ತಮಿಳ್ನಾಡು ಪಟಾಕಿ ಕಾರ್ಖಾನೆ ಸ್ಫೋಟಕ್ಕೆ 10 ಬಲಿ

| Published : Feb 18 2024, 01:31 AM IST / Updated: Feb 18 2024, 08:55 AM IST

ಸಾರಾಂಶ

ತಮಿಳುನಾಡಿನ ವಿರುದ್‌ನಗರ ಜಿಲ್ಲೆಯಲ್ಲಿ ಪಟಾಕಿ ಕಾರ್ಖಾನೆಯೊಂದು ಸ್ಫೋಟಗೊಂಡ ಘಟನೆ ನಡೆದಿದೆ. ಮೃತರ ಕುಟುಂಬಕ್ಕೆ ಪ್ರಧಾನಿ ಮೋದಿ ತಲಾ 2 ಲಕ್ಷ ರು. ಪರಿಹಾರ ಘೋಷಿಸಿದ್ದಾರೆ.

ವಿರುಧ್‌ನಗರ: ತಮಿಳುನಾಡಿನ ವಿರುಧ್‌ನಗರ ಜಿಲ್ಲೆಯ ಪಟಾಕಿ ಕಾರ್ಖಾನೆಯೊಂದರಲ್ಲಿ ಶನಿವಾರ ಸಂಭವಿಸಿದ ಭೀಕರ ಸ್ಫೋಟ ಪ್ರಕರಣದಲ್ಲಿ 10 ಜನರು ಸಾವನ್ನಪ್ಪಿದ್ದು, 10 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. 

ಮಡಿದವರಲ್ಲಿ ನಾಲ್ವರು ಮಹಿಳೆಯರು ಸೇರಿದ್ದಾರೆ. ಮಡಿದವರ ಕುಟುಂಬಗಳಿಗೆ ರಾಜ್ಯ ಸರ್ಕಾರ ತಲಾ 3 ಲಕ್ಷ ರು. ಪರಿಹಾರ ಘೋಷಿಸಿದೆ.

ಜಿಲ್ಲೆಯ ಕುಂಡಯರಿಪ್ಪು ಗ್ರಾಮದಲ್ಲಿ ವಿಘ್ನೇಶ್‌ ಎಂಬುವರಿಗೆ ಸೇರಿದ ಕಾರ್ಖಾನೆಯ ರಾಸಾಯನಿಕ ಮಿಶ್ರಣ ಮಾಡುವ ಕೋಣೆಯಲ್ಲಿ ಶನಿವಾರ ಮಧ್ಯಾಹ್ನ 12.30ರ ವೇಳೆಗೆ ಏಕಾಏಕಿ ಸ್ಫೋಟ ಸಂಭವಿಸಿದೆ. 

ಕ್ಷಣಾರ್ಧದಲ್ಲಿ ಈ ಬೆಂಕಿ ಸುತ್ತಮುತ್ತಲೂ ಪಟಾಕಿ ಸಂಗ್ರಹಿಸಿದ್ದ ಕೊಠಡಿಗಳಿಗೂ ಹರಡಿ, ಒಳಗಿದ್ದ 10 ಜನರು ಬೆಂಕಿಗೆ ಆಹುತಿಯಾಗಿದ್ದಾರೆ. ಸ್ಫೋಟದ ತೀವ್ರತೆಗೆ ನಾಲ್ಕು ಕೋಣೆಗಳು ಧ್ವಂಸವಾಗಿದೆ.

ಘಟನೆ ನಡೆದ ಸ್ಥಳದಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಕಾರ್ಮಿಕರು ಸೇರಿಕೊಂಡು ಕೆಲಸ ಮಾಡುತ್ತಿದ್ದ ವೇಳೆ ಕೆಲ ರಾಸಾಯನಿಕಗಳು ಮಿಶ್ರಣಗೊಂಡು ಘಟನೆ ಸಂಭವಿಸಿರಬಹುದು ಎಂದು ಪ್ರಾಥಮಿಕ ತನಿಖಾ ವರದಿ ಹೇಳಿದೆ.

ಘಟನೆ ಕುರಿತು ತೀವ್ರ ದಿಗ್ಭ್ರಮೆ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಪರಿಸ್ಥಿತಿ ಮೇಲ್ವಿಚಾರಣೆಗಾಗಿ ಇಬ್ಬರು ಸಚಿವರನ್ನು ಸ್ಥಳಕ್ಕೆ ಕಳುಹಿಸಿಕೊಟ್ಟಿದ್ದಾರೆ. ಜೊತೆಗೆ ಪ್ರಧಾನಿ ಮೋದಿ ಮೃತರ ಕುಟುಂಬಕ್ಕೆ ಸಂತಾಪ ಸೂಚಿಸಿ ತಲಾ 2 ಲಕ್ಷ ರು. ಪರಿಹಾರ ಘೋಷಣೆ ಮಾಡಿದ್ದಾರೆ.