ಕಂಪನಿ ಸಿಇಒ, ಎಂಡಿ ಗುರಿಯಾಗಿಸಿ ದೋಖಾ

ಮಾಲ್‌ವೇರ್‌ ಕಳಿಸಿ ಹಣ ಪೀಕುವ ವಂಚಕರು

ನವದೆಹಲಿ: ಕಾರ್ಪೊರೆಟ್‌ ಕಂಪನಿಗಳ ಸಿಇಒ, ಎಂಡಿ ಮತ್ತು ಇತರ ಉನ್ನತ ಅಧಿಕಾರಿಗಳನ್ನು ಗುರಿಯಾಗಿಸಿ ನಡೆಯುತ್ತಿರುವ ‘ಬಾಸ್‌ ಸ್ಕ್ಯಾಮ್‌’ ವಂಚನೆ ಜಾಲದ ಕುರಿತು ಎಚ್ಚರಿಕೆಯಿಂದಿರುವಂತೆ ಭಾರತೀಯ ಸೈಬರ್ ಕ್ರೈಮ್ ಸಂಯೋಜನಾ ಕೇಂದ್ರ (ಐ4ಸಿ) ಎಚ್ಚರಿಕೆ ನೀಡಿದೆ.

ಏನಿದು ಬಾಸ್‌ ಸ್ಕ್ಯಾಮ್‌?:

ಸೈಬರ್‌ ವಂಚಕರು ಕಂಪನಿಯ ಉನ್ನತ ಅಧಿಕಾರಿಗಳನ್ನು ಇಮೇಲ್ ಅಥವಾ ವಾಟ್ಸಾಪ್‌ನಲ್ಲಿ ಸಂಪರ್ಕಿಸುತ್ತಾರೆ. ಆರ್‌ಬಿಐ ಅಧಿಕಾರಿಗಳಂತೆ ನಟಿಸಿ, ಅಧಿಕಾರಿಗಳ ಫೋನ್/ಕಂಪ್ಯೂಟರ್‌ಗೆ ಮಾಲ್‌ವೇರ್ (ವಂಚನೆ ಸಾಫ್ಟ್‌ವೇರ್) ಕಳಿಸುತ್ತಾರೆ. ಅಧಿಕಾರಿ ಫೈಲ್ ತೆರೆದ ತಕ್ಷಣ ಮಾಲ್‌ವೇರ್ ಅವರ ವಾಟ್ಸಾಪ್ ಅನ್ನು ಹ್ಯಾಕ್ ಮಾಡುತ್ತದೆ.


ನಂತರ ಆ ಅಧಿಕಾರಿಯ ನಿಜವಾದ ವಾಟ್ಸಾಪ್‌ನಿಂದಲೇ ಆಕೌಂಟ್ಸ್ / ಫೈನಾನ್ಸ್ ವಿಭಾಗದವರಿಗೆ ಸಂದೇಶ ಕಳಿಸಿ, ನಿರ್ದಿಷ್ಟ ಖಾತೆಗೆ ತುರ್ತಾಗಿ ಹಣ ವರ್ಗಾವಣೆ ಮಾಡುವಂತೆ ಆದೇಶಿಸುತ್ತಾರೆ. ಹೀಗೆ ಆ ಹಣ ವಂಚಕರ ಕೈಸೇರುತ್ತದೆ.

ಐ4ಸಿ ಎಚ್ಚರಿಕೆ:

ವಾಟ್ಸಾಪ್ ಅಥವಾ ಇಮೇಲ್‌ನಲ್ಲಿ ಬಂದ ತುರ್ತು ಹಣ ವರ್ಗಾವಣೆ ಆದೇಶಗಳನ್ನು ನಂಬಬೇಡಿ. ಫೋನ್ ಮಾಡಿ ಅಥವಾ ನೇರವಾಗಿ ಖಚಿತಪಡಿಸಿಕೊಳ್ಳಿ. ಅಪರಿಚಿತ ಫೈಲ್‌ಗಳನ್ನು ತೆರೆಯಬೇಡಿ. ಆರ್‌ಬಿಐ ಎಂದಿಗೂ ವಾಟ್ಸಾಪ್‌ನಲ್ಲಿ ಲಿಂಕ್ ಅಥವಾ ಫೈಲ್ ಕಳುಹಿಸುವುದಿಲ್ಲ. ಕಂಪನಿಗಳು ಈ ಬಗ್ಗೆ ತಮ್ಮ ಉದ್ಯೋಗಿಗಳಿಗೆ ತರಬೇತಿ ನೀಡಬೇಕು. ಕಂಪ್ಯೂಟರ್‌ನಲ್ಲಿ ಅಪರಿಚಿತ ಫೈಲ್‌ಗಳು (ವಿಶೇಷವಾಗಿ .exe ಮತ್ತು .dll) ತಾನಾಗಿಯೇ ತೆರೆಯದಂತೆ ಐಟಿ ತಂಡವು ಬಲವಾದ ನಿಯಮಗಳನ್ನು ತರಬೇಕು. ಇದು ಬಾಸ್ ಸ್ಕ್ಯಾಮ್‌ನಂತಹ ಮೋಸಗಳಿಂದ ರಕ್ಷಣೆ ನೀಡುತ್ತದೆ ಎಂದು ಮನವಿ ಮಾಡಿದೆ.