ಸಾರಾಂಶ
ಕಾಂಗ್ರೆಸ್‌ನಲ್ಲಿ ರಾಮಭಕ್ತೆ ಎಂಬ ಕಾರಣಕ್ಕೆ ನನ್ನ ಕಡೆಗಣನೆಯಾಗಿದೆ ಎಂದು ರಾಧಿಕಾ ಕಿಡಿಕಾರಿದ್ದರೆ ನಾನು ಬಿಜೆಪಿ ಸೇರುವೆ ಎಂದು ನಿನ್ನೆಯವರೆಗೂ ಗೊತ್ತಿರಲಿಲ್ಲ ಎಂದು ಸುಮನ್ ತಿಳಿಸಿದ್ದಾರೆ.
ನವದೆಹಲಿ: ಲೋಕಸಭೆ ಚುನಾವಣೆಯ ನಡುವೆಯೇ ಮಂಗಳವಾರ ಕಾಂಗ್ರೆಸ್ ಮಾಜಿ ನಾಯಕಿ ರಾಧಿಕಾ ಖೇರಾ ಮತ್ತು ಬಾಲಿವುಡ್ ನಟ ಶೇಖರ್ ಸುಮನ್ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸೇರ್ಪಡೆಗೊಂಡರು.
ದೆಹಲಿಯ ಪಕ್ಷದ ಪ್ರಧಾನ ಕಚೇರಿಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಮತ್ತು ರಾಷ್ಟ್ರೀಯ ಮಾಧ್ಯಮ ವಿಭಾಗದ ಉಸ್ತುವಾರಿ ಅನಿಲ್ ಬಲೂನಿ ಸೇರಿದಂತೆ ಹಿರಿಯ ನಾಯಕರು ಖೇರಾ ಮತ್ತು ಸುಮನ್ ಇಬ್ಬರನ್ನೂ ಸ್ವಾಗತಿಸಿದರು.ಕಾಂಗ್ರೆಸ್‌ನ ಮಾಧ್ಯಮ ವಿಭಾಗದ ರಾಷ್ಟ್ರೀಯ ಸಂಯೋಜಕಿಯಾಗಿ ಸೇವೆ ಸಲ್ಲಿಸಿದ್ದ ರಾಧಿಕಾ ಖೇರಾ ಅವರು ಪಕ್ಷದ ನಾಯಕತ್ವವು ಮಹಿಳೆಯರಿಗೆ ಹಾಗೂ ರಾಮಭಕ್ತರಿಗೆ ಅವಮಾನ ಮಾಡಿದೆ ಎಂದು ಆರೋಪಿಸಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಭಾನುವಾರ ರಾಜೀನಾಮೆ ನೀಡಿದ್ದರು.ಕಾಂಗ್ರೆಸ್ ವಿರುದ್ಧ ರಾಧಿಕಾ ಕಿಡಿ:
ಬಿಜೆಪಿ ಸೇರ್ಪಡೆ ವೇಳೆ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರಾಧಿಕಾ ಖೇರಾ ಅವರು ‘ಮೋದಿ ನಾಯಕತ್ವಕ್ಕೆ ಮೆಚ್ಚಿ ಇಲ್ಲಿಗೆ ಬಂದಿದ್ದೇನೆ. ಇಂದಿನ ಕಾಂಗ್ರೆಸ್ ಮಹಾತ್ಮಾ ಗಾಂಧಿಯವರ ಕಾಂಗ್ರೆಸ್‌ಗಿಂತ ಭಿನ್ನವಾಗಿದೆ, ಇದು ರಾಮ ವಿರೋಧಿ ಮತ್ತು ಹಿಂದೂ ವಿರೋಧಿಯಾಗಿದೆ. ನಾನು ರಾಮಭಕ್ತೆ ಎಂಬ ಕಾರಣಕ್ಕೆ ನನ್ನನ್ನು ಕಡೆಗಣಿಸಲಾಗಿತ್ತು’ ಎಂದು ಆರೋಪಿಸಿದರು.ನಿನ್ನೆಯವರೆಗೂ ಗೊತ್ತಿರಲಿಲ್ಲ- ಸುಮನ್:
ಬಿಜೆಪಿಗೆ ಸೇರ್ಪಡೆಯಾದ ನಂತರ ನಟ ಶೇಖರ್ ಸುಮನ್ ಮಾತನಾಡಿ, ‘ನಾನು ಇಂದು ಇಲ್ಲಿ ಕುಳಿತುಕೊಳ್ಳುತ್ತೇನೆ ಎಂದು ನಿನ್ನೆಯವರೆಗೆ ನನಗೆ ತಿಳಿದಿರಲಿಲ್ಲ, ಏಕೆಂದರೆ ಜೀವನದಲ್ಲಿ ಅನೇಕ ವಿಷಯಗಳು ತಿಳಿದೋ ಅಥವಾ ತಿಳಿಯದೆಯೋ ನಡೆಯುತ್ತದೆ, ನಾನು ಇಲ್ಲಿಗೆ ಈಗ ತುಂಬಾ ಸಕಾರಾತ್ಮಕ ಚಿಂತನೆಯೊಂದಿಗೆ ಇಲ್ಲಿಗೆ ಬಂದಿದ್ದೇನೆ. ನನ್ನನ್ನು ಇಲ್ಲಿಗೆ ಬರಲು ಆದೇಶಿಸಿದ ದೇವರಿಗೆ ಧನ್ಯವಾದಗಳು’ ಎಂದರು.