ಜರ್ಮನಿಯ ಸರ್ವಾಧಿಕಾರಿ ಅಡಾಲ್ಫ್‌ ಹಿಟ್ಲರ್‌ನಿಂದ ಪ್ರೇರಿತವಾಗಿ ಹೈದರಾಬಾದ್‌ ವಿಪತ್ತು ಪ್ರತಿಕ್ರಿಯೆ ಮತ್ತು ಆಸ್ತಿ ಸಂರಕ್ಷಣಾ ಸಂಸ್ಥೆಗೆ ಹೈಡ್ರಾ ಎಂಬ ಹೆಸರಿಟ್ಟಿದ್ದೇನೆ ಎಂದು ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್‌ ರೆಡ್ಡಿ ಶನಿವಾರ ಹೇಳಿಕೆ ನೀಡಿದ್ದಾರೆ. ಇದು ಭಾರಿ ರಾಜಕೀಯ ವಿವಾದಕ್ಕೆ ಕಾರಣವಾಗಿದೆ.

- ಹಿಟ್ಲರ್ ನೆಚ್ಚಿನ ಪದ ಹೈಡ್ರಾ, ಆತನ ತಂಡದ ಹೆಸರೂ ಹೈಡ್ರಾ

- ಅದಕ್ಕೇ ನಾನು ಹೈಡ್ರಾ ಹೆಸರಿನ ಪ್ರಾಧಿಕಾರ ಸ್ಥಾಪಿಸಿದೆ

- ಅದರ ಗುರಿ ಹೈದರಾಬಾದ್‌ನಲ್ಲಿನ ಅತಿಕ್ರಮಣ ತೆರವು

-ಬೆಂಗಳೂರಿನಲ್ಲಿ ತೆಲಂಗಾಣ ಮುಖ್ಯಮಂತ್ರಿ ಹೇಳಿಕೆ

- ರೇವಂತ್‌ ಹೊಸ ಹಿಟ್ಲರ್‌: ಬಿಆರ್‌ಎಸ್‌, ಬಿಜೆಪಿ ಕಿಡಿಪಿಟಿಐ ಹೈದರಾಬಾದ್‌

ಜರ್ಮನಿಯ ಸರ್ವಾಧಿಕಾರಿ ಅಡಾಲ್ಫ್‌ ಹಿಟ್ಲರ್‌ನಿಂದ ಪ್ರೇರಿತವಾಗಿ ಹೈದರಾಬಾದ್‌ ವಿಪತ್ತು ಪ್ರತಿಕ್ರಿಯೆ ಮತ್ತು ಆಸ್ತಿ ಸಂರಕ್ಷಣಾ ಸಂಸ್ಥೆಗೆ ಹೈಡ್ರಾ ಎಂಬ ಹೆಸರಿಟ್ಟಿದ್ದೇನೆ ಎಂದು ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್‌ ರೆಡ್ಡಿ ಶನಿವಾರ ಹೇಳಿಕೆ ನೀಡಿದ್ದಾರೆ. ಇದು ಭಾರಿ ರಾಜಕೀಯ ವಿವಾದಕ್ಕೆ ಕಾರಣವಾಗಿದೆ.

ಬೆಂಗಳೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘ಇತ್ತೀಚಿನ ದಿನಗಳಲ್ಲಿ, ಶ್ರೀಮಂತರು ತಮ್ಮ ತೋಟದ ಮನೆಗಳಿಗಾಗಿ ಜಲಮೂಲಗಳನ್ನು ಅತಿಕ್ರಮಿಸುತ್ತಿದ್ದಾರೆ. ತಮ್ಮ ಒಳಚರಂಡಿಯನ್ನು ಜಲಮೂಲಗಳಿಗೆ ಜೋಡಿಸುತ್ತಿದ್ದಾರೆ. ಈ ಎಲ್ಲಾ ಸಮಸ್ಯೆಗಳನ್ನು ನಾನು ಗಮನಿಸಿದ್ದೇನೆ. ಹೀಗಾಗಿ ಇಂಥ ಒತ್ತುವರಿ ತೆರವಿಗೆ ನಾನು ಸ್ಥಾಪಿಸಿದ ಕಾರ್ಯಪಡೆಯೇ ‘ಹೈಡ್ರಾ’ (ಹೈದರಾಬಾದ್‌ ವಿಪತ್ತು ಪ್ರತಿಕ್ರಿಯೆ ಮತ್ತು ಆಸ್ತಿ ಸಂರಕ್ಷಣಾ ಸಂಸ್ಥೆ). ಹೈಡ್ರಾ ಎಂಬುದು ಹಿಟ್ಲರ್‌ನ ನೆಚ್ಚಿನ ಪದ. ಆತನ ಕೋರ್ ತಂಡದ ಹೆಸರು ಹೈಡ್ರಾ. ಅವರು ಯಾರನ್ನಾದರೂ ಹತ್ಯೆ ಮಾಡುವ ಸಾಮರ್ಥ್ಯ ಹೊಂದಿದ್ದರು. ನಾನು ಹಿಟ್ಲರ್‌ನಿಂದ ಸ್ಫೂರ್ತಿ ಪಡೆದು ಹೈಡ್ರಾ ಎಂದು ಹೆಸರಿಟ್ಟಿದ್ದೇನೆ’ ಎಂದರು. ಬಿಆರ್‌ಎಸ್‌, ಬಿಜೆಪಿ ಆಕ್ರೋಶ: ರೇವಂತ್‌ ಹೇಳಿಕೆಗೆ ವಿಪಕ್ಷಗಳಾದ ಬಿಆರ್‌ಎಸ್‌ ಮತ್ತು ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿವೆ. ‘ತಮಗೆ ಹಿಟ್ಲರ್‌ ಸ್ಫೂರ್ತಿ ಎಂದು ರೇವಂತ್ ಬಹಿರಂಗವಾಗಿಯೇ ಒಪ್ಪಿಕೊಂಡಿದ್ದಾರೆ. ಹೈದರಾಬಾದ್‌ನಲ್ಲಿ ತಾವು ನಡೆಸುತ್ತಿರುವ ಧ್ವಂಸವನ್ನು ಇರಾನ್ ಮತ್ತು ಇಸ್ರೇಲ್‌ನಂತಹ ಯುದ್ಧಪೀಡಿತ ದೇಶಗಳಲ್ಲಿನ ಧ್ವಂಸಗಳಿಗೆ ಹೋಲಿಸುತ್ತಿದ್ದಾರೆ. ಇದು ರಾಹುಲ್ ಗಾಂಧಿ ಭಾಷೆಯನ್ನು ಪ್ರತಿಧ್ವನಿಸುತ್ತದೆ’ ಎಂದು ಕೇಂದ್ರ ಸಚಿವ ಕಿಶನ್ ರೆಡ್ಡಿ ಹರಿಹಾಯ್ದಿದ್ದಾರೆ.ಬಿಆರ್‌ಎಸ್‌ ಟ್ವೀಟ್‌ ಮಾಡಿದ್ದು, ರೇವಂತ್ ರೆಡ್ಡಿಯವರನ್ನು ಹೊಸ ಹಿಟ್ಲರ್ ಎಂದು ಟೀಕಿಸಿದೆ. ಹಿಟ್ಲರ್ ಜರ್ಮನಿಯ ನಾಜಿ ಪಕ್ಷದ ನಾಯಕ. ತನ್ನ ಆಡಳಿತದಲ್ಲಿ ಸುಮಾರು 60 ಲಕ್ಷ ಯಹೂದಿಗಳ ನರಮೇಧ ನಡೆಸಿದ್ದ.