ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಕಳೆದ ಕೆಲವು ತಿಂಗಳುಗಳಿಂದ ಆರೋಪಿಸುತ್ತಾ ಬಂದಿರುವ ಮತಗಳ್ಳತನವು ಬುಧವಾರ ಅಧಿವೇಶನದಲ್ಲಿ ರಾಹುಲ್ ಮತ್ತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ನಡುವೆ ತೀವ್ರ ವಾಕ್ಸಮರಕ್ಕೆ ಕಾರಣವಾಯಿತು.

 ನವದೆಹಲಿ: ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಕಳೆದ ಕೆಲವು ತಿಂಗಳುಗಳಿಂದ ಆರೋಪಿಸುತ್ತಾ ಬಂದಿರುವ ಮತಗಳ್ಳತನವು ಬುಧವಾರ ಅಧಿವೇಶನದಲ್ಲಿ ರಾಹುಲ್ ಮತ್ತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ನಡುವೆ ತೀವ್ರ ವಾಕ್ಸಮರಕ್ಕೆ ಕಾರಣವಾಯಿತು.ಚುನಾವಣಾ ಸುಧಾರಣೆ ಕುರಿತು ಬುಧವಾರ ಲೋಕಸಭೆಯಲ್ಲಿ ಮಾತನಾಡಿದ ಅಮಿತ್‌ ಶಾ, ‘ಭ್ರಷ್ಟ ಕ್ರಮಗಳಿಂದ ಚುನಾವಣೆ ಗೆಲ್ಲಲು ಅಸಾಧ್ಯ ಎಂದು ಖಚಿತವಾದ ಬಳಿಕ ವಿಪಕ್ಷಗಳು ವಿಶೇಷ ಮತಪಟ್ಟಿ ಪರಿಷ್ಕರಣೆ ವಿಷಯವನ್ನು ಎತ್ತಿಕೊಂಡಿವೆ. ವಾಸ್ತವವಾಗಿ ಕಾಂಗ್ರೆಸ್‌ ಸೋಲಿಗೆ ಮತಚೋರಿಯಾಗಲೀ, ಇವಿಎಂಗಳಾಗಲೀ ಅಲ್ಲ, ಬದಲಾಗಿ ಅದರ ನಾಯಕತ್ವ ಎಂದು ಹೆಸರು ಹೇಳದೆಯೇ ರಾಹುಲ್‌ ಗಾಂಧಿ ಕಾಲೆಳೆದರು.

ಜೊತೆಗೆ, ‘ಅಕ್ರಮ ವಲಸಿಗರ ಹೆಸರು ಮತಪಟ್ಟಿಯಲ್ಲಿ ಎಂಬುದು ವಿಪಕ್ಷಗಳ ಆಸೆ. ಅದಕ್ಕಾಗಿಯೇ ಅವು ಪರಿಷ್ಕರಣೆ ವಿರೋಧಿಸುತ್ತಿವೆ. ಆದರೆ ಎಲ್ಲಾ ಅನ್ಯದೇಶೀಯರ ಹೆಸರು ರದ್ದತಿ ನರೇಂದ್ರ ಮೋದಿ ಸರ್ಕಾರದ ದೃಢ ನಿಲುವು. ಅವರ ಹೆಸರು ತೆಗೆಯುವುದು ಮಾತ್ರವಲ್ಲದೇ ಅವರನ್ನು ದೇಶದಿಂದಲೇ ಹೊರಹಾಕುವುದು ನಮ್ಮ ಸರ್ಕಾರದ ಸಂಕಲ್ಪ ಎಂದರು.

ಈ ವೇಳೆ ಮಧ್ಯಪ್ರವೇಶಿಸಿದ ರಾಹುಲ್‌, ‘ಬಿಜೆಪಿ ಮತ್ತು ಚುನಾವಣಾ ಆಯೋಗ ನಡೆಸುತ್ತಿರುವ ಮತಚೋರಿ ಕುರಿತು ಈಗಾಗಲೇ 3 ಸುದ್ದಿಗೋಷ್ಠಿಗಳನ್ನು ನಡೆಸಿದ್ದೇನೆ. ಅವುಗಳ ಮೇಲೆ ಚರ್ಚೆ ನಡೆಸುವಂತೆ ಅಮಿತ್‌ ಶಾ ಅವರಿಗೆ ಸವಾಲೆಸೆಯುತ್ತಿದ್ದೇನೆ’ ಎಂದರು.

ಇದಕ್ಕೆ ತಿರುಗೇಟು ನೀಡಿದ ಶಾ, ‘ಪ್ರತಿಪಕ್ಷ ನಾಯಕರ ಇಚ್ಛೆಯಂತೆ ನಾನು ನನ್ನ ಭಾಷಣವನ್ನು ರೂಪಿಸುವುದಿಲ್ಲ. ಯಾರದ್ದೋ ಬೇಡಿಕೆಗಾಗಿ ನನ್ನ ವಾದದ ಸರಣಿಯನ್ನು ಬದಲಿಸುವುದಿಲ್ಲ’ ಎಂದರು.ಇದಕ್ಕೆ ಪ್ರತ್ಯುತ್ತರ ನೀಡಿದ ರಾಹುಲ್‌, ‘ಅಮಿತ್ ಶಾ ರಕ್ಷಣಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ. ಇದು ಗಲಿಬಿಲಿ ಮತ್ತು ಭಯದಿಂದ ನೀಡಲಾದ ಪ್ರತಿಕ್ರಿಯೆ’ ಎಂದು ಚಾಟಿ ಬೀಸಿದರು. ಈ ವೇಳೆ ಸದನದಲ್ಲಿ ಕಾವೇರಿದ ವಾತಾವರಣ ನಿರ್ಮಾಣವಾಯಿತು.

ಮಾಹಿತಿ ಆಯುಕ್ತರ ಆಯ್ಕೆಗೆ ಮೋದಿ, ಶಾ, ರಾಹುಲ್‌ ಸಭೆ 

ನವದೆಹಲಿ: ಮುಖ್ಯ ಮಾಹಿತಿ ಆಯುಕ್ತರ (ಸಿಇಸಿ) ಆಯ್ಕೆಗಾಗಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹಾಗೂ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಬುಧವಾರ ಇಲ್ಲಿ 88 ನಿಮಿಷಗಳ ಕಾಲ ಸುದೀರ್ಘ ಸಭೆ ನಡೆಸಿದರು.

ಮುಖ್ಯ ಮಾಹಿತಿ ಆಯುಕ್ತರು, ಇತರೆ 7 ಮಾಹಿತಿ ಆಯುಕ್ತರು ಮತ್ತು ವಿಚಕ್ಷಣಾ ಆಯುಕ್ತರ ಆಯ್ಕೆ ಕುರಿತಾಗಿ ಚರ್ಚೆ ನಡೆಯಿತು. ಎಲ್ಲ ಆಯ್ಕೆಗಳ ಬಗ್ಗೆಯೂ ರಾಹುಲ್‌ ಗಾಂಧಿ ಆಕ್ಷೇಪ ವ್ಯಕ್ತಪಡಿಸಿದರು. ಜೊತೆಗೆ ಲಿಖಿತ ರೂಪದಲ್ಲಿ ಆಕ್ಷೇಪಣಾ ಪತ್ರ ಸಲ್ಲಿಸಿದರು. ಅಂತಿಮವಾಗಿ ಸಭೆಯಲ್ಲಿದ್ದ ಮೂವರ ಪೈಕಿ ಇಬ್ಬರ ಸಮ್ಮತಿಯೊಂದಿಗೆ ಎಲ್ಲ ಹುದ್ದೆಗಳಿಗೆ ಅರ್ಹರನ್ನು ಆಯ್ಕೆ ಮಾಡಲಾಯಿತು ಎನ್ನಲಾಗಿದೆ.

8 ಹುದ್ದೆಗಳು ಖಾಲಿ

ಈ ಹಿಂದೆ ಮುಖ್ಯ ಮಾಹಿತಿ ಆಯುಕ್ತರಾಗಿದ್ದ ಹೀರಾಲಾಲ್‌ ಸಮಾರಿಯಾ ಅವರ ಅವಧಿ ಸೆಪ್ಟೆಂಬರ್‌ನಲ್ಲೇ ಮುಕ್ತಾಯವಾಗಿದೆ. ಮಾಹಿತಿ ಆಯೋಗದಲ್ಲಿ ಇದೂ ಸೇರಿ ಒಟ್ಟು 8 ಹುದ್ದೆಗಳು ಖಾಲಿಯಿವೆ. ಆರ್‌ಟಿಐ ಅರ್ಜಿದಾರರು ಸಲ್ಲಿಸುವ ದೂರುಗಳು ಮತ್ತು ಮೇಲ್ಮನವಿಗಳನ್ನು ನಿರ್ಧರಿಸಿ, ಮಾಹಿತಿ ಬಿಡುಗಡೆ ಮಾಡುವ ಅಧಿಕಾರ ಇವರ ಕೈಯಲ್ಲಿ ಇರುತ್ತದೆ. ಇದುವರೆಗೆ 30,838 ಅರ್ಜಿಗಳು ವಿಚಾರಣೆಗೆ ಬಾಕಿಯಿವೆ.