ಸಾರಾಂಶ
ಸರ್ಕಾರಿ ಗುತ್ತಿಗೆಗಳಲ್ಲಿ ಮುಸ್ಲಿಮರಿಗೆ ಶೇ.4ರಷ್ಟು ಮೀಸಲಾತಿ ಕಲ್ಪಿಸುವ ಕರ್ನಾಟಕ ಸರ್ಕಾರದ ಕ್ರಮ ಇದೀಗ ಲೋಕಸಭೆಯಲ್ಲೂ ಪ್ರತಿಧ್ವನಿಸಿದೆ. ಬುಧವಾರ ಲೋಕಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಬಿಜೆಪಿ ಸಂಸದರಾದ ತೇಜಸ್ವಿ ಸೂರ್ಯ, ನಿಶಿಕಾಂತ್ ದುಬೆ ಬುಧವಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನವದೆಹಲಿ: ಸರ್ಕಾರಿ ಗುತ್ತಿಗೆಗಳಲ್ಲಿ ಮುಸ್ಲಿಮರಿಗೆ ಶೇ.4ರಷ್ಟು ಮೀಸಲಾತಿ ಕಲ್ಪಿಸುವ ಕರ್ನಾಟಕ ಸರ್ಕಾರದ ಕ್ರಮ ಇದೀಗ ಲೋಕಸಭೆಯಲ್ಲೂ ಪ್ರತಿಧ್ವನಿಸಿದೆ. ಬುಧವಾರ ಲೋಕಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಬಿಜೆಪಿ ಸಂಸದರಾದ ತೇಜಸ್ವಿ ಸೂರ್ಯ, ನಿಶಿಕಾಂತ್ ದುಬೆ ಬುಧವಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಸರ್ಕಾರದ ಈ ನಡೆಯನ್ನು ಅಸಾಂವಿಧಾನಿಕ ಎಂದು ಕರೆದಿರುವ ಬಿಜೆಪಿ ಸಂಸದರು, ಇಂಥ ಕ್ರಮಗಳೇ ದೇಶದ ವಿಭಜನೆಗೆ ಕಾರಣವಾಗಿವೆ ಎಂದು ಆರೋಪಿಸಿದ್ದಾರೆ. ಜತೆಗೆ ಇಂಥ ಸಂವಿಧಾನ ವಿರೋಧಿ ನಡೆ ವಿರುದ್ಧ ನ್ಯಾಯಾಲಯ, ಅಸೆಂಬ್ಲಿ, ಸಂಸತ್ತಿನಲ್ಲಿ ಹೋರಾಟ ಮಾಡುವುದಾಗಿಯೂ ಘೋಷಿಸಿದ್ದಾರೆ.
ಲೋಕಸಭೆಯ ಶೂನ್ಯವೇಳೆಯಲ್ಲಿ ಈ ವಿಚಾರ ಪ್ರಸ್ತಾಪಿಸಿದ ಸಂಸದ ನಿಶಿಕಾಂತ್ ದುಬೆ ಮತ್ತು ತೇಜಸ್ವಿ ಸೂರ್ಯ ಅವರು, ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಕಾಯ್ದೆ(ತಿದ್ದುಪಡಿ)ಯನ್ನು ವಾಪಸ್ ಪಡೆಯುವಂತೆ ಒತ್ತಾಯಿಸಿದರು.
ಕಾಂಗ್ರೆಸ್ 1937ರಲ್ಲಿ ಮುಸ್ಲಿಂ ಲೀಗ್ ಜತೆಗೆ ಸೇರಿಕೊಂಡು ಪ್ರಾಂತೀಯ ಸರ್ಕಾರ ರಚಿಸಲು ಒಪ್ಪಿಕೊಂಡಿತ್ತು. ನಂತರ ಇದು 1947ರಲ್ಲಿ ಭಾರತದ ವಿಭಜನೆಗೆ ಕಾರಣವಾಯಿತು. ಇದೀಗ ಜಾತಿಗಣತಿ ಮತ್ತು ಧರ್ಮದ ಆಧಾರದ ಮೇಲೆ ಗುತ್ತಿಗೆಗಳನ್ನು ನೀಡುವ ಮೂಲಕ ದೇಶವನ್ನು ಮತ್ತೆ ವಿಭಜನೆಯತ್ತ ಕೊಂಡೊಯ್ಯಲು ಕಾಂಗ್ರೆಸ್ ಹೊರಟಿದೆ. ಕೇವಲ ವೋಟ್ ಬ್ಯಾಂಕ್‌ಗಾಗಿ ಕಾಂಗ್ರೆಸ್ ಈ ರೀತಿ ಮಾಡುತ್ತಿದೆ ಎಂದು ದುಬೆ ಆರೋಪಿಸಿದರು.
ಕರ್ನಾಟಕ ಮತ್ತು ತೆಲಂಗಾಣದಲ್ಲಿರುವ ಕಾಂಗ್ರೆಸ್ ಸರ್ಕಾರಗಳು ಒಬಿಸಿಗೆ ಮೀಸಲು ಕಡಿತ ಮಾಡಿ ಮುಸ್ಲಿಮರಿಗೆ ಮೀಸಲಾತಿ ನೀಡುತ್ತಿವೆ.
ಕಾಂಗ್ರೆಸ್ ಮತ್ತು ಇತರೆ ಪ್ರತಿಪಕ್ಷಗಳು ಮುಸ್ಲಿಮರ ಮೀಸಲಾತಿ ವಿಸ್ತರಿಸುವ ಮೂಲಕ ದೇಶದ ಸಾಮಾಜಿಕ ಸಾಮರಸ್ಯ ಹಾಳುಗೆಡವಲು ಹೊರಟಿವೆ. ಸಂವಿಧಾನವು ಧರ್ಮದ ಹೆಸರಿನಲ್ಲಿ ತಾರತಮ್ಯ ಮಾಡಲು ಯಾವತ್ತೂ ಅವಕಾಶ ನೀಡುವುದಿಲ್ಲ ಎಂದ ಅವರು, ಕೇಂದ್ರ ಸರ್ಕಾರವು ಪ್ರತಿಪಕ್ಷಗಳ ಓಲೈಕೆ ರಾಜಕಾರಣಕ್ಕೆ ಅಂತ್ಯ ಹಾಡಲು ಕಾನೂನು ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
ಸಂಸದೀಯ ವ್ಯವಹಾರಗಳ ಖಾತೆ ರಾಜ್ಯ ಸಚಿವ ಅರ್ಜುನ್ ರಾಮ್ ಮೇಘ್ವಾಲ್ ಅವರು ದುಬೆ ಅವರು ಗಂಭೀರ ವಿಚಾರವನ್ನು ಪ್ರಸ್ತಾಪಿಸಿದ್ದಾರೆ ಎಂದು ಬೆಂಬಲ ವ್ಯಕ್ತಪಡಿಸಿದರು.
ಮತಾಂತರಕ್ಕೆ ಪ್ರೋತ್ಸಾಹ:
ಇದೇ ವೇಳೆ ಸಂಸದ ತೇಜಸ್ವಿ ಸೂರ್ಯ ಅವರು, ಸರ್ಕಾರಿ ಗುತ್ತಿಗೆಗಳಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡುವ ಮೂಲಕ ಮುಸ್ಲಿಂ ಧರ್ಮಕ್ಕೆ ಮತಾಂತರವಾಗಲು ಕರ್ನಾಟಕ ಕಾಂಗ್ರೆಸ್ ಸರ್ಕಾರ ಪ್ರೋತ್ಸಾಹ ನೀಡುವ ಕೆಲಸ ಮಾಡುತ್ತಿದೆ. ಈ ರೀತಿಯ ಕ್ರಮವು ಸದ್ಯ ಖಾಲಿ ಕೂತಿರುವ ಪಿಎಫ್‌ಐ ಮತ್ತು ಕೆಎಫ್‌ಡಿಯೊಂದಿಗೆ ಗುರುತಿಸಿಕೊಂಡಿರುವ ವ್ಯಕ್ತಿಗಳಿಗೆ ಅನುಕೂಲ ಮಾಡಿಕೊಡಲಿದೆ ಎಂದು ಗಂಭೀರ ಆರೋಪ ಮಾಡಿದರು.
ಸಂವಿಧಾನದ ಆಶಯಕ್ಕೆ ವಿರುದ್ಧ:
ನಂತರ ಸುದ್ದಿಗಾರರ ಜತೆಗೂ ಈ ವಿಚಾರವಾಗಿ ಮಾತನಾಡಿದ ತೇಜಸ್ವಿ ಸೂರ್ಯ, ಮುಸ್ಲಿಮರಿಗೆ ಗುತ್ತಿಗೆಯಲ್ಲಿ ಮೀಸಲು ಜತೆಗೆ ಮುಖ್ಯಮಂತ್ರಿಗಳ ಮುಸ್ಲಿಂ ಕಾಲೊನಿಗಳ ಅಭಿವೃದ್ಧಿ ನಿಧಿಗೆ 1,000 ಕೋಟಿ ರು. ಹಂಚಿಕೆ ಮಾಡುವ ಕರ್ನಾಟಕ ಸರ್ಕಾರದ ಕ್ರಮದ ಕುರಿತೂ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಸಿದ್ದರಾಮಯ್ಯ ಅವರ ಈ ಎರಡು ನಿರ್ಧಾರಗಳು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ. ದೇಶದಲ್ಲಿ ಮತ್ತಷ್ಟು ವಿಭಜನೆಗೆ ಕಾರಣವಾಗಲಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ತನ್ನ ಹಿಂದಿನ ತಪ್ಪುಗಳಿಂದ ಪಾಠ ಕಲಿತಂತೆ ಕಾಣುತ್ತಿಲ್ಲ. ದೇಶದಲ್ಲಿ ಮತ್ತಷ್ಟು ವಿಭಜನೆಗೆ ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ಬಿಜೆಪಿ ಈ ವಿಭಜನೆಯ ರಾಜಕೀಯವನ್ನು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ. ಇಂಥ ವಿಭಜನೆಯ ನೀತಿಯನ್ನು ತಡೆಯಬೇಕಿದ್ದು, ಕೋರ್ಟ್, ಅಸೆಂಬ್ಲಿ, ಸಂಸತ್ತಿನಲ್ಲಿ ಇದರ ವಿರುದ್ಧ ನಾವು ಹೋರಾಟ ಮಾಡುತ್ತೇವೆ ಎಂದು ಹೇಳಿದರು.
ಮತಾಂತರಕ್ಕೆ ಕಾಂಗ್ರೆಸ್ ಸರ್ಕಾರದ ಪ್ರೋತ್ಸಾಹ
ಸರ್ಕಾರಿ ಗುತ್ತಿಗೆಗಳಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡುವ ಮೂಲಕ ಮುಸ್ಲಿಂ ಧರ್ಮಕ್ಕೆ ಮತಾಂತರವಾಗಲು ಕರ್ನಾಟಕ ಕಾಂಗ್ರೆಸ್ ಸರ್ಕಾರ ಪ್ರೋತ್ಸಾಹ ನೀಡುವ ಕೆಲಸ ಮಾಡುತ್ತಿದೆ. ಈ ರೀತಿಯ ಕ್ರಮವು ಸದ್ಯ ಖಾಲಿ ಕೂತಿರುವ ಪಿಎಫ್‌ಐ ಮತ್ತು ಕೆಎಫ್‌ಡಿಯೊಂದಿಗೆ ಗುರುತಿಸಿಕೊಂಡಿರುವ ವ್ಯಕ್ತಿಗಳಿಗೆ ಅನುಕೂಲ ಮಾಡಿಕೊಡಲಿದೆ.
- ತೇಜಸ್ವಿ ಸೂರ್ಯ, ಬಿಜೆಪಿ ಸಂಸದ