ಸಾರಾಂಶ
ಪ್ರಮುಖ ಜಲಾಶಯಗಳಿಗೆ ಪೊಲೀಸ ಇಲಾಖೆಯಿಂದ ಭದ್ರತೆ ಒದಗಿಸುವಂತೆ ಪತ್ರ ಬರೆಯಲಾಗಿದೆ.
ಮುಂಡಗೋಡ: ಇಂಡೋ ಪಾಕ್ ಕದನ ಹಿನ್ನೆಲೆಯಲ್ಲಿ ಜಲಾಶಯಗಳಿಗೆ ಭದ್ರತೆ ಒದಗಿಸುವ ದೃಷ್ಟಿಯಿಂದ ತಾಲೂಕಿನ ಧರ್ಮಾ, ಬಾಚಣಕಿ, ಸನವಳ್ಳಿ, ಚಿಗಳ್ಳಿ, ನ್ಯಾಸರ್ಗಿ, ಅತ್ತಿವೇರಿ ಸೇರಿದಂತೆ ೮ ಜಲಾಶಯಗಳಿಗೆ ಪೊಲೀಸ್ ರಕ್ಷಣೆ ನೀಡುವಂತೆ ಇಲ್ಲಿಯ ಚಿಕ್ಕ ನೀರಾವರಿ ಇಲಾಖೆ ಅಧಿಕಾರಿಗಳು ಮುಂಡಗೋಡ ಪೊಲೀಸ್ ಠಾಣೆಗೆ ಪತ್ರ ಬರೆದಿದ್ದಾರೆ.ಜಿಲ್ಲೆಯಲ್ಲಿ ೯ ಜಲಾಶಯ ಮತ್ತು ೨೮ ಕೆರೆಗಳನ್ನು ಹೊಂದಿದ ತಾಲೂಕು ಇದಾಗಿದ್ದು, ಜನರಿಗೆ ಕುಡಿಯುವ ನೀರು ಸರಬರಾಜು ಮಾಡುವ ಹಾಗೂ ರೈತರ ಜಮೀನಿಗೆ ನೀರು ಒದಗಿಸುವುದು ಮಾತ್ರವಲ್ಲದೇ ಪಕ್ಷಿಧಾಮವಿರುವ ಪ್ರಸಿದ್ಧಿ ಹೊಂದಿರುವ ಅತ್ತಿವೇರಿ ಜಲಾಶಯ ಕೂಡ ಇದ್ದು, ಇಲ್ಲಿ ನಿತ್ಯ ಸಾಕಷ್ಟು ಜನ ಪ್ರವಾಸಿಗರು ಬರುತ್ತಾರೆ.
ಕೇಂದ್ರ ಸರ್ಕಾರದ ಆದೇಶದಂತೆ ರಾಜ್ಯ ಸರ್ಕಾರ ವ್ಯಾಪ್ತಿಯಲ್ಲಿ ಬರುವ ಅಣೆಕಟ್ಟು, ಜಲಾಶಯಗಳ ರಕ್ಷಣೆಗಾಗಿ ಭದ್ರತಾ ಸಿಬ್ಬಂದಿಯನ್ನು ನೇಮಿಸಿಕೊಳ್ಳುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ತಾಲೂಕಿನ ಪ್ರಮುಖ ಜಲಾಶಯಗಳಿಗೆ ಪೊಲೀಸ ಇಲಾಖೆಯಿಂದ ಭದ್ರತೆ ಒದಗಿಸುವಂತೆ ಪತ್ರ ಬರೆಯಲಾಗಿದೆ.ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ಭದ್ರತಾ ಹಿತದೃಷ್ಟಿಯಿಂದ ತಾಲೂಕಿನ ಪ್ರಮುಖ ಜಲಾಶಯಗಳಿಗೆ ಭದ್ರತೆ ಒದಗಿಸುವಂತೆ ಮುಂಡಗೋಡ ಪೊಲೀಸ್ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ ಎನ್ನುತ್ತಾರೆ ಚಿಕ್ಕ ನೀರಾವರಿ ಇಲಾಖೆ ಎಇಇ ಆರ್.ಎಂ. ಧಪೇದಾರ.