ಆರ್‌ಎಸ್‌ಎಸ್‌ ಕೇಂದ್ರ ಕಚೇರಿ ಇರುವ ನಾಗಪುರದಲ್ಲಿ ಮೊದಲ ರ್‍ಯಾಲಿ ನಡೆಸಿ ಲೋಕಸಭಾ ಚುನಾವಣೆಗೆ ಪ್ರಚಾರವನ್ನು ಕಾಂಗ್ರೆಸ್‌ ಪಕ್ಷ ಆರಂಭಿಸಲಿದೆ. ಬ್ರಿಟಿಷರ ವಿರುದ್ಧ ಇಲ್ಲೇ ಅಸಹಕಾರ ಚಳವಳಿ ಶುರುವಾಗಿತ್ತು ಎಂದು ಹಿರಿಯ ನಾಯಕ ಪಟೋಲೆ ತಿಳಿಸಿದ್ದು, 2 ಲಕ್ಷ ಜನ ಭಾಗಿಯಾಗುವ ನಿರೀಕ್ಷೆಯಿದೆ. ಹಿರಿಯ ನಾಯಕರಾದ ಖರ್ಗೆ, ಸೋನಿಯಾ, ರಾಹುಲ್‌ ಭಾಗಿಯಾಗಲಿದ್ದಾರೆ.

ನಾಗಪುರ: ತನ್ನ 139ನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಕಾಂಗ್ರೆಸ್‌ ಪಕ್ಷವು ಗುರುವಾರ ಮಹಾರಾಷ್ಟ್ರದ ನಾಗಪುರದಲ್ಲಿ ಬೃಹತ್‌ ಸಮಾವೇಶವೊಂದನ್ನು ಹಮ್ಮಿಕೊಂಡಿದೆ. ಈ ಸಮಾವೇಶದಲ್ಲಿ 2024ರ ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ತನ್ನ ರಣಕಹಳೆ ಮೊಳಗಿಸಲಿದೆ.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಮಣಿಸಲು ರೂಪಿಸಲಾಗಿರುವ ಇಂಡಿಯಾ ಮೈತ್ರಿಕೂಟದ ಭಾಗವಾಗಿರುವ ಕಾಂಗ್ರೆಸ್‌, ಗುರುವಾರದ ಸಮಾವೇಶದಲ್ಲಿ ‘ಹೈ ತಯ್ಯಾರ್‌ ಹಂ’ (ನಾವು ರೆಡಿ) ಎಂದು ಘೋಷವಾಕ್ಯದೊಂದಿಗೆ ಚುನಾವಣಾ ಸಮರದ ಸನ್ನದ್ಧತೆಯನ್ನು ಪ್ರಕಟಿಸಲಿದೆ ಎಂದು ಪಕ್ಷದ ಹಿರಿಯ ನಾಯಕ ಜೈರಾಂ ರಮೇಶ್‌ ಮಾಹಿತಿ ನೀಡಿದ್ದಾರೆ.ಈ ರ್‍ಯಾಲಿಯಲ್ಲಿ ಸುಮಾರು 2 ಲಕ್ಷ ಮಂದಿ ಭಾಗಿಯಾಗುವ ನಿರೀಕ್ಷೆ ಇದೆ. ಬಿಜೆಪಿಯ ಸೈದ್ಧಾಂತಿಕ ಮಾರ್ಗದರ್ಶಿ ಸಂಘಟನೆಯಾದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯ ಕಚೇರಿ ಇರುವ ನಾಗಪುರದಲ್ಲೇ ರ್‍ಯಾಲಿ ಹಮ್ಮಿಕೊಂಡಿರುವುದು ವಿಶೇಷ. ಈ ರ್‍ಯಾಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ವರಿಷ್ಠರಾದ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ, ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ಕಾಂಗ್ರೆಸ್‌ ಆಡಳಿತದ ಮೂರು ರಾಜ್ಯಗಳ ಮುಖ್ಯಮಂತ್ರಿಗಳು, ಎಲ್ಲಾ ರಾಜ್ಯಗಳ ಕಾಂಗ್ರೆಸ್‌ ನಾಯಕರು ಭಾಗಿಯಾಗಲಿದ್ದಾರೆ.

ನಾಗಪುರ ಹಲವು ಐತಿಹಾಸಿಕ ಪ್ರಾಮುಖ್ಯತೆಯನ್ನು ಹೊಂದಿರುವ ಜೊತೆಗೆ ಹಲವು ಚಳುವಳಿ ಮತ್ತು ಕ್ರಾಂತಿಗಳ ಮೂಲ ಸ್ಥಳವಾಗಿದೆ. ಇದೇ ಸ್ಥಳದಿಂದ ಕಾಂಗ್ರೆಸ್‌ ಬ್ರಿಟಿಷರ ವಿರುದ್ಧ ಅಸಹಕಾರ ಚಳವಳಿಯನ್ನು ಆರಂಭಿಸಿತ್ತು. ಇದು 1947ರಲ್ಲಿ ಭಾರತದ ಸ್ವಾತಂತ್ರ್ಯಕ್ಕೆ ಮೂಲ ಕಾರಣವಾಗಿತ್ತು. ಪ್ರಸ್ತುತ ಪರಿಸ್ಥಿತಿಯೂ ಸಹ ಬ್ರಿಟಿಷ್ ಕಾಲದಂತೆಯೇ ಇದೆ. ಹೀಗಾಗಿ ಇಲ್ಲಿಂದಲೇ ರ್‍ಯಾಲಿ ಆರಂಭಿಸುತ್ತಿದ್ದೇವೆ ಎಂದು ಮಹಾರಾಷ್ಟ್ರ ಕಾಂಗ್ರೆಸ್‌ ಮುಖ್ಯಸ್ಥ ನಾನಾ ಪಟೋಲೆ ಹೇಳಿದ್ದಾರೆ. ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಅಂತ್ಯಗಾಣಿಸಲು ದೇಶದಲ್ಲಿ ವ್ಯವಸ್ಥಿತವಾದ ಯೋಜನೆಗಳು ನಡೆಯುತ್ತಿವೆ. ಆದರೆ ಕಾಂಗ್ರೆಸ್‌ ಉದ್ಯೋಗ ಸೃಷ್ಟಿ ಮಾಡುವ ಭರವಸೆ ನೀಡಿದೆ. ರೈತರಿಗೆ ನ್ಯಾಯ ಒದಗಿಸಲಿದೆ. ಅಲ್ಲದೇ ಪ್ರಜಾಪ್ರಭುತ್ವದಲ್ಲಿ ಮತ್ತೆ ಜನರಿಗೆ ನಂಬಿಕೆ ಮೂಡಿಸಲಿದೆ ಎಂದು ಅವರು ಹೇಳಿದರು.