ಸಾರಾಂಶ
ಏಕ ದೇಶ ಏಕ ಚುನಾವಣೆ ನಡೆಸುವ ಕುರಿತು ಸಾರ್ಸವಜನಿಕರು ಸಲಹೆ ನೀಡುವಂತೆ ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ನೇತೃತ್ವದ ಸಮಿತಿ ಸಲಹೆಗಳನ್ನು ಆಹ್ವಾನಿಸಿದ್ದು, ಜ.15ರೊಳಗೆ ವೆಬ್‌ಸೈಟ್/ ಇ-ಮೇಲ್ ಮೂಲಕ ಸಲಹೆ ನೀಡುವಂತೆ ಕೇಳಿದೆ.
ಪಿಟಿಐ
ನವದೆಹಲಿ: ನರೇಂದ್ರ ಮೋದಿ ಸರ್ಕಾರದ ಮಹತ್ವಾಕಾಂಕ್ಷಿ ‘ಒಂದು ದೇಶ, ಒಂದು ಚುನಾವಣೆ’ ಬಗ್ಗೆ ಅಧ್ಯಯನ ನಡೆಸಲು ರಚಿಸಲಾಗಿರುವ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇತೃತ್ವದ ಸಮಿತಿ ಈ ಬಗ್ಗೆ ಸಾರ್ವಜನಿಕರಿಂದ ಸಲಹೆಗಳನ್ನು ಆಹ್ವಾನಿಸಿದೆ. ‘ದೇಶದಲ್ಲಿ ಎಲ್ಲ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸಲು ಕಾನೂನುಗಳಲ್ಲಿ ಬದಲಾವಣೆಯ ಅಗತ್ಯವಿದೆ.
ಹೀಗಾಗಿ ಈ ಬಗ್ಗೆ ನಾಗರಿಕರು ಸಲಹೆ ನೀಡಬೇಕು. ಜ.15ರೊಳಗೆ ಸಲ್ಲಿಕೆಯಾಗುವ ಸಲಹೆಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದು’ ಎಂದು ಸಮಿತಿ ಹೇಳಿದೆ.ಸಲಹೆಗಳನ್ನು ಸಮಿತಿಯ ವೆಬ್‌ಸೈಟ್ onoe.gov.in ನಲ್ಲಿ ಪೋಸ್ಟ್ ಮಾಡಬಹುದು ಅಥವಾ ಇ-ಮೇಲ್ ಮೂಲಕ sc-hlc@gov.in ಗೆ ಕಳುಹಿಸಬಹುದು ಎಂದು ತಿಳಿಸಲಾಗಿದೆ.
ಏನಿದು ಒಂದು ದೇಶ ಒಂದು ಚುನಾವಣೆ?
ಲೋಕಸಭೆ, ರಾಜ್ಯ ವಿಧಾನಸಭೆಗಳು, ಪುರಸಭೆಗಳು ಮತ್ತು ಪಂಚಾಯತ್‌ಗಳಿಗೆ ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸುವುದೇ ಏಕ-ದೇಶ ಏಕ ಚುನಾವಣೆ. ಆದರೆ ಇದು ಸುಲಭವಲ್ಲ ಇದಕ್ಕೆ ನಾನಾ ಕಾಯ್ದೆಗಳ ತಿದ್ದುಪಡಿ ಆಗಬೇಕಿದೆ.ಹೀಗಾಗಿ ಈ ಬಗ್ಗೆ ಅಧ್ಯಯನಕ್ಕೆ ಕೋವಿಂದ್ ನೇತೃತ್ವದ ಸಮಿತಿಯನ್ನು ಕಳೆದ ಸೆಪ್ಟೆಂಬರ್‌ನಲ್ಲಿ ರಚಿಸಲಾಗಿತ್ತು. ನಂತರ ಸಮಿತಿಯು 2 ಸಭೆಗಳನ್ನು ನಡೆಸಿದೆ.
ಇದು ಇತ್ತೀಚೆಗೆ ರಾಜಕೀಯ ಪಕ್ಷಗಳಿಗೆ ತಮ್ಮ ಅಭಿಪ್ರಾಯಗಳನ್ನು ತಿಳಿಸುವಂತೆ ಸಮಿತಿ ಪತ್ರ ಬರೆದಿತ್ತು. ಸಮಿತಿಯು ಕಾನೂನು ಆಯೋಗದ ಅಭಿಪ್ರಾಯವನ್ನೂ ಕೇಳಿದೆ.
ಸಂಸತ್, ವಿಧಾನಸಭೆ ಚುನಾವಣೆ ವರ್ಷದಲ್ಲೇ ಸ್ಥಳೀಯ ಸಂಸ್ಥೆಗಳಿಗೂ ಚುನಾವಣೆ?
ಉದ್ದೇಶಿತ ‘ಒಂದು ದೇಶ ಒಂದು ಚುನಾವಣೆ’ ವ್ಯವಸ್ಥೆಯಡಿ ಲೋಕಸಭೆ ಹಾಗೂ ವಿಧಾನಸಭೆಗಳಿಗೆ ಚುನಾವಣೆ ನಡೆಸುವ ವರ್ಷದಲ್ಲೇ ಸ್ಥಳೀಯ ಸಂಸ್ಥೆಗಳಿಗೂ ಚುನಾವಣೆ ನಡೆಸುವ ಸಾಧ್ಯತೆಗಳ ಬಗ್ಗೆ ಕಾನೂನು ಆಯೋಗ ಪರಿಶೀಲನೆ ನಡೆಸುತ್ತಿದೆ ಎಂದು ಮೂಲಗಳು ಹೇಳಿವೆ.
ಈ ವ್ಯವಸ್ಥೆಯಡಿ ಈ ಹಿಂದೆ ಲೋಕಸಭೆ ಹಾಗೂ ರಾಜ್ಯಗಳ ವಿಧಾನಸಭೆಗೆ ಒಂದೇ ಸಲ ಚುನಾವಣೆ ನಡೆಸುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿತ್ತು. ಈಗ ಕಾನೂನು ಆಯೋಗವು ಈ ವ್ಯವಸ್ಥೆಯಡಿ ಜಿಲ್ಲಾ ಪಂಚಾಯತ್, ನಗರಪಾಲಿಕೆಗಳು ಮುಂತಾದ ಸ್ಥಳೀಯ ಸಂಸ್ಥೆಗಳನ್ನೂ ಸೇರಿಸಿಕೊಳ್ಳಲು ಪರಿಶೀಲನೆ ನಡೆಸುತ್ತಿದೆ.
ಮೂಲಗಳ ಪ್ರಕಾರ, ಒಂದು ವರ್ಷದಲ್ಲಿ ಮೂರು ಹಂತದ ಚುನಾವಣೆಯನ್ನು ಎರಡು ಬಾರಿ ನಡೆಸಲು ಪರಿಶೀಲಿಸಲಾಗುತ್ತಿದೆ. ಅಂದರೆ, ಒಂದೇ ವರ್ಷದಲ್ಲಿ ಲೋಕಸಭೆ ಹಾಗೂ ವಿಧಾನಸಭೆಗಳಿಗೆ ಒಮ್ಮೆ ಹಾಗೂ ಸ್ಥಳೀಯ ಸಂಸ್ಥೆಗಳಿಗೆ ಇನ್ನೊಮ್ಮೆ ಚುನಾವಣೆ ನಡೆಸಲು ಪರಿಶೀಲನೆ ನಡೆದಿದೆ. ದೇಶದ ಬೇರೆ ಬೇರೆ ಸ್ಥಳಗಳಲ್ಲಿ ಬೇರೆ ಬೇರೆ ಸಮಯದಲ್ಲಿ ಇರುವ ವಿಭಿನ್ನ ಹವಾಮಾನದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಪ್ರಾಯೋಗಿಕವಾಗಿ ಇದನ್ನು ಪರಿಶೀಲಿಸಲಾಗುತ್ತಿದೆ ಎಂದು ತಿಳಿದುಬಂದಿದೆ.
ನಿವೃತ್ತ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಅಧ್ಯಕ್ಷತೆಯ ಕಾನೂನು ಆಯೋಗವು ಈ ಕುರಿತು ಅಂತಿಮ ವರದಿಯನ್ನು ಸಿದ್ಧಪಡಿಸುತ್ತಿದೆ. ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅಧ್ಯಕ್ಷತೆಯ ಉನ್ನತ ಮಟ್ಟದ ಸಮಿತಿಯು ಈ ಕುರಿತು ಮೇಲ್ವಿಚಾರಣೆ ನಡೆಸುತ್ತಿದೆ.