ದಾಳಿಗೂ ಮುನ್ನ ಪಾಕ್‌ನಿಂದ ಪಹಲ್ಗಾಂ ಉಪಗ್ರಹ ಚಿತ್ರ ಖರೀದಿ?

| N/A | Published : May 13 2025, 01:15 AM IST / Updated: May 13 2025, 04:51 AM IST

ದಾಳಿಗೂ ಮುನ್ನ ಪಾಕ್‌ನಿಂದ ಪಹಲ್ಗಾಂ ಉಪಗ್ರಹ ಚಿತ್ರ ಖರೀದಿ?
Share this Article
  • FB
  • TW
  • Linkdin
  • Email

ಸಾರಾಂಶ

ಪಹಲ್ಗಾಂ ದಾಳಿಗೆ 2 ತಿಂಗಳ ಮೊದಲು, ಉಪಗ್ರಹ ಚಿತ್ರಗಳ ಸೇವೆ ನೀಡುವ ಅಮೆರಿಕ ಮೂಲದ ಕಂಪನಿಗೆ ಪಹಲ್ಗಾಂ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳ ಹೆಚ್ಚಿನ ರೆಸಲ್ಯೂಶನ್ ಚಿತ್ರಗಳಿಗೆ ಅಪಾರ ಬೇಡಿಕೆ ಬಂದಿತ್ತು ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ.

 ನವದೆಹಲಿ: ಪಹಲ್ಗಾಂ ದಾಳಿಗೆ 2 ತಿಂಗಳ ಮೊದಲು, ಉಪಗ್ರಹ ಚಿತ್ರಗಳ ಸೇವೆ ನೀಡುವ ಅಮೆರಿಕ ಮೂಲದ ಕಂಪನಿಗೆ ಪಹಲ್ಗಾಂ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳ ಹೆಚ್ಚಿನ ರೆಸಲ್ಯೂಶನ್ ಚಿತ್ರಗಳಿಗೆ ಅಪಾರ ಬೇಡಿಕೆ ಬಂದಿತ್ತು ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಮ್ಯಾಕ್ಸರ್ ಟೆಕ್ನಾಲಜೀಸ್ ಎಂಬ ಕಂಪನಿಗೆ ಫೆ.2 ಮತ್ತು 22ರ ನಡುವೆ ಪಹಲ್ಗಾಂನ ಉಪಗ್ರಹ ಚಿತ್ರಗಳಿಗಾಗಿ ಕನಿಷ್ಠ 12 ಮನವಿಗಳು ಬಂದಿದ್ದವು. 

2024ರಲ್ಲಿ ಪಾಕಿಸ್ತಾನ ಮೂಲದ ಬ್ಯುಸಿನೆಸ್ ಸಿಸ್ಟಮ್ಸ್ ಎಂಬ ಸಂಸ್ಥೆ ಮ್ಯಾಕ್ಸರ್‌ನ ಜೊತೆ ಪಾಲುದಾರಿಕೆ ಮಾಡಿಕೊಂಡಿತ್ತು. ಅದಾದ ಬಳಿಕ ಕಾಶ್ಮೀರ ಭೂಭಾಗದ ಚಿತ್ರಗಳಿಗೆ ಬೇಡಿಕೆ ಹೆಚ್ಚಾಗಿತ್ತು. ಅದರಲ್ಲೂ 2025ರ ಫೆ2ರ ಬಳಿಕ ಇಂಟರ್‌ನ್ಯಾಷನಲ್ ಪ್ರೈವೇಟ್ ಲಿಮಿಟೆಡ್ ಜತೆ ಪಾಲುದಾರಿಕೆ ಹೊಂದಿದ ಬಳಿಕ ಬೇಡಿಕೆಯಲ್ಲಿ ಏರಿಕೆಯಾಗಿದೆ. 

ಹೀಗೆ ಬೇಡಿಕೆ ಬಂದ ಪ್ರದೇಶಗಳ ಪೈಕಿ ಪಹಲ್ಗಾಂ, ಪುಲ್ವಾಮಾ, ಅನಂತ್‌ನಾಗ್, ಪೂಂಛ್, ರಜೌರಿ ಮೊದಲಾದ ಸೂಕ್ಷ್ಮ ಪ್ರದೇಶಗಳು ಸೇರಿವೆ. ಒಂದು ಚಿತ್ರಕ್ಕೆ ಕನಿಷ್ಠ 3 ಲಕ್ಷ ರು.ಗಳನ್ನು ಮ್ಯಾಕ್ಸರ್ ಕಂಪನಿ ವಿಧಿಸುತ್ತದೆ.

ಉಗ್ರ ಇತಿಹಾಸ:

ಅಮೆರಿಕದ ಮ್ಯಾಕ್ಸರ್ ಜತೆ ಪಾಲುದಾರಿಕೆ ಮಾಡಿಕೊಂಡ ಪಾಕ್ ಕಂಪನಿಗೆ ಉಗ್ರ ಕೃತ್ಯದ ಹಿನ್ನೆಲೆಯಿದೆ. ಇದರ ಸ್ಥಾಪಕ ಒಬೈದುಲ್ಲಾ ಸಯ್ಯದ್‌ಗೆ ಅಮೆರಿಕದ ಫೆಡರಲ್ ಕೋರ್ಟ್‌ ಈ ಹಿಂದೆ 1 ವರ್ಷ ಜೈಲುಶಿಕ್ಷೆ ವಿಧಿಸಿತ್ತು. ಸ್ಫೋಟಕಗಳು, ಪರಮಾಣು ಶಸ್ತ್ರಾಸ್ತ್ರ ಘಟಕಗಳು ಮತ್ತು ಘನ-ಇಂಧನ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸುವ ಪಾಕಿಸ್ತಾನದ ಪರಮಾಣು ಶಕ್ತಿ ಆಯೋಗಕ್ಕೆ ಉನ್ನತ ಕಾರ್ಯಕ್ಷಮತೆಯ ಕಂಪ್ಯೂಟರ್ ಉಪಕರಣಗಳು ಮತ್ತು ಸಾಫ್ಟ್‌ವೇರ್ ಅನ್ನು ಅಕ್ರಮವಾಗಿ ಸರಫ್ತು ಮಾಡಿದ ಅಪರಾಧದ ಹಿನ್ನೆಲೆಯಲ್ಲಿ ಒಬೈದುಲ್ಲಾಗೆ ಜೈಲುಶಿಕ್ಷೆಯಾಗಿತ್ತು. 

ಹೀಗಾಗಿ ಪಹಲ್ಗಾಂ ದಾಳಿಗೂ ಮುನ್ನ ಉಗ್ರರು ಈ ಸಂಸ್ಥೆಯ ಮೂಲಕ ಉಪಗ್ರಹ ಚಿತ್ರಗಳನ್ನು ಪಡೆದುಕೊಂಡಿರುವ ಸಾಧ್ಯತೆಯಿದೆ. ಈ ವಿಷಯ ಮುನ್ನೆಲೆಗೆ ಬರುತ್ತಿದ್ದಂತೆ ಅಮೆರಿಕ ಕಂಪನಿ ತನ್ನ ಪಾಲುದಾರರ ಪಟ್ಟಿಯಿಂದ ಈ ಕಂಪನಿಯನ್ನು ತೆಗೆದುಹಾಕಿದೆ.