ಸಾರಾಂಶ
ನವದೆಹಲಿ: ರಾಜ್ಯಸಭೆಯಲ್ಲಿ ಕಾಂಗ್ರೆಸ್ ಸಂಸದ ಅಭಿಷೇಕ್ ಸಿಂಘ್ವಿ ಅವರ ಆಸನದಲ್ಲಿ 50 ಸಾವಿರ ರು. ಮೌಲ್ಯದ 500 ರು. ಮುಖಬೆಲೆಯ 100 ನೋಟುಗಳು ಪತ್ತೆ ಆಗಿದ್ದು ಭಾರಿ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆಗೆ ರಾಜ್ಯಸಭೆ ಸಭಾಪತಿಯೂ ಆದ ಉಪರಾಷ್ಟ್ರಪತಿ ಜಗದೀಪ್ ಧನಕರ್ ಆದೇಶಿಸಿದ್ದಾರೆ. ಆದರೆ, ‘ಈ ಹಣ ನನ್ನದಲ್ಲ. ನನ್ನ ಹತ್ತಿರ ಇದ್ದಿದ್ದು ಕೇವಲ 500 ರು. ಮೌಲ್ಯದ 1 ನೋಟು ಮಾತ್ರ. ತನಿಖೆಯಿಂದ ಈ ಹಣ ಯಾರದ್ದು ಎಂದು ಗೊತ್ತಾಗಲಿದೆ’ ಎಂದು ಸಿಂಘ್ವಿ ಸ್ಪಷ್ಟಪಡಿಸಿದ್ದಾರೆ.
ಈ ನಡುವೆ, ತನಿಖೆಗೂ ಮುನ್ನವೇ ಸಂಸದ ಸಿಂಘ್ವಿ ಹೆಸರನ್ನು ಬಹಿರಂಗಪಡಿಸಿದ್ದು, ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಗೂ ವಿಪಕ್ಷ ಸದಸ್ಯರ ಆಕ್ಷೇಪಕ್ಕೆ ಕಾರಣವಾಗಿದೆ. ಧನಕರ್ ಕ್ರಮವನ್ನು ಖರ್ಗೆ ಪ್ರಶ್ನಿಸಿದ್ದಾರೆ. ಇದು ಕೋಲಾಹಲಕ್ಕೆ ಕಾರಣವಾಗಿ ಕಲಾಪವನ್ನು ಸೋಮವಾರಕ್ಕೆ ಮುಂದೂಡಲಾಯಿತು.
ಆಗಿದ್ದೇನು?:
ಶುಕ್ರವಾರ ಬೆಳಗ್ಗೆ ಸದನ ಸಮಾವೇಶಗೊಂಡ ಬಳಿಕ ಮಾತನಾಡಿದ ಸಭಾಪತಿ ಧನಕರ್, ‘ನಿನ್ನೆ (ಗುರುವಾರ) ಕಲಾಪ ಮುಗಿದ ಬಳಿಕ ಎಂದಿನಂತೆ ರಾಜ್ಯಸಭೆಯಲ್ಲಿ ತಪಾಸಣೆ ಮಾಡಲಾಗುತ್ತಿತ್ತು. ಆಗ ಕಾಂಗ್ರೆಸ್‌ನ ತೆಲಂಗಾಣ ಸಂಸದ ಅಭಿಷೇಕ್ ಸಿಂಘ್ವಿ ಕೂರುವ ಸೀಟ್ ನಂ.222ರಲ್ಲಿ 500 ರು. ನೋಟಿನ ಕಂತೆ ಪತ್ತೆ ಆಯಿತು. ಅವು ಸುಮಾರು 100 ನೋಟುಗಳು ಇರಬಹುದು. ಅವು ಖೋಟಾ ನೋಟೋ, ಅಸಲಿ ನೋಟೋ ಗೊತ್ತಿಲ್ಲ. ಅವನ್ನು ‘ಕಳೆದುಹೋದ ಮತ್ತು ಪತ್ತೆಯಾದ ಕೌಂಟರ್’ನಲ್ಲಿ ಇರಿಸಲಾಗಿದೆ. ಈ ಹಣ ಯಾರೋ ಸಂಸದರು ಬಿಟ್ಟು ಹೋಗಿರಬಹುದು ಎಂದು ಈವರೆಗೆ ಕಾದೆವು. ಆದರೆ ಯಾರೂ ಬರಲಿಲ್ಲ. ಹೀಗಾಗಿ ಒಬ್ಬ ಜವಾಬ್ದಾರಿಯುತ ವ್ಯಕ್ತಿಯಾಗಿ ಇದನ್ನು ಬಹಿರಂಗಪಡಿಸುತ್ತಿದ್ದೇನೆ’ ಎಂದರು.
‘ಈ ಬಗ್ಗೆ ಸದನದಿಂದ ಉನ್ನತ ಮಟ್ಟದ ತನಿಖೆ ನಡೆಯಲಿದೆ. ಹಣ ಇಟ್ಟಿದ್ದು ಯಾರೆಂದು ಪತ್ತೆ ಮಾಡಲು ಸಿಸಿಟೀವಿ ಪರಿಶೀಲಿಸಲಾಗುತ್ತದೆ’ ಎಂದರು.
ಆದರೆ ಇದಕ್ಕೆ ಆಕ್ಷೇಪಿಸಿದ ವಿಪಕ್ಷ ನಾಯಕ ಖರ್ಗೆ, ‘ನೋಟು ಜಪ್ತಿ ಮಾಡಿಕೊಂಡು ತನಿಖೆಗೆ ಆದೇಶಿಸಿದ್ದು ಸ್ವಾಗತಾರ್ಹ. ಆದರೆ ನೋಟಿನ ಕಂತೆ ಯಾರದ್ದೆಂದೇ ಗೊತ್ತಿಲ್ಲ. ಅಂಥದ್ದರಲ್ಲಿ ಸಿಂಘ್ವಿ ಅವರ ಹೆಸರು ಬಹಿರಂಗಪಡಿಸಿದ್ದು ಸರಿಯಲ್ಲ’ ಎಂದರು.
ಇದಕ್ಕೆ ಬಿಜೆಪಿ ಸದಸ್ಯರು ಹಾಗೂ ಸಂಸದೀಯ ಸಚಿವ ಕಿರಣ್ ರಿಜಿಜು ಆಕ್ಷೇಪಿಸಿ, ‘ಇಷ್ಟೊಂದು ನಗದನ್ನು ಸದನಕ್ಕೆ ತಂದಿದ್ದು ತಪ್ಪು. ಈಗ ಸ್ಪೀಕರ್ ತೀರ್ಮಾನಕ್ಕೆ ಕಾಂಗ್ರೆಸ್ ಸದಸ್ಯರು ಆಕ್ಷೇಪಿಸಿದ್ದು ಸರಿಯಲ್ಲ. ಸಿಂಘ್ವಿ ಹೆಸರು ಹೇಳಿದ್ದರಲ್ಲಿ ತಪ್ಪೇನಿದೆ?’ ಎಂದರು.
ಸಭಾನಾಯಕ ಜೆ.ಪಿ. ನಡ್ಡಾ ಪ್ರತಿಕ್ರಿಯಿಸಿ, ‘ಈ ಪ್ರಸಂಗ ರಾಜ್ಯಸಭೆಯ ಸಮಗ್ರತೆಗೆ ಧಕ್ಕೆ ತಂದಿದೆ. ಆದರೆ ಪ್ರಕರಣ ಮುಚ್ಚಿಹಾಕಲು ಕಾಂಗ್ರೆಸ್ ಯತ್ನಿಸುತ್ತಿದೆ’ ಎಂದರು. ಬಿಜೆಪಿ ಸದಸ್ಯ ಸುಧಾಂಶು ತ್ರಿವೇದಿ ಅವರು, ‘ಇದು ಕಾಂಗ್ರೆಸ್‌ನ ಭ್ರಷ್ಟಾಚಾರದ ಹಣ’ ಎಂದು ಛೇಡಿಸಿದರು.
ಆಗ ಮಾತಿಗೆ ಮಾತು ಬೆಳೆದು ಸದನದಲ್ಲಿ ಕೋಲಾಹಲ ಉಂಟಾದ ಕಾರಣ ಕಲಾಪವನ್ನು ಸಭಾಪತಿ ಸೋಮವಾರಕ್ಕೆ ಮುಂದೂಡಿದರು.
ಇದು ಕಾಮನ್- ಜೈರಾಂ:
‘ಸಂಸತ್ತಿಗೆ 50 ಸಾವಿರ ರು. ಇಟ್ಟುಕೊಂಡು ಹೋಗುವುದ ಕಾಮನ್’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ ಹೇಳಿದ್ದಾರೆ.
ನನ್ನ ಬಳಿ ಇದ್ದಿದ್ದು 500 ರು.ನ 1 ನೋಟು ಮಾತ್ರ: ಸಿಂಘ್ವಿ ಸ್ಪಷ್ಟನೆ
ಹಣ ಪತ್ತೆ ಬಗ್ಗೆ ಕಾಂಗ್ರೆಸ್ ಸಂಸದ ಅಭಿಷೇಕ್ ಸಿಂಘ್ವಿ ಸ್ಪಷ್ಟನೆ ನೀಡಿದ್ದಾರೆ. ‘ಹಣ ಪತ್ತೆ ಆಗಿದೆ ಎಂಬ ವಿಷಯ ನೋಡಿಯೇ ನನಗೆ ಆ ಹಣದ ಕಂತೆ ಬಗ್ಗೆ ಗೊತ್ತಾಗಿದ್ದು. ನಾನು ನಿನ್ನೆ (ಗುರುವಾರ) ಮಧ್ಯಾಹ್ನ 12.57ಕ್ಕೆ ಕಲಾಪಕ್ಕೆ ಬಂದೆ. ಕೆಲ ಹೊತ್ತು ಸದನದಲ್ಲಿ ಇದ್ದು 1.30ಕ್ಕೆ ಹೊರಟು ಹೋದೆ. ನನ್ನ ಬಳಿ ಆಗ ಇದ್ದಿದ್ದು 500 ರು. ಮೌಲ್ಯದ 1 ನೋಟು ಮಾತ್ರ. ಆ ಹಣದ ಕಂತೆ ಸಿಕ್ಕ ಬಗ್ಗೆ ತನಿಖೆ ನಡೆಯಬೇಕು. ಈ ಬಗ್ಗೆ ರಾಜಕೀಯ ಬೇಡ’ ಎಂದಿದ್ದಾರೆ.
ಅಲ್ಲದೆ, ‘ಸದಸ್ಯರು ಎದ್ದು ಹೋದ ನಂತರ ಅವರ ಸೀಟಿನಲ್ಲಿ ಏನು ಬೇಕಾದರೂ ಇಡುವ ಆತಂಕ ಈ ಘಟನೆಯಿಂದ ಉಂಟಾಗಿದೆ. ಹೀಗಾಗಿ ಸದಸ್ಯರ ಸೀಟಿನ ಸುತ್ತ ಗ್ಲಾಸ್ ಎನ್‌ಕ್ಲೋಷರ್ ನಿರ್ಮಿಸಬೇಕು. ನಾವು ಹೋಗುವಾಗ ಅದಕ್ಕೆ ಬೀಗ ಹಾಕುತ್ತೇವೆ. ಬೇಕಿದ್ದರೆ, ನಮ್ಮ ಸ್ಥಾನಕ್ಕೆ ಬೇರೆ ಯಾರೂ ಹೋಗದಂತೆ ತಂತಿ ಬೇಲಿಯನ್ನೂ ನಿರ್ಮಿಸಬಹುದು’ ಎಂದು ವ್ಯಂಗ್ಯದ ಸಲಹೆ ನೀಡಿದ್ದಾರೆ.
ಹಣದ ಕಂತೆ ಕುತೂಹಲ
ಗುರುವಾರದ ಕಲಾಪ ಮುಗಿದ ಬಳಿಕ ತಪಾಸಣೆ ವೇಳೆ ಸಿಂಘ್ವಿ ಸೀಟಲ್ಲಿ ಹಣ ಪತ್ತೆ
ಹಣ ನಾಪತ್ತೆ ಬಗ್ಗೆ ಯಾರೂ ದೂರು ನೀಡದ ಹಿನ್ನೆಲೆ ತನಿಖೆಗೆ ಧನಕರ್ ಆದೇಶ
ಸಿಂಘ್ವಿ ಹೆಸರು ಬಹಿರಂಗಪಡಿಸಿದ್ದಕ್ಕೆ ಖರ್ಗೆ ಆಕ್ಷೇಪ । ಹಣ ನನ್ನದೆಲ್ಲವೆಂದ ಸಿಂಘ್ವಿ