ಸಾರಾಂಶ
ಪುಣೆ: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ಮುಂದುವರೆಸಿರುವ ಪ್ರಧಾನಿ ನರೇಂದ್ರ ಮೋದಿ, ‘ಕರ್ನಾಟಕ ಸರ್ಕಾರ ಹಾಡಹಗಲೇ ಲೂಟಿಯಲ್ಲಿ ಮುಳುಗಿದೆ. ಅಲ್ಲಿ ದಿನಕ್ಕೊಂದು ಹಗರಣ ಬೆಳಕಿಗೆ ಬರುತ್ತಿವೆ’ ಎಂದು ಕಿಡಿಕಾರಿದ್ದಾರೆ.
ಮಂಗಳವಾರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಭಾಗವಾಗಿ ಪ್ರಚಾರ ಭಾಷಣ ಮಾಡಿದ ಪ್ರಧಾನಿ ಮೋದಿ, ‘ಕರ್ನಾಟಕದಲ್ಲಿ ಕಾಂಗ್ರೆಸ್ ಸುಳ್ಳು ಹೇಳಿ ಅಧಿಕಾರಕ್ಕೇರಿದೆ. ಆದರೆ ಕೊಟ್ಟ ಭರವಸೆಗಳನ್ನು ಈಗ ಈಡೇರಿಸಲಾಗದೆ ರಾಜ್ಯವನ್ನು ಸುಲಿಗೆ ಮಾಡುತ್ತಿದೆ’ ಎಂದು ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಟೀಕಾಪ್ರಹಾರ ಮಾಡಿದರು.
ಜೊತೆಗೆ, ‘ಪ್ರತಿ ದಿನ ಕರ್ನಾಟಕದಲ್ಲಿ ಒಂದೊಂದೇ ಹಗರಣಗಳು ಬೆಳಕಿಗೆ ಬರುತ್ತಿವೆ. ಕಾಂಗ್ರೆಸ್ ಹಾಡಹಗಲೇ ರಾಜ್ಯವನ್ನು ಲೂಟಿ ಮಾಡಿ, ಆ ಹಣವನ್ನು ಮಹಾರಾಷ್ಟ್ರ ಚುನಾವಣೆಯಲ್ಲಿ ಬಳಸುತ್ತಿದೆ ಎಂಬ ಆರೋಪವಿದೆ. ಹೀಗಾಗಿ ಇಲ್ಲೂ ಅಂಥ ಸರ್ಕಾರ ರಚನೆ ತಡೆದು ಮಹಾರಾಷ್ಟ್ರವನ್ನು ಉಳಿಸಲು ಕಾಂಗ್ರೆಸ್ ಅನ್ನು ಅಧಿಕಾರದಿಂದ ದೂರ ಇಡಬೇಕು’ ಎಂದು ಕರೆ ನೀಡಿದರು.
ಎರಡು ದಿನಗಳ ಹಿಂದೆ ಅಕೋಲಾದಲ್ಲಿ ಮಾತನಾಡಿದ್ದ ಮೋದಿ ‘ಕಾಂಗ್ರೆಸ್ ಎಲ್ಲಿ ಸರ್ಕಾರ ರಚಿಸುತ್ತದೆಯೋ ಆ ರಾಜ್ಯವು ಪಕ್ಷದ ‘ಶಾಹಿ ಪರಿವಾರ’ದ (ಗಾಂಧಿ ಪರಿವಾರದ) ಎಟಿಎಂ ಆಗುತ್ತದೆ. ಮಹಾರಾಷ್ಟ್ರ ಚುನಾವಣೆಗಾಗಿ ಕಾಂಗ್ರೆಸ್ ಆಡಳಿತವಿರುವ ಕರ್ನಾಟಕದಲ್ಲಿ ಮದ್ಯದ ವ್ಯವಹಾರದಿಂದ 700 ಕೋಟಿ ರು.ಗಳಷ್ಟು ಸುಲಿಗೆ ಮಾಡಲಾಗಿದೆ. ತೆಲಂಗಾಣ ಮತ್ತು ಹಿಮಾಚಲ ಪ್ರದೇಶದಲ್ಲೂ ಇದು ನಡೆದಿದೆ. ಈ ರಾಜ್ಯಗಳು ಶಾಹಿ ಪರಿವಾರದ ಎಟಿಎಂಗಳಾಗುತ್ತಿವೆ’ ಎಂದು ಕಿಡಿಕಾರಿದ್ದರು.