ಸ್ಪಷ್ಟ ಸಮಸ್ಯೆ ಇದ್ದರೆ ವಕ್ಫ್‌ ವಿಷಯದಲ್ಲಿ ಮಧ್ಯಪ್ರವೇಶ ಇಲ್ಲ: ಸುಪ್ರೀಂ

| Published : May 21 2025, 12:46 AM IST

ಸ್ಪಷ್ಟ ಸಮಸ್ಯೆ ಇದ್ದರೆ ವಕ್ಫ್‌ ವಿಷಯದಲ್ಲಿ ಮಧ್ಯಪ್ರವೇಶ ಇಲ್ಲ: ಸುಪ್ರೀಂ
Share this Article
  • FB
  • TW
  • Linkdin
  • Email

ಸಾರಾಂಶ

‘ಸಂಸತ್ತು ಅಂಗೀಕರಿಸಿದ ಕಾನೂನುಗಳು ಸಾಂವಿಧಾನಿಕವೆಂದು ಭಾವಿಸಲಾಗಿದೆ. ಸ್ಪಷ್ಟ ಮತ್ತು ಗಂಭೀರ ಸಮಸ್ಯೆ ಇಲ್ಲದಿದ್ದರೆ ಅದರಲ್ಲಿ ನ್ಯಾಯಾಲಯಗಳು ಮಧ್ಯಪ್ರವೇಶಿಸಲು ಸಾಧ್ಯವಿಲ್ಲ’ ಎಂದು ಸುಪ್ರೀಂ ಕೋರ್ಟ್ ಪ್ರತಿಪಾದಿಸಿದೆ ಹಾಗೂ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದೆ.

- ಅರ್ಜಿದಾರರಿಗೆ ಸುಪ್ರೀಂ ಎಚ್ಚರಿಕೆ । ಇಂದು ಮತ್ತೆ ವಿಚಾರಣೆ-ವಕ್ಫ್ ಕಾಯ್ದೆಯ ಸಿಂಧುತ್ವ ಪ್ರಶ್ನಿಸಿದ ಅರ್ಜಿಗಳ ವಿಚಾರಣೆ

ನವದೆಹಲಿ: ‘ಸಂಸತ್ತು ಅಂಗೀಕರಿಸಿದ ಕಾನೂನುಗಳು ಸಾಂವಿಧಾನಿಕವೆಂದು ಭಾವಿಸಲಾಗಿದೆ. ಸ್ಪಷ್ಟ ಮತ್ತು ಗಂಭೀರ ಸಮಸ್ಯೆ ಇಲ್ಲದಿದ್ದರೆ ಅದರಲ್ಲಿ ನ್ಯಾಯಾಲಯಗಳು ಮಧ್ಯಪ್ರವೇಶಿಸಲು ಸಾಧ್ಯವಿಲ್ಲ’ ಎಂದು ಸುಪ್ರೀಂ ಕೋರ್ಟ್ ಪ್ರತಿಪಾದಿಸಿದೆ ಹಾಗೂ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದೆ.

ಮಂಗಳವಾರ ವಕ್ಫ್ (ತಿದ್ದುಪಡಿ) ಕಾಯ್ದೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ಆರಂಭಿಸಿದ ಮುಖ್ಯ ನ್ಯಾ. ಬಿ.ಆರ್. ಗವಾಯಿ ಮತ್ತು ನ್ಯಾ. ಆಗಸ್ಟಿನ್ ಮಸೀಹ್ ಅವರ ಪೀಠ ಈ ರೀತಿ ಅಭಿಪ್ರಾಯಪಟ್ಟಿದೆ. ಬಳಕೆದಾರರಿಂದ ವಕ್ಫ್, ವಕ್ಫ್ ಕೌನ್ಸಿಲ್ ಮತ್ತು ರಾಜ್ಯ ವಕ್ಫ್ ಮಂಡಳಿಗಳಿಗೆ ಮುಸ್ಲಿಮೇತರರ ನಾಮನಿರ್ದೇಶನ ಮತ್ತು ಸರ್ಕಾರಿ ಭೂಮಿಯನ್ನು ವಕ್ಫ್ ಆಸ್ತಿ ಎಂದು ಗುರುತಿಸುವುದು ಸೇರಿದಂತೆ 3 ಪ್ರಮುಖ ವಿಷಯಗಳನ್ನು ಸುಪ್ರೀಂ ಕೋರ್ಟ್ ಈ ಹಿಂದೆ ಗುರುತಿಸಿತ್ತು. ಪ್ರಕರಣ ಇತ್ಯರ್ಥವಾಗುವವರೆಗೆ ಈ ವಿಷಯಗಳ ಬಗ್ಗೆ ಮುಂದುವರಿಯುವುದಿಲ್ಲ ಎಂದು ಕೇಂದ್ರ ಸರ್ಕಾರ ಕೋರ್ಟ್‌ಗೆ ಭರವಸೆ ನೀಡಿತ್ತು. ವಕ್ಫ್ ತಿದ್ದುಪಡಿ ಕಾಯ್ದೆಗೆ ಮಧ್ಯಂತರ ತಡೆ ನೀಡಬೇಕೆಂಬ ಬೇಡಿಕೆಯ ವಿಚಾರಣೆಯು ಮಂಗಳವಾರ ಸುಪ್ರೀಂ ಕೋರ್ಟ್​ನಲ್ಲಿ ಪ್ರಾರಂಭವಾಯಿತು. ಹಿರಿಯ ವಕೀಲ ಕಪಿಲ್ ಸಿಬಲ್ ಮಧ್ಯಂತರ ಆದೇಶದ ವಿಷಯದ ಕುರಿತು ಅರ್ಜಿದಾರರ ಪರವಾಗಿ ವಾದ ಮಂಡಿಸಲು ಪ್ರಾರಂಭಿಸಿದರು. ಆದರೆ ಇದಕ್ಕೂ ಮೊದಲು, ಕೇಂದ್ರ ಸರ್ಕಾರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮಧ್ಯಂತರ ಆದೇಶದ ಅಂಶಕ್ಕೆ ಸಂಬಂಧಿಸಿದಂತೆ ಕೋರ್ಟ್ 3 ವಿಷಯಗಳನ್ನು ನಿರ್ಧರಿಸಿದೆ ಮತ್ತು ಕೇಂದ್ರ ಸರ್ಕಾರವು ಆ 3 ವಿಷಯಗಳ ಕುರಿತು ತನ್ನ ಉತ್ತರವನ್ನು ಸಲ್ಲಿಸಿದೆ ಎಂದು ಕೋರ್ಟ್‌ಗೆ ತಿಳಿಸಿದರು.ವಕ್ಫ್ ಕಾಯ್ದೆಯ ಸಿಂಧುತ್ವವನ್ನು ಪ್ರಶ್ನಿಸಿ ಮುಸ್ಲಿಂ ಪರ ಹಾಜರಾದ ವಕೀಲ ಕಪಿಲ್ ಸಿಬಲ್ ‘ಈ ಕಾನೂನು ವಕ್ಫ್ ರಕ್ಷಣೆಗಾಗಿ ಇದೆ ಎಂದು ಹೇಳಲಾಗುತ್ತಿದೆ, ಆದರೆ ಅದರ ಉದ್ದೇಶ ವಕ್ಫ್ ಅನ್ನು ಸ್ವಾಧೀನಪಡಿಸಿಕೊಳ್ಳುವುದಾಗಿದೆ. ಯಾವುದೇ ಕಾರ್ಯವಿಧಾನವನ್ನು ಅನುಸರಿಸದೆ ವಕ್ಫ್ ಆಸ್ತಿಯನ್ನು ವಶಪಡಿಸಿಕೊಳ್ಳಬಹುದಾದ ರೀತಿಯಲ್ಲಿ ಕಾನೂನನ್ನು ಮಾಡಲಾಗಿದೆ’ ಎಂದು ಸಿಬಲ್ ವಾದಿಸಿದರು. ಈ ವೇಳೆ, ಸಂಸತ್ತು ಅಂಗೀಕರಿಸಿದ ಕಾನೂನುಗಳು ಸಾಂವಿಧಾನಿಕವೆಂದು ಭಾವಿಸಲಾಗಿದ್ದು, ಸ್ಪಷ್ಟ ಮತ್ತು ಗಂಭೀರ ಸಮಸ್ಯೆ ಇಲ್ಲದಿದ್ದರೆ ಅದರಲ್ಲಿ ಕೋರ್ಟ್ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿತು.

ಬಂಗಾಳ ವಕ್ಫ್‌ ಹಿಂಸೆಗೆ ಹಿಂದೂಗಳೇ ಗುರಿ: ವರದಿ

ಕೋಲ್ಕತಾ: ‘ಕಳೆದ ತಿಂಗಳು ಪ.ಬಂಗಾಳದ ಮುರ್ಷಿದಾಬಾದ್‌ನಲ್ಲಿ ನಡೆದ ವಕ್ಫ್‌ ಕಾಯ್ದೆ ವಿರೋಧಿ ಹಿಂಸಾಚಾರದಲ್ಲಿ ಬಂಗಾಳದ ಆಡಳಿತಾರೂಢ ಟಿಎಂಸಿ ನಾಯಕರೊಬ್ಬರು ಭಾಗಿಯಾಗಿದ್ದಾರೆ. ಹಿಂದೂಗಳನ್ನು ಗುರಿಯಾಗಿಸಿಕೊಂಡು ಹಿಂಸಾಚಾರ ನಡೆಸಲಾಗಿದೆ. ಇದನ್ನು ನೋಡಿಯೂ ಪೊಲೀಸರು ಸಂಪೂರ್ಣ ನಿಷ್ಕ್ರಿಯರಾಗಿದ್ದರು’ ಎಂದು ಕಲ್ಕತ್ತಾ ಹೈಕೋರ್ಟ್ ರಚಿಸಿದ ತನಿಖಾ ಸಮಿತಿಯ ವರದಿ ತಿಳಿಸಿದೆ.‘ದಾಳಿಯಲ್ಲಿ ಹಿಂದೂಗಳನ್ನೇ ಗುರಿಯಾಗಿಸಲಾಗಿತ್ತು. ಹಿಂಸಾಚಾರವನ್ನು ಟಿಎಂಸಿ ಪಕ್ಷದವನಾದ ಸ್ಥಳೀಯ ಕೌನ್ಸಿಲರ್ ಮೆಹಬೂಬ್ ಆಲಂ ನಿರ್ದೇಶಿಸಿದ್ದ. ಜನರು ಸಹಾಯಕ್ಕಾಗಿ ಕರೆ ಮಾಡಿದರೂ ಪೊಲೀಸರು ಯಾವುದೇ ಪ್ರತಿಕ್ರಿಯೆ ನೀಡದೇ ಸುಮ್ಮನಿದ್ದರು. ಅಂಗಡಿ ಮತ್ತು ಮಾಲ್‌ಗಳಿಗೆ ಬೆಂಕಿ ಹಚ್ಚಿ, ಅಪಾರ ಪ್ರಮಾಣದಲ್ಲಿ ಲೂಟಿ ಮಾಡಲಾಗಿದೆ’ ಎಂದು ವರದಿಯಲ್ಲಿ ತಿಳಿಸಲಾಗಿದೆ.