ಸಾರಾಂಶ
ಪ್ರಸ್ತುತ ರಾಜ್ಯದಲ್ಲಿ ಸರ್ಕಾರಿ ಉದ್ಯೋಗ, ಶಿಕ್ಷಣ ಸಂಸ್ಥೆಗಳು ಹಾಗೂ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಹಿಂದುಳಿದ ವರ್ಗ (ಬಿ.ಸಿ.)ಗಳಿಗೆ ನೀಡಲಾಗುತ್ತಿರುವ ಮೀಸಲಾತಿಯನ್ನು ಶೇ.23ರಿಂದ ಶೇ.42ಕ್ಕೆ ಏರಿಸಲಾಗುವುದು ಎಂದು ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ ರೆಡ್ಡಿ ಘೋಷಿಸಿದ್ದಾರೆ.
ನವದೆಹಲಿ: ಪ್ರಸ್ತುತ ರಾಜ್ಯದಲ್ಲಿ ಸರ್ಕಾರಿ ಉದ್ಯೋಗ, ಶಿಕ್ಷಣ ಸಂಸ್ಥೆಗಳು ಹಾಗೂ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಹಿಂದುಳಿದ ವರ್ಗ (ಬಿ.ಸಿ.)ಗಳಿಗೆ ನೀಡಲಾಗುತ್ತಿರುವ ಮೀಸಲಾತಿಯನ್ನು ಶೇ.23ರಿಂದ ಶೇ.42ಕ್ಕೆ ಏರಿಸಲಾಗುವುದು ಎಂದು ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ ರೆಡ್ಡಿ ಘೋಷಿಸಿದ್ದಾರೆ. ರಾಜ್ಯದಲ್ಲಿ ಜಾತಿಗಣತಿ ನಡೆಸಿ ಅದರ ಅಂಕಿ ಅಂಶಗಳನ್ನು ಬಹಿರಂಗಪಡಿಸಿದ ಬೆನ್ನಲ್ಲೇ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ.
‘ಪ್ರಸ್ತುತ ಹಿಂದುಳಿದ ವರ್ಗಗಳಿಗೆ ನೀಡಲಾಗುತ್ತಿರುವ ಮೀಸಲಾತಿಯನ್ನು ಶೇ.23ರಿಂದ ಶೇ.42ಕ್ಕೆ ಏರಿಸಲಾಗುವುದು. ನಾವು ಇದನ್ನು ಧರ್ಮದ ಆಧಾರದ ಮೇಲೆ ಜಾರಿಗೆ ತರುತ್ತಿಲ್ಲ, ಬದಲಾಗಿ ಜಾತಿಯ ಆಧಾರದ ಮೇಲೆ ಜಾರಿಗೆ ತರುತ್ತಿದ್ದೇವೆ’ ಎಂದು ಹೇಳಿದರು.
ಈ ಮೊದಲು ಶೇ.34ರಷ್ಟಿದ್ದ ಮೀಸಲಾತಿಯನ್ನು ಹಿಂದಿನ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಶೇ.23ಕ್ಕೆ ಇಳಿಸಿದ್ದರು. ರೇವಂತ್ ರೆಡ್ಡಿ ಅದನ್ನೀಗ ಪುನಃ 42ಕ್ಕೆ ಏರಿಸಲು ಮುಂದಾಗಿದ್ದಾರೆ.
ದಿನಕ್ಕೆ 10 ತಾಸು ಕೆಲಸ ಅವಧಿಗೆ ತೆಲಂಗಾಣ ಸರ್ಕಾರದ ಸಮ್ಮತಿ
ವಾಣಿಜ್ಯ ಸಂಸ್ಥೆಗಳಲ್ಲಿ ಉದ್ಯೋಗಿಗಳ ಕೆಲಸದ ಅವಧಿಯನ್ನು 10 ಗಂಟೆಗೆ ನಿಗದಿ ಪಡಿಸುವ ಕಾನೂನಿಗೆ ತೆಲಂಗಾಣ ಸರ್ಕಾರ ಅನುಮೋದನೆ ನೀಡಿದೆ. ಆದರೆ ಉದ್ಯೋಗಿಗಳ ಕೆಸಲದ ಅವಧಿ ವಾರಕ್ಕೆ 48 ಗಂಟೆ ಮೀರಬಾರದು ಎಂದು ಸೂಚಿಸಿದೆ. ರಾಜ್ಯದಲ್ಲಿ ಉದ್ಯಮ ಸ್ನೇಹಿ ನೀತಿ ಜಾರಿ ನಿಟ್ಟಿನಲ್ಲಿ ಈ ಅನುಮತಿ ನೀಡಲಾಗಿದೆ.
ಅಂಗಡಿಗಳನ್ನು ಹೊರತು ಪಡಿಸಿ ಉಳಿದ ವಾಣಿಜ್ಯ ಸಂಸ್ಥೆಗಳಲ್ಲಿ ಕಾರ್ಮಿಕರ ಸುರಕ್ಷತೆಯ ಎಲ್ಲಾ ನಿಯಮಗಳಿಗೆ ಒಳಪಟ್ಟು ಉದ್ಯೋಗಿಗಳು ನಿತ್ಯ 10 ಗಂಟೆ ಕೆಲಸ ಮಾಡುವ ಪ್ರಸ್ತಾವನೆಗೆ ಸರ್ಕಾರ ಅನುಮತಿ ನೀಡಿದೆ. ಜೊತೆಗೆ ವಾರಕ್ಕೆ 48 ಗಂಟೆಗಳ ಮಿತಿ ಹೇರಿರುವ ಸರ್ಕಾರ ಅಧಿಕ ಅವಧಿ ಕೆಲಸ ಮಾಡಿಸಿಕೊಂಡರೆ ಹೆಚ್ಚಿನ ವೇತನವನ್ನು ನೀಡಬೇಕು ಎಂದಿದೆ.
ಇನ್ನು ಈ ಕಾನೂನಿಗೆ ಸಂಬಂಧಿಸಿದಂತೆ ಹಲವು ನಿಯಮಗಳನ್ನು ಪ್ರಕಟಿಸಿರುವ ಸರ್ಕಾರ, ಒಬ್ಬ ಉದ್ಯೋಗಿ ಒಂದು ದಿನದಲ್ಲಿ 6 ಗಂಟೆ ಕೆಲಸ ಮಾಡಿದರೆ 30 ನಿಮಿಷ ವಿಶ್ರಾಂತಿಯನ್ನು ಪಡೆಯಬೇಕು. ಅಧಿಕ ಅವಧಿಯನ್ನು ಸೇರಿಸಿ ದಿನದ ಕೆಲಸದ ಸಮಯ 12 ಗಂಟೆ ಮೀರಬಾರದು ಎಂದಿದೆ. ಜೊತೆಗೆ 3 ತಿಂಗಳ ಅವಧಿಗೆ ಉದ್ಯೋಗಿಗಳ ಒಟ್ಟು ಕೆಲಸದ ಸಮಯ 144 ಗಂಟೆಗೆ ಮಿತಿಗೊಳಿಸಿದೆ.