ಸಾರಾಂಶ
10 ವರ್ಷ ನಾನೇ ಸಿಎಂ ಆಗಿರುತ್ತೇನೆ ಎಂಬ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಹೇಳಿಕೆಯಿಂದ ಕಾಂಗ್ರೆಸ್‌ನ ಶಾಸಕರೊಬ್ಬರು ಅಸಮಾಧಾನಗೊಂಡಿದ್ದು, ಇದು ಪಕ್ಷದ ನೀತಿಗೆ ವಿರುದ್ಧ ಎಂದು ಕಿಡಿ ಕಾರಿದ್ದಾರೆ.
ಹೈದರಾಬಾದ್ : 10 ವರ್ಷ ನಾನೇ ಸಿಎಂ ಆಗಿರುತ್ತೇನೆ ಎಂಬ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಹೇಳಿಕೆಯಿಂದ ಕಾಂಗ್ರೆಸ್‌ನ ಶಾಸಕರೊಬ್ಬರು ಅಸಮಾಧಾನಗೊಂಡಿದ್ದು, ಇದು ಪಕ್ಷದ ನೀತಿಗೆ ವಿರುದ್ಧ ಎಂದು ಕಿಡಿ ಕಾರಿದ್ದಾರೆ.
2023ರಲ್ಲಿ ಸಿಎಂ ಆದಾಗಿನಿಂದ ರೇವಂತ್ ವಿರುದ್ಧ ಕಾಂಗ್ರೆಸ್‌ನಲ್ಲಿ ಅಸಮಾಧಾನ ವ್ಯಕ್ತವಾಗಿರುವುದು ಇದೇ ಮೊದಲು. ಶುಕ್ರವಾರ ನಾಗರಕುರ್ನೂಲ್ ಜಿಲ್ಲೆಯಲ್ಲಿ ಮಾತನಾಡುತ್ತಿದ್ದ ಸಿಎಂ ರೆಡ್ಡಿ, ‘ನಾನೇ 10 ವರ್ಷ(2023-2034) ಮುಖ್ಯಮಂತ್ರಿಯಾಗಿ ಇರುತ್ತೇನೆ’ ಎಂದು ಹೇಳಿದ್ದರು.
ಇದಕ್ಕೆ ನಲಗೊಂಡಾ ಜಿಲ್ಲೆಯ ಮನುಗೋಡೆ ಶಾಸಕ ರಾಜ್ ಗೋಪಾಲ್ ರೆಡ್ಡಿ ಪ್ರತಿಕ್ರಿಯಿಸಿ, ‘ರಾಷ್ಟ್ರೀಯ ಪಕ್ಷವಾಗಿರುವ ಕಾಂಗ್ರೆಸ್‌ನಲ್ಲಿ, ಮುಖ್ಯಮಂತ್ರಿಯನ್ನು ಹೈಕಮಾಂಡ್ ನಿರ್ದೇಶನದಂತೆ ಪ್ರಜಾಸತ್ತಾತ್ಮಕವಾಗಿ ಆಯ್ಕೆ ಮಾಡಲಾಗುತ್ತದೆ. ತೆಲಂಗಾಣವನ್ನು ಸ್ವಂತ ಸಾಮ್ರಾಜ್ಯವಾಗಿಸಿಕೊಳ್ಳಲು ನಿಜವಾದ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಅನುವು ಮಾಡಿಕೊಡುವುದಿಲ್ಲ’ ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.