ಸಾರಾಂಶ
ದೇಶಾದ್ಯಂತ ತೀವ್ರ ಕುತೂಹಲ ಕೆರಳಿಸಿರುವ ಮಹಾರಾಷ್ಟ್ರ, ಜಾರ್ಖಂಡ್ ಅಸೆಂಬ್ಲಿ ಚುನಾವಣಾ ಫಲಿತಾಂಶಗಳು ಶನಿವಾರ ಪ್ರಕಟವಾಗಲಿವೆ.
ಮುಂಬೈ/ರಾಂಚಿ/ನವದೆಹಲಿ : ದೇಶಾದ್ಯಂತ ತೀವ್ರ ಕುತೂಹಲ ಕೆರಳಿಸಿರುವ ಮಹಾರಾಷ್ಟ್ರ, ಜಾರ್ಖಂಡ್ ಅಸೆಂಬ್ಲಿ ಚುನಾವಣಾ ಫಲಿತಾಂಶಗಳು ಶನಿವಾರ ಪ್ರಕಟವಾಗಲಿವೆ.
ಇದೇ ವೇಳೆ, ವಯನಾಡ್ ಸೇರಿ 2 ಲೋಕಸಭಾ ಕ್ಷೇತ್ರಗಳು ಹಾಗೂ ಕರ್ನಾಟಕದ ಚನ್ನಪಟ್ಟಣ, ಶಿಗ್ಗಾಂವಿ ಹಾಗೂ ಸಂಡೂರು ಸೇರಿ 48 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕೂಡ ಇದೇ ದಿನವೇ ನಡೆಯಲಿದೆ.
ಎಣಿಕೆಯು ಬೆಳಿಗ್ಗೆ 8 ಗಂಟೆಗೆ ಪ್ರಾರಂಭವಾಗುತ್ತದೆ ಹಾಗೂ ಇಡೀ ಪರಿಪೂರ್ಣ ಫಲಿತಾಂಶ ಪ್ರಕಟವಾಗಲು ಸಂಜೆಯವರೆಗೆ ಸಮಯ ಹಿಡಿಯಬಹುದಾದರೂ, ಬೆಳಗ್ಗೆ 11 ಗಂಟೆ ಸುಮಾರಿಗೆ ಯಾವ ರಾಜ್ಯದಲ್ಲಿ ಯಾರು ಹಾಗೂ ಯಾವ ಕ್ಷೇತ್ರಗಳಲ್ಲಿ ಯಾರು ಗೆಲ್ಲಬಹುದು ಎಂಬ ಸ್ಪಷ್ಟ ಸೂಚನೆ ಲಭಿಸಲಿದೆ.
288 ಮಹಾರಾಷ್ಟ್ರ ಅಸೆಂಬ್ಲಿ ಸ್ಥಾನಗಳಿಗೆ ಒಂದೇ ಹಂತದ ಮತದಾನ ಮತ್ತು 81 ಜಾರ್ಖಂಡ್ ಅಸೆಂಬ್ಲಿ ಸ್ಥಾನಗಳಿಗೆ 2 ಹಂತದ ಮತದಾನವು ನ.20 ರಂದು ಮುಕ್ತಾಯಗೊಂಡಿದ್ದವು. ಉಪಚುನಾವಣೆಗಳೂ ನ.13 ಹಾಗೂ 20ರಂದು ನಡೆದಿದ್ದವು. ಮಹಾರಾಷ್ಟ್ರದಲ್ಲಿ ಶೇ.6 ರಷ್ಟು ಮತದಾನವಾಗಿತ್ತು. ಇದು 1995ರ ನಂತರದ ಅತ್ಯಧಿಕವಾಗಿದೆ. ಜಾರ್ಖಂಡ್‌ನಲ್ಲಿ ಶೇ.68 ಮತದಾನ ಆಗಿತ್ತು.
ಮಹಾರಾಷ್ಟ್ರ ಕುತೂಹಲ:
ಮಹಾರಾಷ್ಟ್ರದಲ್ಲಿ ಅಜಿತ್ ಪವಾರ್ ಅವರ ಎನ್‌ಸಿಪಿ, ಏಕನಾಥ್ ಶಿಂಧೆ ಅವರ ಶಿವಸೇನೆ ಮತ್ತು ಬಿಜೆಪಿಯನ್ನು ಒಳಗೊಂಡಿರುವ ‘ಮಹಾಯುತಿ’ ಕೂಟ ಹಾಗೂ ಶಿವಸೇನೆ (ಯುಬಿಟಿ), ಎನ್‌ಸಿಪಿ (ಶರದ್ ಪವಾರ್), ಮತ್ತು ಕಾಂಗ್ರೆಸ್ ಪಕ್ಷವನ್ನು ಒಳಗೊಂಡ ‘ಮಹಾ ವಿಕಾಸ ಅಘಾಡಿ’ (ಎಂವಿಎ) ಮಧ್ಯೆ ನಡೆಯುತ್ತಿದೆ.
ಹೆಚ್ಚಿನ ಚುನಾವಣೋತ್ತರ ಸಮೀಕ್ಷೆಗಳು ಇಲ್ಲಿ ಮಹಾಯುತಿ ಗೆಲ್ಲಬಹುದು ಎಂಬ ಭವಿಷ್ಯ ನುಡಿದಿವೆ.
ಜಾರ್ಖಂಡಲ್ಲಿ ಗೆಲ್ಲೋರಾರು?:
ಜಾರ್ಖಂಡ್‌ನಲ್ಲಿ ಅಧಿಕಾರ ಉಳಿಸಿಕೊಳ್ಳಲು ಆಡಳಿತಾರೂಢ ಜೆಎಂಎಂ-ಕಾಂಗ್ರೆಸ್ ಯತ್ನಿಸುತ್ತಿವೆ. ಆದರೆ ಹಗರಣಗಳಿಂದ ಕಂಗೆಟ್ಟಿರುವ ಸಿಎಂ ಹೇಮಂತ್ ಸೊರೇನ್ ಕೆಳಗಿಳಿಸಿ 5 ವರ್ಷ ಬಳಿಕ ಅಧಿಕಾರಕ್ಕೇರಲು ಬಿಜೆಪಿ ನೇತೃತ್ವದ ಎನ್‌ಡಿಎ ಯತ್ನಿಸುತ್ತಿದೆ.
ರಾಜ್ಯದ ಚುನಾವಣೋತ್ತರ ಸಮೀಕ್ಷೆಗಳಲ್ಲಿ 3 ಬಿಜೆಪಿ, 3 ಜೆಎಂಎಂ-ಕಾಂಗ್ರೆಸ್ ಕೂಟ ಗೆಲ್ಲಿವೆ ಎಂದಿದ್ದವು. 2 ಸಮೀಕ್ಷೆ ಅತಂತ್ರ ವಿಧಾನಸಭೆ ಸುಳಿವು ನೀಡಿದ್ದವು. ಹೀಗಾಗಿ ನೈಜ ಫಲಿತಾಂಶ ಏನಾಗಲಿದೆ ಎಂಬುದು ಕುತೂಹಲದ ವಿಷಯ.
ಪ್ರಿಯಾಂಕಾ ಗೆಲ್ತಾರಾ?:
ರಾಹುಲ್ ಗಾಂಧಿ ರಾಜೀನಾಮೆ ಕಾರಣ ಕೇರಳದ ವಯನಾಡ್ ಕ್ಷೇತ್ರಕ್ಕೆ ನಡೆದಿದುವ ಉಪಚುನಾವಣೆ ದೇಶದ ಕುತೂಹಲ ಕೆರಳಿಸಿದೆ. ಏಕೆಂದರೆ ಇಲ್ಲಿ ರಾಹುಲ್ ಸೋದರಿ ಪ್ರಿಯಾಂಕಾ ಗಾಂಧಿ ಕಾಂಗ್ರೆಸ್ ಅಭ್ಯರ್ಥಿ. ಅವರು ಗೆದ್ದರೆ ಮೊದಲ ಬಾರಿ ಲೋಕಸಭೆಗೆ ಪ್ರವೇಶಿಸಿದಂತಾಗುತ್ತದೆ.
ಹಾಗೆಯೇ ಉತ್ತರ ಪ್ರದೇಶದ 9 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯೂ ಕುತೂಹಲ ಮೂಡಿಸಿದೆ.