್‌ಗೆ ಭೇಟಿ ನೀಡಬೇಕು ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಶುಕ್ರವಾರ ಹೇಳಿದ್ದಾರೆ. ‘ಕೌಂಟರ್‌ ಟಿಕೆಟ್‌ಗಳನ್ನು ಖರೀದಿಸಿದ ಪ್ರಯಾಣಿಕರು ಟಿಕೆಟ್‌ ರದ್ದು ಮಾಡಲು ಕೌಂಟರ್‌ಗೇ ಹೋಗಬೇಕೇ‘ ಎಂದು ಬಿಜೆಪಿ ಸಂಸದೆ ಮೇಧಾ ವಿಶ್ರಾಮ್ ಕುಲಕರ್ಣಿ ಕೇಳಿದ ಪ್ರಶ್ನೆಗೆ ಸಚಿವರು ಈ ಉತ್ತರ ನೀಡಿದ್ದಾರೆ.

ಒಂದೇ ಸಿರಿಂಜ್‌ನಿಂದ ಡ್ರಗ್ಸ್ ಪಡೆದ ಕೇರಳದ 10 ಮಂದಿಗೆ ಹೆಚ್‌ಐವಿ

ಮಲಪ್ಪುರಂ: ಒಂದೇ ಸಿರಿಂಜ್ ಬಳಸಿಕೊಂಡು ದೇಹಕ್ಕೆ ಡ್ರಗ್ಸ್ ಇಂಜೆಕ್ಟ್‌ ಮಾಡಿಕೊಂಡ ಕೇರಳದ ಮಲಪ್ಪುರಂ ಜಿಲ್ಲೆಯ ವಳಂಚೇರಿಯ 10 ಮಂದಿಗೆ ಹೆಚ್‌ಐವಿ ಸೋಂಕು ದೃಢಪಟ್ಟಿದೆ. ಅವರಲ್ಲಿ ಮೂವರು ವಲಸೆ ಕಾರ್ಮಿಕರಾಗಿದ್ದಾರೆ.ರಾಜ್ಯದಲ್ಲಿ ನಡೆಯುತ್ತಿರುವ ಮಾದಕ ದ್ರವ್ಯ ವಿರೋಧಿ ಅಭಿಯಾನದ ಭಾಗವಾಗಿ, ಆರೋಗ್ಯಾಧಿಕಾರಿಗಳು ತಪಾಸಣೆ ನಡೆಸಿದ ವೇಳೆ ವಿಷಯ ಬೆಳಕಿಗೆ ಬಂದಿದೆ.

‘ಕೇರಳ ಏಡ್ಸ್ ನಿಯಂತ್ರಣ ಸೊಸೈಟಿ ವತಿಯಿಂದ ಲೈಂಗಿಕ ಕಾರ್ಯಕರ್ತರು ಮತ್ತು ಇಂಜೆಕ್ಷನ್ ಮಾದಕವಸ್ತು ಬಳಕೆದಾರರು (ಐಡಿಯುಗಳು) ಸೇರಿದಂತೆ ಅಪಾಯದಲ್ಲಿರುವ ವ್ಯಕ್ತಿಗಳ ತಪಾಸಣೆ ನಡೆಸುತ್ತಿದ್ದೇವೆ. ಸ್ಕ್ರೀನಿಂಗ್‌ ನಡೆಸಿದಾಗ ಮೊದಲು ಒಬ್ಬ ವ್ಯಕ್ತಿಗೆ ಸೋಂಕು ಇರುವುದು ದೃಢಪಟ್ಟಿತು. ಆತ ಬಳಸಿದ ಸಿರಿಂಜ್‌ ಉಪಯೋಗಿಸಿದ ಇತರರನ್ನು ಹುಡುಕಿದಾಗ ಅವರಲ್ಲೂ ಸೋಂಕು ಪತ್ತೆಯಾಯಿತು. ಇವರಿಗೆಲ್ಲ ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ಜಿಲ್ಲಾ ವೈದ್ಯಾಧಿಕಾರಿ ಎಂ. ರೇಣುಕಾ ತಿಳಿಸಿದ್ದಾರೆ.