‘ಖಾಸಗಿ ವ್ಯಕ್ತಿ’ಗಳನ್ನೂ ಗಣತಿದಾರರನ್ನಾಗಿ ನೇಮಿಸಲು ಅವಕಾಶ ಮಾಡಿಕೊಡುವ ಕೇಂದ್ರ ಸರ್ಕಾರದ ತಿದ್ದುಪಡಿಗೆ ಕಾಂಗ್ರೆಸ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈ ಮೂಲಕ ಗಣತಿ ಕಾರ್ಯಕ್ಕೆ ಆರೆಸ್ಸೆಸ್‌-ಬಿಜೆಪಿ ಕಾರ್ಯಕರ್ತರನ್ನು ಬಳಸಿಕೊಳ್ಳಲು ಕೇಂದ್ರ ಸರ್ಕಾರ ಅವಕಾಶ ನೀಡಿದೆ.

ನವದೆಹಲಿ : ‘ಖಾಸಗಿ ವ್ಯಕ್ತಿ’ಗಳನ್ನೂ ಗಣತಿದಾರರನ್ನಾಗಿ ನೇಮಿಸಲು ಅವಕಾಶ ಮಾಡಿಕೊಡುವ ಕೇಂದ್ರ ಸರ್ಕಾರದ ತಿದ್ದುಪಡಿಗೆ ಕಾಂಗ್ರೆಸ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈ ಮೂಲಕ ಗಣತಿ ಕಾರ್ಯಕ್ಕೆ ಆರೆಸ್ಸೆಸ್‌-ಬಿಜೆಪಿ ಕಾರ್ಯಕರ್ತರನ್ನು ಬಳಸಿಕೊಳ್ಳಲು ಕೇಂದ್ರ ಸರ್ಕಾರ ಅವಕಾಶ ನೀಡಿದೆ. ಈ ಮೂಲಕ ಅವರಿಗೆ ‘ಉದ್ಯೋಗ ಖಾತ್ರಿ ಯೋಜನೆ’ ಜಾರಿಗೆ ಹೊರಟಿದೆ ಎಂದು ಗಂಭೀರ ಆರೋಪ ಮಾಡಿದೆ.

ಈ ನಡುವೆ, ಕಳೆದ ಜುಲೈನಲ್ಲಿ ಬೆಳಗಾವಿಯಲ್ಲಿ ನಡೆದಿದ್ದ ಆರೆಸ್ಸೆಸ್‌ ಕಾರ್ಯಕರ್ತರ ಶಿಬಿರಕ್ಕೂ ಈ ತಿದ್ದುಪಡಿಗೂ ತಳಕು ಹಾಕಿರುವ ಪಕ್ಷ, ಕೇಂದ್ರ ಸರ್ಕಾರ ಮತ್ತೊಂದು ಸಾಂವಿಧಾನಿಕ ಸಂಸ್ಥೆಯನ್ನು ಹಾಳುಗೆಡವಲು ಹೊರಟಿದೆ ಎಂದು ದೂರಿದೆ.

ಕೇಂದ್ರ ಸರ್ಕಾರವು 1990ರ ಜನಗಣತಿಯ ನಿಮಯಾವಳಿಗಳಿಗೆ ತಿದ್ದುಪಡಿ ತಂದಿದ್ದು, ಜನಗಣತಿಗೆ ಗಣತಿದಾರರಾಗಿ ಅನುದಾನಿತ ಹಾಗೂ ಅನುದಾನ ರಹಿತ ಖಾಸಗಿ ಸಂಸ್ಥೆಗಳ ಶಿಕ್ಷಕರು ಅಥವಾ ಇತರೆ ಯಾವುದೇ ಖಾಸಗಿ ವ್ಯಕ್ತಿಗಳನ್ನು ಗಣತಿದಾರರನ್ನಾಗಿ ನೇಮಿಸಲು ಅವಕಾಶ ಮಾಡಿಕೊಟ್ಟಿದೆ.

ಕಿಡಿಗೇಡಿತನ:

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌, ‘ಮೋದಿ ಸರ್ಕಾರವು ಅರ್ಹ ಗಣತಿದಾರರ ಪಟ್ಟಿ ವಿಸ್ತರಿಸಿದೆ. ಇದರ ಹಿಂದೆ ಕಿಡಿಗೇಡಿತನ ಅಡಗಿದೆ. ಕರ್ನಾಟಕದ ಬೆಳಗಾವಿಯಲ್ಲಿ ಆರೆಸ್ಸೆಸ್‌ ಕಾರ್ಯಕರ್ತರಿಗಾಗಿ ದೊಡ್ಡ ತರಬೇತಿ ಶಿಬಿರವನ್ನು ಜು.10ರಿಂದ ಜು.12ರ ನಡುವೆ ನಡೆಸಿದೆ. ಇದರ ಏಕೈಕ ಉದ್ದೇಶ 2027ರ ಜನಗಣತಿಯೇ ಆಗಿದೆ ಎಂದು ಆರೋಪಿಸಿದ್ದಾರೆ.

ಕೇಂದ್ರ ಗೃಹ ಸಚಿವಾಲಯವು ಮೇ 26ರಂದು ಸ್ಥಾಪಿಸಿದ ಜನಸಂಖ್ಯಾ ಬದಲಾವಣೆ ಕುರಿತ ಉನ್ನತ ಮಟ್ಟದ ಸಮಿತಿಯು ದೇಶದಲ್ಲಿನ ಜನಸಂಖ್ಯಾ ಬದಲಾವಣೆಗೆ ಸಂಬಂಧಿಸಿ ಸಾರ್ವಜನಿಕರು ಸೇರಿ ಭಾರತ ಮತ್ತು ವಿದೇಶಿ ಸಂಸ್ಥೆಗಳಿಂದ ಮಾಹಿತಿ ಕೇಳಿದೆ. ಈ ಸಮಿತಿಯಲ್ಲಿರುವವರು ಆರೆಸ್ಸೆಸ್‌ ವ್ಯವಸ್ಥೆ ಜತೆಗೆ ಲಿಂಕ್‌ ಹೊಂದಿದವರೇ ಆಗಿದ್ದಾರೆ. ಹೀಗಾಗಿ ಜನಸಂಖ್ಯಾ ಬದಲಾವಣೆ ಕುರಿತ ಮಾಹಿತಿ ಎಲ್ಲಿಂದ ಬರಲಿದೆ ಎಂಬುದು ನಮಗೆ ಗೊತ್ತಿದೆ ಎಂದು ಜೈರಾಮ್‌ ರಮೇಶ್‌ ಹೇಳಿದ್ದಾರೆ.

ಹೀಗಾಗಿ ಅ.16ರಂದು ಕೇಂದ್ರ ಸರ್ಕಾರ ಜನಗಣತಿ ಸಂಬಂಧ ಹೊರಡಿಸಿರುವ ಅಧಿಸೂಚನೆಯನ್ನು ಆರೆಸ್ಸೆಸ್‌ನ ಜು.10-12ರ ತರಬೇತಿ ಶಿಬಿರ ಹಾಗೂ ಜನಸಂಖ್ಯಾ ಬದಲಾವಣೆ ಸಮಿತಿಯು ಅ.14ರಂದು ಮಾಹಿತಿಗಳನ್ನು ಕೇಳಿದ್ದನ್ನು ಹಿನ್ನೆಲೆಯಾಗಿಟ್ಟುಕೊಂಡು ನೋಡಬೇಕಿದೆ ಎಂದು ಅವರು ತಿಳಿಸಿದ್ದಾರೆ.

ಒಂದು ರೀತಿಯಲ್ಲಿ ಇದು ಆರೆಸ್ಸೆಸ್‌ ಮತ್ತು ಬಿಜೆಪಿ ಕಾರ್ಯಕರ್ತರ ಪಾಲಿನ ಉದ್ಯೋಗ ಖಾತ್ರಿ ಯೋಜನೆಯಂತಿದೆ. ಇದು ಈಗಾಗಲೇ ಬಡಮೇಲು ಮಾಡಲಾಗಿರುವ ಜನಗಣತಿ ವ್ಯವಸ್ಥೆಗೆ ಇನ್ನಷ್ಟು ಕಳಂಕ ಹಚ್ಚಲಿದೆ. ಈ ಸರ್ಕಾರದಡಿ ಮತ್ತೊಂದು ಸಂಸ್ಥೆಯನ್ನು ನಾಶ ಮಾಡಲಾಗಿದೆ. ಎಸ್‌ಐಆರ್‌ ರೀತಿ ಜನಗಣತಿಯನ್ನೂ ಅಪಾಯಕಾರಿಯಾಗಿ ಬದಲಾಯಿಸಲಾಗುತ್ತಿದೆ.

ರೋಜಗಾರ್‌ ಯೋಜನೆ

ಆರ್‌ಎಸ್‌ಎಸ್ ತನ್ನ ಕಾರ್ಯಕರ್ತರಿಗೆ ಜು.10ರಿಂದ 12ರವರೆಗೆ ಬೆಳಗಾವಿಯಲ್ಲಿ ದೊಡ್ಡ ತರಬೇತಿ ಶಿಬಿರ ನಡೆಸಿತ್ತು. ಇದರ ಹಿಂದೆ 2027ರ ಜನಗಣತಿ ಅಜೆಂಡಾ ಇತ್ತು. ಗಣತಿಗೆ ಆರೆಸ್ಸೆಸ್‌, ಬಿಜೆಪಿಗರ ಬಳಕೆಯ ದುರುದ್ದೇಶವಿದೆ. ಇದು ಅವರ ಪಾಲಿಗೆ ರೋಜಗಾರ್‌ ಯೋಜನೆ.

- ಜೈರಾಂ ರಮೇಶ್‌, ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ