ಸಾರಾಂಶ
ಪಿಟಿಐ ನವದೆಹಲಿಇತ್ತೀಚೆಗೆ ಆತಂಕ ಮೂಡಿಸಿರುವ ಕೋವಿಡ್-19 ವೈರಾಣುವಿನ ಹೊಸ ರೂಪಾಂತರಿಯಾದ ಜೆಎನ್.1 ಪ್ರಕರಣಗಳು ಮತ್ತಷ್ಟು ಏರಿಕೆಯಾಗಿದೆ. ಹೊಸದಾಗಿ ಪತ್ತೆಯಾದ ಕೇಸು ಸೇರಿದರೆ ದೇಶದಲ್ಲಿ ವರದಿಯಾಗಿರುವ ಈ ಉಪತಳಿಯ ಕೋವಿಡ್ ಪ್ರಕರಣಗಳ ಸಂಖ್ಯೆ 90ಕ್ಕೇರಿದೆ.ದೇಶದಲ್ಲೇ ಅತಿ ಹೆಚ್ಚು, ಅಂದರೆ 35 ಜೆಎನ್.1 ಪ್ರಕರಣಗಳು ಕರ್ನಾಟಕದಲ್ಲಿ ವರದಿಯಾಗಿವೆ. ಉಳಿದಂತೆ ಗೋವಾದಲ್ಲಿ 34, ಮಹಾರಾಷ್ಟ್ರದಲ್ಲಿ 9, ಕೇರಳದಲ್ಲಿ 6, ತಮಿಳುನಾಡಿನಲ್ಲಿ 4 ಮತ್ತು ತೆಲಂಗಾಣದಲ್ಲಿ 2 ಪ್ರಕರಣಗಳು ಪತ್ತೆಯಾಗಿವೆ ಎಂದು ಕೇಂದ್ರ ಸರ್ಕಾರದ ಮೂಲಗಳು ಸೋಮವಾರ ಹೇಳಿವೆ.ಇತ್ತೀಚೆಗೆ ಜೆಎನ್.1 ಬಗ್ಗೆ ಮಾತನಾಡಿದ್ದ ನೀತಿ ಆಯೋಗದ ಆರೋಗ್ಯ ವಿಭಾಗದ ಸದಸ್ಯ ಡಾ। ವಿ.ಕೆ. ಪೌಲ್, ಜೆಎನ್.1 ಉಪತಳಿಯ ಬಗ್ಗೆ ಭಾರತದ ವಿಜ್ಞಾನ ಸಮುದಾಯ ಗಹನ ಅಧ್ಯಯನ ನಡೆಸುತ್ತಿದೆ. ಹೀಗಾಗಿ ರಾಜ್ಯಗಳು ಪರೀಕ್ಷೆಯನ್ನು ಹೆಚ್ಚಿಸಬೇಕು ಮತ್ತು ತಮ್ಮ ಕಣ್ಗಾವಲು ವ್ಯವಸ್ಥೆಯನ್ನು ಬಲಪಡಿಸಬೇಕು ಎಂದು ಸೂಚಿಸಿದ್ದರು.ಆದರೆ, ಹಾಗಂತ ಭಯಪಡುವ ಅಗತ್ಯವಿಲ್ಲ. ಏಕೆಂದರೆ ಸೋಂಕಿತರಲ್ಲಿ ಶೇ.92ರಷ್ಟು ಜನರು ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದು ಸೋಂಕು ಸೌಮ್ಯಯ ಲಕ್ಷಣ ಹೊಂದಿರುವುದನ್ನು ಸೂಚಿಸುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಆಸ್ಪತ್ರೆಗೆ ದಾಖಲಾಗುವ ದರಗಳಲ್ಲಿ ಯಾವುದೇ ಹೆಚ್ಚಳ ಆಗಿಲ್ಲ ಎಂದಿದ್ದರು.ಈ ನಡುವೆ, ಕೇಂದ್ರ ಆರೋಗ್ಯ ಸಚಿವಾಲಯ ಹಾಗೂ ವಿಶ್ವ ಆರೋಗ್ಯ ಸಂಸ್ಥೆಗಳು, ‘ಹಬ್ಬದ ಹಾಗೂ ಹೊಸ ವರ್ಷಾರಂಭದ ಋತು ಆಗಿರುವ ಕಾರಣ ಜನರ ಗುಂಪುಗೂಡುವಿಕೆ ಹೆಚ್ಚುತ್ತದೆ. ಹೀಗಾಗಿ ಕೋವಿಡ್ ಹಾಗೂ ಇತರ ಉಸಿರಾಟದ ತೊಂದರೆ/ಜ್ವರಬಾಧೆಗಳ ಮೇಲೆ ಸೂಕ್ತ ನಿಗಾ ವಹಿಸಿ, ಸೋಂಕು ಹರಡದಂತೆ ಕ್ರಮ ಕೈಗೊಳ್ಳಬೇಕು ಹಾಗೂ ಕೋವಿಡ್ ಟೆಸ್ಟಿಂಗ್ ಹೆಚ್ಚಿಸಿ ಚಿಕಿತ್ಸೆಗೆ ಸೂಕ್ತ ವ್ಯವಸ್ಥೆಗಳನ್ನು ಮಾಡಬೇಕು’ ಎಂದು ಸೂಚಿಸಿದ್ದವು.ಕೋವಿಡ್‌ನ ಜೆಎನ್.1 (ಬಿಎ.2.86.1.1) ರೂಪಾಂತರಿಯು ಆಗಸ್ಟ್‌ನಲ್ಲಿ ಲಕ್ಸಂಬರ್ಗ್‌ನಲ್ಲಿ ಮೊದಲು ಕಾಣಿಸಿಕೊಂಡಿತ್ತು. ಇದು ಬಿಎ.2.86 (ಪಿರೋಲಾ) ವಂಶಾವಳಿ ಕೊರೋನಾದ ರೂಪಾಂತರಿಯಾಗಿದೆ.
ಸೋಂಕಿನ ಲಕ್ಷಣಗಳು:1. ಜ್ವರ, ತಲೆನೋವು, ವಿಪರೀತ ಆಯಾಸ2. ಚೇತರಿಸಿಕೊಳ್ಳಲು 7-8 ದಿನ ಬೇಕುಸೋಂಕು ಬರದಿರಲು ಏನು ಮಾಡಬೇಕು?1.ಮಾಸ್ಕ್ ಧರಿಸಬೇಕು2. ಕಾಲಕಾಲಕ್ಕೆ ನೀರು ಕುಡಿಯಬೇಕು3. ಕೈ ಸ್ವಚ್ಛವಾಗಿರಿಸಿಕೊಳ್ಳಬೇಕು