ಮಧ್ಯಪ್ರಾಚ್ಯ ಸಮರದ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಇಂಧನ ಮಿತವ್ಯಯ, ಚಿನ್ನ ಖರೀದಿ ಮುಂದೂಡಿಕೆ ಹಾಗೂ ಅನಗತ್ಯ ವಿದೇಶ ಪ್ರವಾಸ ರದ್ದು ಮಾಡುವಂತೆ ಜನರಲ್ಲಿ ಮನವಿ ಮಾಡಿದ್ದ ಮೋದಿ ಸರ್ಕಾರ ಇದೀಗ ತಾನೇ ಆ ಕ್ರಮಗಳನ್ನು ಜಾರಿಗೊಳಿಸಲು ಮುಂದಾಗಿದೆ.  

ನವದೆಹಲಿ: ಮಧ್ಯಪ್ರಾಚ್ಯ ಸಮರದ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಇಂಧನ ಮಿತವ್ಯಯ, ಚಿನ್ನ ಖರೀದಿ ಮುಂದೂಡಿಕೆ ಹಾಗೂ ಅನಗತ್ಯ ವಿದೇಶ ಪ್ರವಾಸ ರದ್ದು ಮಾಡುವಂತೆ ಜನರಲ್ಲಿ ಮನವಿ ಮಾಡಿದ್ದ ಮೋದಿ ಸರ್ಕಾರ ಇದೀಗ ತಾನೇ ಆ ಕ್ರಮಗಳನ್ನು ಜಾರಿಗೊಳಿಸಲು ಮುಂದಾಗಿದೆ. ಈ ನಿಟ್ಟಿನಲ್ಲಿ ಯೋಜನಾ ವರದಿಯನ್ನು ಸಲ್ಲಿಸುವಂತೆ ವಿವಿಧ ಸಚಿವಾಲಯಗಳಿಗೆ ಪ್ರಧಾನಿ ಸಚಿವಾಲಯ ಸೂಚನೆ ನೀಡಿದೆ.

ಮೂಲಗಳ ಪ್ರಕಾರ, ಸಚಿವರು ಮತ್ತು ಹಿರಿಯ ಅಧಿಕಾರಿಗಳ ಅನವಶ್ಯಕ ದೇಶೀಯ ಹಾಗೂ ವಿದೇಶಿ ಪ್ರಯಾಣಗಳನ್ನು ಕಡಿಮೆಗೊಳಿಸುವುದು, ಸೆಮಿನಾರ್‌ಗಳು ಮತ್ತು ಸಮ್ಮೇಳನಗಳನ್ನು ಆನ್‌ಲೈನ್‌ನಲ್ಲಿ ನಡೆಸುವುದು, ದೊಡ್ಡ ಬ್ಯಾಂಕ್ವೆಟ್‌ಗಳು ಮತ್ತು ವಿಜೃಂಭಣೆಯ ಕಾರ್ಯಕ್ರಮಗಳನ್ನು ತಪ್ಪಿಸುವುದು, ವರ್ಕ್ ಫ್ರಮ್ ಹೋಮ್ ಹಾಗೂ ಹೈಬ್ರಿಡ್ ವ್ಯವಸ್ಥೆಗಳನ್ನು ಹೆಚ್ಚಿಸುವುದು, ಅಧಿಕಾರಿಗಳು ಮೆಟ್ರೋ ಮತ್ತು ಸಾರ್ವಜನಿಕ ಸಾರಿಗೆ ಬಳಸುವಂತೆ ಪ್ರೋತ್ಸಾಹಿಸುವ ಕ್ರಮಗಳನ್ನು ಸಚಿವಾಲಯ ಜಾರಿಗೆ ತರುವ ಸಾಧ್ಯತೆ ಇದೆ.

ಇದರ ಜೊತೆಗೆ ಕರ್ತವ್ಯ ಭವನದಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿಗಳು ಸ್ವಂತ ವಾಹನಗಳನ್ನು ಬಿಟ್ಟು, ಮೆಟ್ರೋ ಅಥವಾ ಇತರ ಸಾರ್ವಜನಿಕ ಸಾರಿಗೆ ಬಳಸುವಂತೆ ಸೂಚಿಸಲಾಗುವುದು. ಪರಿಸ್ಥಿತಿ ಹದಗೆಟ್ಟರೆ ದೊಡ್ಡ ದೊಡ್ಡ ಸಮಾರಂಭಗಳು ಮತ್ತು ವಿವಾಹಗಳನ್ನು ಸೀಮಿತ ಸಂಖ್ಯೆಯಲ್ಲಿ ಮಾಡುವಂತೆ ಸೂಚಿಸುವ ಸಾಧ್ಯತೆಯೂ ಇದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದ ಎದುರಾಗಿರುವ ಬಿಕ್ಕಟ್ಟು ನಿವಾರಣೆ ನಿಟ್ಟಿನಲ್ಲಿ, ಜನಸಾಮಾನ್ಯರು ಪೆಟ್ರೋಲ್‌, ಡೀಸೆಲ್‌ ಬಳಕೆ ಕಡಿಮೆ ಮಾಡಬೇಕು, ಅನಗತ್ಯ ಚಿನ್ನ ಖರೀದಿ ಮುಂದೂಡಬೇಕು, ವಿದೇಶ ಪ್ರವಾಸ, ವಿದೇಶಗಳಲ್ಲಿನ ಮದುವೆ ಕೈಬಿಡಬೇಕು, ದೇಶೀಯ ಖರೀದಿ ಹೆಚ್ಚಿಸಬೇಕು, ಖಾದ್ಯ ತೈಲ ಬಳಕೆ ಕಡಿಮೆ ಮಾಡಬೇಕು, ಶಾಲೆಗಳನ್ನು ಆನ್‌ಲೈನ್‌ನಲ್ಲಿ ನಡೆಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ದೇಶದ ಜನರಿಗೆ ಕರೆ ನೀಡಿದ್ದರು.

ಯಾವ ಮಿತವ್ಯಯ ಕ್ರಮ?

- ಸಚಿವರು/ಅಧಿಕಾರಿಗಳ ಅನವಶ್ಯಕ ದೇಶೀಯ-ವಿದೇಶಿ ಪ್ರಯಾಣಕ್ಕೆ ಕಡಿವಾಣ

- ಸೆಮಿನಾರ್‌ಗಳು ಮತ್ತು ಸಮ್ಮೇಳನಗಳನ್ನು ಆನ್‌ಲೈನ್‌ನಲ್ಲಿ ನಡೆಸುವುದು

- ದೊಡ್ಡ ಬ್ಯಾಂಕ್ವೆಟ್‌ಗಳು ಮತ್ತು ವಿಜೃಂಭಣೆಯ ಕಾರ್ಯಕ್ರಮಗಳನ್ನು ತಪ್ಪಿಸುವುದು

- ವರ್ಕ್ ಫ್ರಮ್ ಹೋಮ್ ಹಾಗೂ ಹೈಬ್ರಿಡ್ ವ್ಯವಸ್ಥೆಗಳನ್ನು ಹೆಚ್ಚಿಸುವುದು,

- ಅಧಿಕಾರಿಗಳು ಮೆಟ್ರೋ/ಸಾರ್ವಜನಿಕ ಸಾರಿಗೆ ಬಳಸುವಂತೆ ಪ್ರೋತ್ಸಾಹ

ಮೋದಿ ಕರೆ ಬೆಂಬಲಿಸಿ ಸೈಕಲ್‌ ಏರಿದ ಜಡ್ಜ್‌!

ಪ್ರಧಾನಿ ಮೋದಿ ಇಂಧನ ಮಿತವ್ಯಯಕ್ಕೆ ನೀಡಿದ್ದ ಕರೆಗೆ ಬೆಂಬಲಿಸಿ ಮಧ್ಯಪ್ರದೇಶ ಹೈಕೋರ್ಟ್‌ ನ್ಯಾಯಾಧೀಶ ದ್ವಾರಕಾಧೀಶ ಬನ್ಸಲ್‌ ಸೈಕಲ್‌ನಲ್ಲಿ ಕೋರ್ಟ್‌ಗೆ ಆಗಮಿಸಿದರು. ಇದೇ ರೀತಿ ಕೆಲವು ಬಿಜೆಪಿ ಸಚಿವರು, ಶಾಸಕರು ಸರ್ಕಾರಿ ವಾಹನ ಬಿಟ್ಟು ಮೆಟ್ರೋ, ಇ-ವೆಹಿಕಲ್‌ಗಳ ಮೊರೆ ಹೋದರು.