ನಾನು ಹಿಟ್ಲರ್‌ ಆಗಿದ್ದರೆ ವಿನಯ ಗೆಲ್ಲಲು ಸಾಧ್ಯವಾಗುತ್ತಿತ್ತಾ?

| Published : Apr 12 2024, 01:06 AM IST

ನಾನು ಹಿಟ್ಲರ್‌ ಆಗಿದ್ದರೆ ವಿನಯ ಗೆಲ್ಲಲು ಸಾಧ್ಯವಾಗುತ್ತಿತ್ತಾ?
Share this Article
  • FB
  • TW
  • Linkdin
  • Email

ಸಾರಾಂಶ

ಹಿಂದಿ ಪ್ರಚಾರ ಸಭಾ ಸ್ವಾಯತ್ತ ಸಂಸ್ಥೆ. ಮಹಾತ್ಮ ಗಾಂಧೀಜಿ ಅವರು ಆರಂಭಿಸಿದ್ದರು. ಹಿಂದೆ ವಿಭೂತಿ ಎನ್ನುವವರು ಅಧ್ಯಕ್ಷರಿದ್ದರು. ಈಗ ಮತ್ತೊಬ್ಬರು ಅಧ್ಯಕ್ಷರಾಗಿದ್ದಾರೆ.

ಹುಬ್ಬಳ್ಳಿ:

ನಾನು ಹಿಟ್ಲರ್‌ ಆಗಿದ್ದರೆ ವಿನಯ ಕುಲಕರ್ಣಿ ಗೆಲ್ಲಲು ಸಾಧ್ಯವಾಗುತ್ತಿತ್ತಾ? ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪ್ರಶ್ನಿಸಿದ್ದಾರೆ. ಈ ಮೂಲಕ ಧಾರವಾಡದಲ್ಲಿ ಹಿಟ್ಲರ್‌ ಆಡಳಿತವಿದೆ ಎಂದು ಟೀಕೆ ಮಾಡಿದ್ದ ಮಾಜಿ ಸಚಿವ ವಿನಯ್‌ ಕುಲಕರ್ಣಿ ಹೇಳಿಕೆಗೆ ತಿರುಗೇಟು ನೀಡಿದರು.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಒಂದು ವೇಳೆ ಹಿಟ್ಲರ್‌ ಆಗಿದ್ದರೆ ಚುನಾವಣೆಯೇ ನಡೆಯುತ್ತಿರಲಿಲ್ಲ. ಹತಾಶರಾಗಿ ವಿನಯ ಕುಲಕರ್ಣಿ ಮಾತನಾಡಿದ್ದಾರೆ. ಇದರ ಬಗ್ಗೆ ನಾನೇನು ಪ್ರತಿಕ್ರಿಯೆ ನೀಡಲ್ಲ ಎಂದರು.

ವಿನಯ ಕುಲಕರ್ಣಿ ಜೈಲಿಗೆ ಹೋಗಲಿಕ್ಕೆ ಜೋಶಿ ಕಾರಣ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಈ ದೇಶದ ಕಾನೂನು, ನ್ಯಾಯಾಲಯಗಳ ಬಗ್ಗೆ ಕಾಂಗ್ರೆಸ್‌ನವರಿಗೆ ನಂಬಿಕೆ ಇಲ್ಲ. ಟ್ರಯಲ್ ಕೋರ್ಟ್‌ನಿಂದ ಸುಪ್ರೀಂಕೋರ್ಟ್‌ ವರೆಗೂ ಅವರ ಕೇಸ್‌ಗಳು ನಡೆದಿವೆ. ಹೀಗಾಗಿ ಹತಾಶತನದಿಂದ ಪ್ರತಿಕ್ರಿಯೆ ಕೊಡುತ್ತಿದ್ದಾರೆ ಎಂದರು.

ಹಿಂದಿ ಪ್ರಚಾರ ಸಭೆ ವಿಚಾರದಲ್ಲೂ ರಾಜಕೀಯ ನಡೆಯುತ್ತಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಹಿಂದಿ ಪ್ರಚಾರ ಸಭಾ ಸ್ವಾಯತ್ತ ಸಂಸ್ಥೆ. ಮಹಾತ್ಮ ಗಾಂಧೀಜಿ ಅವರು ಆರಂಭಿಸಿದ್ದರು. ಹಿಂದೆ ವಿಭೂತಿ ಎನ್ನುವವರು ಅಧ್ಯಕ್ಷರಿದ್ದರು. ಈಗ ಮತ್ತೊಬ್ಬರು ಅಧ್ಯಕ್ಷರಾಗಿದ್ದಾರೆ. ಅದಕ್ಕೂ ನಮಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.

ದಿಂಗಾಲೇಶ್ವರ ಶ್ರೀಗಳ ಹೇಳಿಕೆಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಜೋಶಿ, ಅವರ ಬಗ್ಗೆ ಅಪಾರ ಗೌರವವಿದೆ. ಅವರ ಹೇಳಿಕೆಗೆ ಏನನ್ನು ಪ್ರತಿಕ್ರಿಯಿಸಲ್ಲ. ಅವರ ಪ್ರತಿಯೊಂದು ಹೇಳಿಕೆಯನ್ನು ಆಶೀರ್ವಾದ ಅಂತ ತಿಳಿಯುತ್ತೇನೆ. ಜನರೇ ಪ್ರಭುಗಳಾಗಿದ್ದಾರೆ. ಜನರ ಆಶೀರ್ವಾದ ನನಗೆ ಸಿಕ್ಕೇ ಸಿಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್‌ನಿಂದ ದಿಂಗಾಲೇಶ್ವರ ಶ್ರೀ ಗಳಿಗೆ ಬಾಹ್ಯ ಬೆಂಬಲ ನೀಡುತ್ತಾರೆ ಎಂಬ ಚರ್ಚೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್‌ನವರು ತಮ್ಮ ಕ್ಯಾಂಡಿಡೇಟ್‌ ಹಾಕಿದ್ದಾರೆ. ಬಿಜೆಪಿ ನನ್ನನ್ನು ಅಖಾಡಕ್ಕೆ ಇಳಿಸಿದೆ. ಬೆಂಬಲ ಕೊಟ್ಟಾಗ ಆ ಬಗ್ಗೆ ಪ್ರತಿಕ್ರಿಯೆ ನೀಡುತ್ತೇನೆ ಎಂದರು.

ಶಿವರಾಮ ಹೆಬ್ಬಾರ್ ಬಿಜೆಪಿಗೆ ದ್ರೋಹ ಮಾಡಿದ್ದಾರೆ. ಅವರ ಮಗ ಕಾಂಗ್ರೆಸ್ ಸೇರಿರುವುದು ಆಶ್ಚರ್ಯ ಸಂಗತಿ ಏನಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.