ಲೋಕಸಭೆ ಚುನಾವಣೆ: ಕಾಂಗ್ರೆಸ್‌ ಕೇವಲ 255ರಲ್ಲಿ ಸ್ಪರ್ಧೆ ಸಾಧ್ಯತೆ!

| Published : Jan 14 2024, 01:31 AM IST / Updated: Jan 14 2024, 01:48 PM IST

ಸಾರಾಂಶ

ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಕೇವಲ 255 ಸ್ಥಾನಗಳಲ್ಲಿ ಮಾತ್ರ ಸ್ಪರ್ಧಿಸಲಿದೆ. ಉಳಿದ 288 ಕ್ಷೇತ್ರಗಳಲ್ಲಿ ಅದರ ಇಂಡಿಯಾ ಮೈತ್ರಿಕೂಟದ ಮಿತ್ರ ಪಕ್ಷಗಳು ಸ್ಪರ್ಧಿಸಲಿವೆ ಎಂದು ವರದಿಗಳು ತಿಳಿಸಿವೆ. 

ನವದೆಹಲಿ: ಇಂಡಿಯಾ ಮೈತ್ರಿಕೂಟದ ಭಾಗವಾಗಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲಿರುವ ಕಾಂಗ್ರೆಸ್‌ ಈ ಬಾರಿ ಕೇವಲ 255 ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧಿಸುವ ಸಾಧ್ಯತೆಯಿದೆ. ಒಂದು ವೇಳೆ ಇದು ಖಚಿತವಾದರೆ, ಅದು 1947ರಲ್ಲಿ ಭಾರತ ಸ್ವಾತಂತ್ರ್ಯ ಪಡೆದ ನಂತರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪರ್ಧಿಸುತ್ತಿರುವ ಅತ್ಯಂತ ಕಡಿಮೆ ಸಂಖ್ಯೆಯ ಸ್ಥಾನವಾಗಲಿದೆ.

ಪ್ರಸಕ್ತ ಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷದ ಸ್ಥಿತಿ ನಾಜೂಕಾಗಿದೆ. 2014ರ ನಂತರ ಬಿಜೆಪಿ ಹೊಡೆತಕ್ಕೆ ಸಿಕ್ಕು ತತ್ತರಿಸಿದೆ, ಹೀಗಾಗಿ ಇಂಡಿಯಾ ಕೂಟ ರಚಿಸಿಕೊಂಡು ಕಾಂಗ್ರೆಸ್‌ ಪಕ್ಷ ಅದರಲ್ಲಿ ಸ್ಥಾನ ಪಡೆದಿದೆ. ಇಂಥ ಸಂದರ್ಭದಲ್ಲಿ ಮೈತ್ರಿ ರಾಜಕೀಯ ಅನಿವಾರ್ಯ. 

ಹೀಗಾಗಿ ಈ ಚುನಾವಣೆಯಲ್ಲಿ ಕೇವಲ 255 ಸ್ಥಾನಗಳಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇತ್ತೀಚಿನ ಇಂಡಿಯಾ ಕೂಟದ ಸಭೆಯಲ್ಲಿ ವರದಿ ಮಂಡಿಸಿದ್ದಾರೆ. ಅಂದರೆ ಉಳಿದ ಸ್ಥಾನಗಳಲ್ಲಿ (288) ಇಂಡಿಯಾ ಕೂಟದ 27 ಪಕ್ಷಗಳು ಸ್ಪರ್ಧಿಸಲಿವೆ.

ಸ್ವಾತಂತ್ರ್ಯದ ನಂತರ, ಕಾಂಗ್ರೆಸ್ 1951 ಮತ್ತು 2019 ರ ನಡುವೆ 17 ಲೋಕಸಭಾ ಚುನಾವಣೆಗಳಲ್ಲಿ ಸ್ಪರ್ಧಿಸಿದೆ. 2004ರಲ್ಲಿ ಕಾಂಗ್ರೆಸ್‌ ಕೇವಲ 417 ಸ್ಥಾನಗಳಲ್ಲಿ ಸ್ಪರ್ಧಿಸಿತ್ತು. ಇದು ಈವರೆಗಿನ ಕನಿಷ್ಠ. ಗಮನಾರ್ಹವೆಂದರೆ, 1996ರಲ್ಲಿ ಕಾಂಗ್ರೆಸ್ 529 ಸ್ಥಾನಗಳಲ್ಲಿ ಸ್ಪರ್ಧಿಸಿದ್ದೇ ಅತಿ ಹೆಚ್ಚು. 2014 ಮತ್ತು 2019ರ ಲೋಕಸಭಾ ಚುನಾವಣೆಯಲ್ಲಿ, ಕ್ರಮವಾಗಿ 464 ಮತ್ತು 421 ಸ್ಥಾನಗಳಲ್ಲಿ ಸ್ಪರ್ಧಿಸಿತ್ತು.

ಆದರೆ, 229ರಲ್ಲಿ ಸ್ಪರ್ಧಿಸಿದ್ದರೂ 1984 ರ ಚೊಚ್ಚಲ ವರ್ಷದಲ್ಲಿ ಕೇವಲ ಎರಡು ಸ್ಥಾನಗಳಲ್ಲಿ ಗೆದ್ದ ಬಿಜೆಪಿ, ಈಗ ಭಾರತೀಯ ಸಂಸತ್ತಿನಲ್ಲಿ 290ಕ್ಕೂ ಹೆಚ್ಚು ಸಂಸದರನ್ನು ಹೊಂದಿದೆ. ಕೇಸರಿ ಪಕ್ಷವು 1991ರಿಂದ 300ಕ್ಕಿಂತ ಕಡಿಮೆ ಸ್ಥಾನಗಳಲ್ಲಿ ಸ್ಪರ್ಧಿಸಿಲ್ಲ.