ಸಾರಾಂಶ
ಕಾಂಗ್ರೆಸ್ ಮುಖಂಡ ಹಾಗೂ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ‘ವೋಟ್ ಚೋರಿ’ ಆರೋಪ ಸಾಬೀತು ಮಾಡುವ ‘ಆಟಂ ಬಾಂಬ್’ ಕಾಂಗ್ರೆಸ್ ಪಕ್ಷದ ಬಳಿ ಇದೆ. ಅದು ಸ್ಫೋಟಗೊಂಡಾಗ ಚುನಾವಣಾ ಆಯೋಗಕ್ಕೆ ಅಡಗಿಕೊಳ್ಳಲು ದೇಶದ ಎಲ್ಲೂ ಸ್ಥಳವಿರುವುದಿಲ್ಲ’ ಎಂದು ಹೇಳಿದ್ದಾರೆ.
ನವದೆಹಲಿ : ಬಿಜೆಪಿಯನ್ನು ಗೆಲ್ಲಿಸುವ ಉದ್ದೇಶದಿಂದ ಚುನಾವಣಾ ಆಯೋಗವು ವೋಟ್ ಚೋರಿ (ಮತ ಕಳವು) ಮಾಡುತ್ತಿದೆ ಎಂದು ಮತ್ತೆ ಆರೋಪಿಸಿರುವ ಕಾಂಗ್ರೆಸ್ ಮುಖಂಡ ಹಾಗೂ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ವೋಟ್ ಚೋರಿ ಆರೋಪ ಸಾಬೀತು ಮಾಡುವ ಆಟಂ ಬಾಂಬ್’ ಕಾಂಗ್ರೆಸ್ ಪಕ್ಷದ ಬಳಿ ಇದೆ. ಅದು ಸ್ಫೋಟಗೊಂಡಾಗ ಚುನಾವಣಾ ಆಯೋಗಕ್ಕೆ ಅಡಗಿಕೊಳ್ಳಲು ದೇಶದ ಎಲ್ಲೂ ಸ್ಥಳವಿರುವುದಿಲ್ಲ ಎಂದು ಹೇಳಿದ್ದಾರೆ.
ಮಹಾರಾಷ್ಟ್ರ ವಿಧಾನಸಭೆ, ಕಳೆದ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದ ಮಹದೇವಪುರ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಅಕ್ರಮ ನಡೆದಿವೆ ಎಂದು ಆರೋಪಿಸಿದ್ದ ರಾಹುಲ್, ಆ.5ರಂದು ಬೆಂಗಳೂರಲ್ಲಿ ಈ ಬಗ್ಗೆ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ ಅದರ ನಡುವೆಯೇ ಈ ಹೊಸ ಆರೋಪವನ್ನು ಅವರು ಮಾಡಿದ್ದಾರೆ.
ಸಂಸತ್ತಿನ ಹೊರಗೆ ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಈ ಕೃತ್ಯದಲ್ಲಿ ಭಾಗಿಯಾಗಿರುವ ಚುನಾವಣಾ ಆಯೋಗದ ಉನ್ನತ ಹಾಗೂ ಕಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ, ‘ದೇಶದ್ರೋಹ’ದಲ್ಲಿ ಭಾಗಿಯಾಗಿದ್ದಾರೆ. ಹೀಗಾಗಿ ಯಾವುದೇ ಕಾರಣಕ್ಕೂ ಅವರನ್ನು ಬಿಡುವುದಿಲ್ಲ ಎಂಬುದನ್ನು ನೆನಪಿನಲ್ಲಿಡಬೇಕು’ ಎಂದು ಎಚ್ಚರಿಸಿದರು.
ಬಿಹಾರ ಮತದಾರರ ಪರಿಷ್ಕರಣೆಯ ಕರಡು ಪಟ್ಟಿ ಬಿಡುಗಡೆ ಬಗ್ಗೆ ಪ್ರತಿಕ್ರಿಯಿಸಿದ ರಾಹುಲ್, ‘ನಾನು ‘ಮತ ಚೋರಿ’ ನಡೆಯುತ್ತಿದೆ ಎಂದು ಹೇಳಿದ್ದೆ ಮತ್ತು ಈಗ ಚುನಾವಣಾ ಆಯೋಗವು ‘ಮತ ಚೋರಿ’ಯಲ್ಲಿ ಭಾಗಿಯಾಗಿದೆ ಎಂಬುದಕ್ಕೆ ನಮ್ಮ ಬಳಿ ಸಾಕಷ್ಟು ಪುರಾವೆಗಳಿವೆ. ನಾನು ಇದನ್ನು ಹಗುರವಾಗಿ ಹೇಳುತ್ತಿಲ್ಲ. ನಾನು ಇದನ್ನು ಶೇ.100ರಷ್ಟು ಪುರಾವೆಗಳೊಂದಿಗೆ ಹೇಳುತ್ತಿದ್ದೇನೆ. ನಾವು ಅದನ್ನು ಬಿಡುಗಡೆ ಮಾಡಿದ ತಕ್ಷಣ ಇಡೀ ದೇಶಕ್ಕೆ ಚುನಾವಣಾ ಆಯೋಗವು ‘ಮತ ಚೋರಿ’ಯಲ್ಲಿ ತೊಡಗಿದೆ ಎಂದು ತಿಳಿಯುತ್ತದೆ. ಅದು ಬಿಜೆಪಿಗಾಗಿ ಹೀಗೆ ಮಾಡುತ್ತಿದೆ’ ಎಂದು ಆರೋಪಿಸಿದರು.
‘2023 ರ ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಮತ್ತು 2024ರ ಲೋಕಸಭಾ ಚುನಾವಣೆಯಲ್ಲಿ ಚುನಾವಣಾ ಅಕ್ರಮಗಳ ಬಗ್ಗೆ ನಮಗೆ ಅನುಮಾನ ಇತ್ತು. ಇದು ಮಹಾರಾಷ್ಟ್ರದಲ್ಲಿಯೂ ಮುಂದುವರಿಯಿತು. ರಾಜ್ಯ ಮಟ್ಟದಲ್ಲಿ (ಮಹಾರಾಷ್ಟ್ರದಲ್ಲಿ) ಮತ ಕಳ್ಳತನ ನಡೆದಿದೆ ಎಂದು ನಾವು ನಂಬುತ್ತೇವೆ. ಮತದಾರರ ಪರಿಷ್ಕರಣೆ ನಡೆದಿದೆ ಮತ್ತು ಕೋಟಿ ಮತದಾರರು ಸೇರ್ಪಡೆಗೊಂಡಿದ್ದಾರೆ. ಇದನ್ನು ಪರಿಶೀಲಿಸಬೇಕು ಎಂಬುದು ನಮ್ಮ ಬೇಡಿಕೆ. ಆದರೆ ಇದಕ್ಕೆ ಆಯೋಗ ಒಪ್ಪುತ್ತಿಲ್ಲ. ಹೀಗಾಗಿ ನಾವು ನಮ್ಮದೇ ಆದ ತನಿಖೆ ನಡೆಸಿದ್ದೇವೆ. 6 ತಿಂಗಳುಗಳನ್ನು ತೆಗೆದುಕೊಂಡಿದ್ದೇವೆ ಮತ್ತು ನಾವು ಕಂಡುಕೊಂಡಿರುವುದು ಪರಮಾಣು ಬಾಂಬ್. ಅದು ಸ್ಫೋಟಗೊಂಡಾಗ, ಚುನಾವಣಾ ಆಯೋಗಕ್ಕೆ ದೇಶದಲ್ಲಿ ಎಲ್ಲಿಯೂ ಅಡಗಿಕೊಳ್ಳಲು ಸ್ಥಳವಿರುವುದಿಲ್ಲ’ ಎಂದರು.
‘ಚುನಾವಣಾಧಿಕಾರಿಗಳು ಈ ಅಕ್ರಮದಲ್ಲಿ ಭಾಗಿ ಆಗಿದ್ದರೆ ಅದು ದೇಶದ್ರೋಹ, ಅಂಥವರು ನಿವೃತ್ತರಾಗಿರಬಹುದು. ಆದರೆ ಎಲ್ಲಿದ್ದರೂ ಅವರನ್ನು ಹುಡುಕುತ್ತೇವೆ’ ಎಂದು ಎಚ್ಚರಿಸಿದರು.
ಮುಂಬರುವ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ 1 ತಿಂಗಳ ಕಾಲ ನಡೆದ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆ ಪೂರ್ಣಗೊಂಡಿದ್ದು, ಶುಕ್ರವಾರ ಚುನಾವಣಾ ಆಯೋಗವು ಕರಡು ಮತದಾರರ ಪಟ್ಟಿ ಪ್ರಕಟಿಸಿದೆ. ಈ ಪರಿಷ್ಕರಣೆಗೆ ಮೊದಲಿನಿಂದಲೂ ಕಾಂಗ್ರೆಸ್ ವಿರೋಧವಿದ್ದು, ಇದು ಬಿಜೆಪಿ ವಿರೋಧಿ ಮತಗಳನ್ನು ರದ್ದುಪಡಿಸುವ ಹುನ್ನಾರ ಎನ್ನುತ್ತಿದೆ. ಅಲ್ಲದೆ, ಕರ್ನಾಟಕದ ಮಹದೇವಪುರ ಹಾಗೂ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲೂ ಭಾರಿ ಅಕ್ರಮ ನಡೆದಿತ್ತು ಎಂದು ರಾಹುಲ್ ಇತ್ತೀಚೆಗೆ ಆರೋಪಿಸಿದ್ದು, ಆ.5ರಂದು ಬೆಂಗಳೂರಿನಲ್ಲಿ ಪ್ರತಿಭಟನೆ ಕೂಡ ಹಮ್ಮಿಕೊಂಡಿದ್ದಾರೆ.
ರಾಹುಲ್ ಆರೋಪ ನಿರಾಧಾರ: ಆಯೋಗ
ನವದೆಹಲಿ : ಚುನಾವಣಾ ಆಯೋಗವು ಬಿಜೆಪಿಯನ್ನು ಗೆಲ್ಲಿಸಲು ‘ಮತ ಕಳ್ಳತನ’ದಲ್ಲಿ ತೊಡಗಿದೆ. ಅದರ ಸಾಕ್ಷ್ಯಾಧಾರಗಳು ಅಣುಬಾಂಬ್‌ನಂತೆ ಸಿಡಿಯಲಿವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಡಿದ ಆರೋಪಗಳನ್ನು ‘ಆಧಾರರಹಿತ’ ಎಂದು ಶುಕ್ರವಾರ ಬಣ್ಣಿಸಿರುವ ಚುನಾವಣಾ ಆಯೋಗವು, ಅಂತಹ ‘ಬೇಜವಾಬ್ದಾರಿಯುತ’ ಹೇಳಿಕೆಗಳನ್ನು ನಿರ್ಲಕ್ಷಿಸುವಂತೆ ತನ್ನ ಅಧಿಕಾರಿಗಳಿಗೆ ಸೂಚಿಸಿದೆ.
ರಾಹುಲ್ ಆರೋಪದ ಬೆನ್ನಲ್ಲೇ ಹೇಳಿಕೆ ನೀಡಿರುವ ಆಯೋಗ, ‘ನಿತ್ಯ ಮಾಡಲಾಗುತ್ತಿರುವ ಇಂತಹ ಆಧಾರರಹಿತ ಆರೋಪಗಳನ್ನು ಹಾಗೂ ದೈನಂದಿನ ಬೆದರಿಕೆಗಳನ್ನು ಚುನಾವಣಾ ಆಯೋಗವು ನಿರ್ಲಕ್ಷಿಸುತ್ತದೆ. ಎಲ್ಲಾ ಚುನಾವಣಾ ಅಧಿಕಾರಿಗಳು ಇಂತಹ ಬೇಜವಾಬ್ದಾರಿ ಹೇಳಿಕೆಗಳನ್ನು ನಿರ್ಲಕ್ಷಿಸಿ ನ್ಯಾಯಯುತ ಮತ್ತು ಪಾರದರ್ಶಕ ರೀತಿಯಲ್ಲಿ ಕೆಲಸ ಮಾಡುವಂತೆ ಸೂಚಿಸಲಾಗಿದೆ’ ಎಂದಿದೆ.
ಬಿಜೆಪಿ ವ್ಯಂಗ್ಯ:
‘ಚುನಾವಣಾ ಅಕ್ರಮಗಳನ್ನು ಸಾಬೀತುಪಡಿಸಲು ನಮ್ಮ ಪಕ್ಷದ ಬಳಿ ‘ಆಟಂ ಬಾಂಬ್’ ನಂಥ ಪುರಾವೆಗಳಿವೆ ಎಂಬ ರಾಹುಲ್ ಗಾಂಧಿಯವರ ಹೇಳಿಕೆಗೆ ಪ್ರತಿಕ್ರಿಯಿಸಿದ ಬಿಜೆಪಿ, ಅದು ಬಾಂಬ್‌ನಂತೆ ಸ್ಫೋಟಗೊಳ್ಳುವ ಬದಲು ನೀರಿನಂತೆ ಹರಿಯಿರಿದೆ ಎಂದು ವ್ಯಂಗ್ಯವಾಡಿದೆ.