ಸಾರಾಂಶ
ಜೈಸಲ್ಮೇರ್/ಅಂಬಾಲಾ: ಭಾರತ-ಪಾಕ್ ಸಂಘರ್ಷ ತೀವ್ರ ಸ್ವರೂಪ ಪಡೆಯುತ್ತಿರುವ ಹಿನ್ನೆಲೆಯಲ್ಲಿ, ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯಲ್ಲಿ ಹಾಗೂ ಹರ್ಯಾಣದ ಅಂಬಾಲಾ ಜಿಲ್ಲೆಯಲ್ಲಿ ಬ್ಲ್ಯಾಕೌಟ್ ಘೋಷಣೆ ಮಾಡಲಾಗಿದೆ.
ಜೈಸಲ್ಮೇರ್‌ನಲ್ಲಿ ಬಾಂಬ್ ರೀತಿಯ ವಸ್ತು ಪತ್ತೆ ಆದ ಕಾರಣ ಶುಕ್ರವಾರ ಹಾಗೂ ಶನಿವಾರ ಜಾರಿಗೆ ಬರುವಂತೆ ಬ್ಲ್ಯಾಕ್‌ಔಟ್ ಘೋಷಿಸಲಾಗಿದೆ.
ಇನ್ನು ಪ್ರಮುಖ ವಾಯುಪಡೆ ನೆಲೆಯಾಗಿರುವ ಹರ್ಯಾಣದ ಅಂಬಾಲಾದಲ್ಲಿ ಮುಂದಿನ ಅದೇಶದವರೆಗೂ ಜಿಲ್ಲಾದ್ಯಂತ ರಾತ್ರಿ 8 ರಿಂದ ಬೆಳಿಗ್ಗೆ 6ರ ತನಕ ವಿದ್ಯುತ್ ಕಡಿತಗೊಳಿಸಲಾಗಿದೆ. ಜೊತೆಗೆ ವಿದ್ಯುತ್ ಬ್ಯಾಕಪ್‌ಗಳ ಬಳಕೆ ನಿಷೇಧಿಸಲಾಗಿದೆ.‘
ಜೈಸಲ್ಮೇರ್‌ನಲ್ಲಿ ಶುಕ್ರವಾರ ಸಂಜೆಯಿಂದ ಶನಿವಾರದವರೆಗೆ ಬ್ಲ್ಯಾಕ್‌ಔಟ್ ಇರಲಿದೆ. ಈ ವೇಳೆ ಮನೆಗಳು ಮತ್ತು ವಾಣಿಜ್ಯ ಮಳಿಗೆಗಳಲ್ಲಿ ವಿದ್ಯುತ್ ಉರಿಸುವಂತಿಲ್ಲ. ಜಿಲ್ಲೆಯ ಎಲ್ಲಾ ಮಾರುಕಟ್ಟೆಗಳು ಮುಚ್ಚಿರುತ್ತವೆ. ವಾಹನಗಳು ರಸ್ತೆಗಿಳಿಯುವಂತಿಲ್ಲ. ರಾಮಗಢದಿಂದ ತನೋಟ್ ಮಾರ್ಗವನ್ನು ನಿರ್ಬಂಧಿಸಲಾಗಿದೆ. ರಕ್ಷಣಾ ಪ್ರದೇಶದ ಸುತ್ತಲಿನ 5 ಕಿ.ಮೀ. ವ್ಯಾಪ್ತಿಯನ್ನು ಪ್ರವೇಶ ನಿಷೇಧಿತ ವಲಯವೆಂದು ಘೋಷಿಸಲಾಗಿದೆ. ನಾಗರಿಕರು ಎಲ್ಲ ನಿಯಮಗಳನ್ನು ಸರಿಯಾಗಿ ಪಾಲಿಸಬೇಕು. ಯಾವುದೇ ಅನುಮಾನಾಸ್ಪದ ನಡೆ ಕಂಡುಬಂದರೂ ಕಠಿಣವಾಗಿ ಶಿಕ್ಷಿಸಲಾಗುತ್ತದೆ’ ಎಂದು ಆಡಳಿತ ತಿಳಿಸಿದೆ.
ಸಮರದ ವೇಳೆ ಬ್ಲ್ಯಾಕೌಟ್ ಏಕೆ ಬೇಕು?
ನವದೆಹಲಿ: ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ಸ್ಥಿತಿ ನಿರ್ಮಾಣವಾಗಿರುವ ಹೊತ್ತಿನಲ್ಲಿ, ಭದ್ರತಾ ದೃಷ್ಟಿಯಿಂದ ದೇಶದ ವಾಯುವ್ಯ ರಾಜ್ಯಗಳಲ್ಲಿ ಬ್ಲ್ಯಾಕ್ ಔಟ್ ಘೋಷಿಸಲಾಗಿದೆ. ಅಣಕು ಕವಾಯತು ಸಂದರ್ಭದಲ್ಲೂ ಬ್ಲ್ಯಾಕ್ ಔಟ್ ಅಭ್ಯಾಸ ನಡೆಸಲಾಗುತ್ತಿದೆ.
ಬ್ಲ್ಯಾಕ್ ಔಟ್ ಅಗತ್ಯವೇನು?:ಬ್ಲ್ಯಾಕ್ ಔಟ್ ಎಂದರೆ ಸಂಪೂರ್ಣ ಪ್ರದೇಶದಲ್ಲಿ ಕತ್ತಲಾವರಿಸುವಂತೆ ಮಾಡುವುದು. ಶತ್ರುರಾಷ್ಟ್ರ ವೈಮಾನಿಕ ದಾಳಿ ನಡೆಸಿದ ಸಂದರ್ಭದಲ್ಲಿ ಹಾನಿ ಮತ್ತು ಸಾವು-ನೋವುಗಳನ್ನು ತಡೆಯಲು ಬ್ಲ್ಯಾಕ್ ಔಟ್ ಅತ್ಯಗತ್ಯ. ರಾತ್ರಿ ಹೊತ್ತಿನಲ್ಲಿ ಬೆಳಕಿನ ವೃಂದ ಕಾಣುವ ಜಾಗವನ್ನು ಜನವಸತಿ ಪ್ರದೇಶವೆಂದು ಗುರುತಿಸುವುದ ಸುಲಭ. ಆದ್ದರಿಂದ ವೈರಿ ವಿಮಾನಗಳು ಅವುಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡುತ್ತವೆ. ಇದನ್ನು ತಡೆಯಲು ವಿದ್ಯುತ್ ಕಡಿತ ಮಾಡಿ ಬ್ಲ್ಯಾಕ್‌ಔಟ್ ಘೋಷಿಸಿದರೆ, ದಾಳಿಗೆ ಬರುವ ವಿಮಾನಗಳಿಗೆ ಜನನಿಬಿಡ ಪ್ರದೇಶಗಳನ್ನು ಗುರುತಿಸುವುದು ಕಷ್ಟವಾಗಿ, ಸಂಭಾವ್ಯ ಸಾವುನೋವುಗಳನ್ನು ತಡೆಯಬಹುದು.
ಬ್ಲ್ಯಾಕ್‌ಔಟ್ ಭಾಗವಾಗಿ, ಸಾಮಾನ್ಯ ಗೋಚರತೆಯ ಪರಿಸ್ಥಿತಿಗಳಲ್ಲಿ ನೆಲದ ಮಟ್ಟದಿಂದ 5,000 ಅಡಿ ಎತ್ತರದಿಂದ ಯಾವುದೇ ಬೆಳಕು ಕಾಣದಂತೆ ಬೀದಿ ದೀಪಗಳು, ಕಾರ್ಖಾನೆ ಮತ್ತು ವಾಹನಗಳ ಬೆಳಕನ್ನು ನಿರ್ಬಂಧಿಸಲಾಗುತ್ತದೆ. 2003ರಲ್ಲಿ ಸಿದ್ಧಪಡಿಸಲಾದ ಭಾರತದಲ್ಲಿ ನಾಗರಿಕ ರಕ್ಷಣೆಯ ಸಾಮಾನ್ಯ ತತ್ವಗಳು ವರದಿಯ ಪ್ರಕಾರ, ಬ್ಲ್ಯಾಕ್‌ಔಟ್ ವೇಳೆ ಏನು ಮಾಡಬೇಕು ಹಾಗೂ ಏನು ಮಾಡಬಾರದು ಎಂಬುದನ್ನು ಉಲ್ಲೇಖಿಸಲಾಗಿದೆ.