ಸಾರಾಂಶ
ನವದೆಹಲಿ : ಲೋಕಸಭೆಯಲ್ಲಿ ಮಂಗಳವಾರ ಕಾಂಗ್ರೆಸ್ ಪಕ್ಷ ಹಾಗೂ ರಾಹುಲ್ ಗಾಂಧಿ ವಿರುದ್ಧ ತೀಕ್ಷ್ಣ ವಾಗ್ದಾಳಿ ನಡೆಸಿದ್ದ ಪ್ರಧಾನಿ ನರೇಂದ್ರ ಮೋದಿ, ಬುಧವಾರ ರಾಜ್ಯಸಭೆಯಲ್ಲೂ ತಮ್ಮ ರಣಾರ್ಭಟವನ್ನು ಮುಂದುವರೆಸಿದ್ದಾರೆ. ‘ಭಾರತದ ಸಂವಿಧಾನಕ್ಕೆ ಅತಿದೊಡ್ಡ ಶತ್ರುವೆಂದರೆ ಕಾಂಗ್ರೆಸ್. ಏಕೆಂದರೆ ತುರ್ತುಸ್ಥಿತಿ ಹೇರಿದವರು ಇಂದು ಸಂವಿಧಾನ ರಕ್ಷಣೆಯ ನಾಟಕ ಆಡುತ್ತಿದ್ದಾರೆ’ ಎಂದು ಗಂಭೀರ ಆರೋಪ ಮಾಡಿದ್ದಾರೆ.
ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಉತ್ತರಿಸಿದ ಮೋದಿ, ‘ಕಾಂಗ್ರೆಸ್ ಪಕ್ಷ ನಮ್ಮ ದೇಶದ ಸಂವಿಧಾನದ ಅತಿದೊಡ್ಡ ಶತ್ರು. ಜನರನ್ನು ದಾರಿತಪ್ಪಿಸಲು ಅವರು ಸುಳ್ಳು ಕತೆಗಳನ್ನು ಹೆಣೆಯುತ್ತಿದ್ದಾರೆ. 2024ರ ಚುನಾವಣೆ ಸಂವಿಧಾನವನ್ನು ರಕ್ಷಿಸುವುದಕ್ಕೋಸ್ಕರ ನಡೆಯುತ್ತಿದೆ ಎಂದು ಕಾಂಗ್ರೆಸ್ ಹೇಳಿತ್ತು. ಸಂವಿಧಾನವನ್ನು ಚೆನ್ನಾಗಿ ರಕ್ಷಿಸುವವರು ನಾವೇ ಎಂಬ ಕಾರಣಕ್ಕೆ ಜನರು ಎನ್‌ಡಿಎಯನ್ನು ಗೆಲ್ಲಿಸಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.
ಮೋದಿ ತೀಕ್ಷ್ಣ ವಾಗ್ದಾಳಿ ನಡೆಸುತ್ತಿದ್ದಾಗಲೇ ವಿರೋಧ ಪಕ್ಷಗಳ ಸದಸ್ಯರು ಸಭಾತ್ಯಾಗ ಮಾಡಿದರು. ಅದನ್ನೂ ತೀವ್ರವಾಗಿ ತರಾಟೆ ತೆಗೆದುಕೊಂಡ ಪ್ರಧಾನಿ, ‘ಮೊದಲು ಘೋಷಣೆ ಕೂಗಿ ಈಗ ಓಡಿಹೋಗುತ್ತಿದ್ದಾರೆ’ ಎಂದು ಕಿಡಿಕಾರಿದರು. ಸಭಾಪತಿ ಜಗದೀಪ್ ಧನಕರ್ ಕೂಡ ವಿಪಕ್ಷಗಳ ನಡೆ ಸಂವಿಧಾನಕ್ಕೆ ವಿರುದ್ಧವಾದುದು ಎಂದು ಆಕ್ಷೇಪಿಸಿದರು.
1977ರ ‘ಸಂವಿಧಾನ ರಕ್ಷಿಸಿ’ ಚುನಾವಣೆ:
‘ದೇಶದಲ್ಲಿ ಸಂವಿಧಾನವನ್ನು ರಕ್ಷಿಸುವುದಕ್ಕಾಗಿ ನಡೆದ ಚುನಾವಣೆಯೆಂದರೆ 1977ರ ಚುನಾವಣೆ. ಅದಕ್ಕೂ ಮುನ್ನ ಕಾಂಗ್ರೆಸ್ ಪಕ್ಷ ಸಂವಿಧಾನವನ್ನು ದುರ್ಬಳಕೆ ಮಾಡಿಕೊಂಡು ದೇಶದಲ್ಲಿ ತುರ್ತುಸ್ಥಿತಿ ಜಾರಿಗೊಳಿಸಿತ್ತು. ನಾವು ಸಂವಿಧಾನವನ್ನು ರಕ್ಷಿಸುತ್ತೇವೆಂದು ಜನರಿಗೆ ನಮ್ಮ ಮೇಲೆ ನಂಬಿಕೆ ಇರುವುದರಿಂದಲೇ ನಮಗೆ ಮತ ಹಾಕಿದ್ದಾರೆ. ಕಾಂಗ್ರೆಸಿಗರು ಇಲ್ಲೂ ಆಷಾಢಭೂತಿತನ ತೋರುತ್ತಿದ್ದಾರೆ’ ಎಂದು ಮೋದಿ ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ತನ್ನ ಅಧಿಕಾರದಲ್ಲಿ ಸಂವಿಧಾನಕ್ಕೆ ಸಾಕಷ್ಟು ಬಾರಿ ಅಪಚಾರ ಎಸಗಿದೆ. ತುರ್ತುಸ್ಥಿತಿಯ ವೇಳೆ ಲೋಕಸಭೆಯ ಅವಧಿಯನ್ನೇ ಏಳು ವರ್ಷಕ್ಕೆ ವಿಸ್ತರಿಸಿತ್ತು. ಅಧಿಕಾರದಲ್ಲಿದ್ದಾಗ ರಾಷ್ಟ್ರೀಯ ಸಲಹಾ ಮಂಡಳಿ ರಚಿಸಿತ್ತು. ಇದನ್ನೆಲ್ಲ ಒಂದು ಕುಟುಂಬವನ್ನು ರಕ್ಷಿಸುವುದಕ್ಕಾಗಿ ಮಾಡಿತ್ತು. ಹೀಗೆಲ್ಲ ಮಾಡಬಹುದು ಎಂದು ಸಂವಿಧಾನದಲ್ಲಿ ಎಲ್ಲಿ ಬರೆದಿದೆ ಎಂದು ಪ್ರಶ್ನಿಸಿದರು.
ದಲಿತರಿಗೆ ಸಾಂವಿಧಾನಿಕ ಅಪಚಾರ:
ದೇಶವನ್ನು ದಾರಿತಪ್ಪಿಸುವುದಕ್ಕೆ ಕಾಂಗ್ರೆಸ್ ಪಕ್ಷ ಸುಳ್ಳು ಕತೆಗಳನ್ನು ಹೆಣೆಯುತ್ತಿದೆ. ನಕಲಿ ವಿಡಿಯೋಗಳನ್ನು ಹರಿಬಿಡುತ್ತಿದೆ. ಅಭಿವೃದ್ಧಿ ಬಗ್ಗೆ ಗಮನಹರಿಸುವುದನ್ನು ಬಿಟ್ಟು ‘ಭ್ರಷ್ಟರನ್ನು ರಕ್ಷಿಸಿ’ ಆಂದೋಲನ ನಡೆಸುತ್ತಿದೆ. ಕಾಂಗ್ರೆಸ್ ಜೊತೆ ಕೆಲ ಹಿಂದುಳಿದ ಹಾಗೂ ದಲಿತ ವರ್ಗಗಳನ್ನು ಪ್ರತಿನಿಧಿಸುವ ರಾಜಕೀಯ ಪಕ್ಷಗಳು ಕೈಜೋಡಿಸಿವೆ. ಆದರೆ ದಲಿತರನ್ನು ಸಾಂವಿಧಾನಿಕವಾಗಿ ಕಾಂಗ್ರೆಸ್ ಶೋಷಣೆ ಮಾಡುತ್ತಲೇ ಬಂದಿದೆ ಎಂಬುದು ಅವುಗಳಿಗೆ ಗೊತ್ತಿಲ್ಲವೇ? ಸೋಲುತ್ತೇವೆ ಎಂಬ ಗ್ಯಾರಂಟಿಯಿರುವ ಚುನಾವಣೆಗಳಲ್ಲೆಲ್ಲ ಕಾಂಗ್ರೆಸ್ ಪಕ್ಷ ದಲಿತ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಅವಮಾನ ಮಾಡಿದೆ ಎಂದು ಮೋದಿ ಆರೋಪಿಸಿದರು.
ಸತ್ಯವನ್ನು ಕೇಳುವ ಧೈರ್ಯ ಏಕಿಲ್ಲ: /ಮೋದಿ ಭಾಷಣದ ನಡುವೆ ವಿಪಕ್ಷಗಳ ಸದಸ್ಯರು ಸಭಾತ್ಯಾಗ ಮಾಡಿದರು. ಆಗಲೂ ವಾಗ್ದಾಳಿ ನಡೆಸಿದ ಮೋದಿ, ‘ತಾವೇ ಎತ್ತಿದ ಪ್ರಶ್ನೆಗಳಿಗೆ ಉತ್ತರ ಕೇಳುವ ಧೈರ್ಯ ಹಾಗೂ ಸತ್ಯವನ್ನು ಎದುರಿಸುವ ತಾಕತ್ತು ಇವರಿಗಿಲ್ಲ. ಇಡೀ ದೇಶ ನಿಮ್ಮನ್ನು ನೋಡುತ್ತಿದೆ. ಸುಳ್ಳು ಹರಡುವವರಿಗೆ ಸತ್ಯವನ್ನು ಕೇಳುವ ಧೈರ್ಯವಿಲ್ಲ ಎಂದು ಎಲ್ಲರೂ ಅಂದುಕೊಳ್ಳುತ್ತಾರೆ. ಮೇಲ್ಮನೆಯ ಸಂಪ್ರದಾಯ ಮುರಿದು ಇವರು ಸಭಾತ್ಯಾಗ ಮಾಡುತ್ತಿದ್ದಾರೆ. ಆರೋಪ ಮಾಡಿ ಓಡಿಹೋಗುತ್ತಿದ್ದಾರೆ’ ಎಂದು ಕುಟುಕಿದರು.
ಕಾಂಗ್ರೆಸಿಗರ ಸಭಾತ್ಯಾಗದ ಬಳಿಕವೂ ಪ್ರಧಾನಿ ತೀಕ್ಷ್ಣ ವಾಗ್ದಾಳಿ ಮುಂದುವರೆಸಿದರು.