ಬಂಗಾಳ ಕೊಲ್ಲಿ ತೀರದಲ್ಲಿ ಉಂಟಾಗಿರುವ ವಾಯುಭಾರ ಕುಸಿತ : ಅ.25 ಡಾನಾ ಚಂಡಮಾರುತ ದಾಳಿ

| Published : Oct 24 2024, 12:50 AM IST / Updated: Oct 24 2024, 04:40 AM IST

ಸಾರಾಂಶ

ಬಂಗಾಳ ಕೊಲ್ಲಿ ತೀರದಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ಬುಧವಾರದ ವೇಳೆ ಚಂಡಮಾರುತವಾಗಿ ಪರಿವರ್ತನೆಗೊಂಡಿದ್ದು, ಶುಕ್ರವಾರ ಬೆಳಗ್ಗೆ ಒಡಿಶಾದ ಮೇಲೆ ಅಪ್ಪಳಿಸಲಿದೆ.

ಭುವನೇಶ್ವರ: ಬಂಗಾಳ ಕೊಲ್ಲಿ ತೀರದಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ಬುಧವಾರದ ವೇಳೆ ಚಂಡಮಾರುತವಾಗಿ ಪರಿವರ್ತನೆಗೊಂಡಿದ್ದು, ಶುಕ್ರವಾರ ಬೆಳಗ್ಗೆ ಒಡಿಶಾದ ಮೇಲೆ ಅಪ್ಪಳಿಸಲಿದೆ. ಇದರ ಪೂರ್ವಭಾವಿಯಾಗಿ ಬುಧವಾರ ಸಂಜೆಯಿಂದಲೇ ಒಡಿಶಾ ಮತ್ತು ಪಶ್ಚಿಮ ಬಂಗಾಳದ ಕರಾವಳಿ ಜಿಲ್ಲೆಗಳಲ್ಲಿ ಮಳೆ ಆರಂಭವಾಗಿದೆ.

ಒಡಿಶಾದ ಭಿತರ್‌ ಕರ್ಣಿಕಾ ರಾಷ್ಟ್ರೀಯ ಉದ್ಯಾನ ಮತ್ತು ಧರ್ಮ ಬಂದರು ನಡುವಿನ ಪ್ರದೇಶದಲ್ಲಿ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಇದೆ. ಚಂಡಮಾರುತ ಅಪ್ಪಳಿಸುವ ವೇಳೆ ಕರಾವಳಿ ಪ್ರದೇಶದಲ್ಲಿ ಗಂಟೆಗೆ 120 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ. ಈ ವೇಳೆ ಸಮುದ್ರದಲ್ಲಿ 2 ಮೀಟರ್‌ ಎತ್ತರದವರೆಗೂ ಅಲೆಗಳು ಏಳುವ ಸಂಭವ ಇದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

ಒಡಿಶಾದಲ್ಲಿ ಒಟ್ಟು 14 ಜಿಲ್ಲೆಗಳ ಮೇಲೆ ಚಂಡಮಾರುತ ಪರಿಣಾಮ ಬೀರುವ ಸಾಧ್ಯತೆ ಹಿನ್ನೆಲೆ 14 ಲಕ್ಷ ಜನರನ್ನು ತೆರವು ಮಾಡಲು ಸರ್ಕಾರ ಸಜ್ಜಾಗಿದೆ.

ಎಚ್ಚರಿಕೆ:

ಕೇಂದ್ರಪಾರ, ಭದ್ರಕ್‌ ಮತ್ತು ಬಾಲಾಸೋರ್ ಜಿಲ್ಲೆಗಳ ತಗ್ಗು ಪ್ರದೇಶಗಳ ಮೇಲೆ ಸಮುದ್ರದ ನೀರು ನುಗ್ಗುವ ಸಂಭವವಿದ್ದು, ಈ ಪ್ರದೇಶಗಳ ಜನರನ್ನು ಸುರಕ್ಷಿತ ಪ್ರದೇಶಕ್ಕೆ ತೆರವು ಮಾಡಬೇಕು ಎಂದು ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

ಬಂಗಾಳದಲ್ಲಿ ಭಾರೀ ಮಳೆ:

ಡಾನಾ ಚಂಡಮಾರುತವು ಪಶ್ಚಿಮ ಬಂಗಾಳದ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಸಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ರಾಜ್ಯದಲ್ಲಿ ಅ.24 ಮತ್ತು ಅ.25ರಂದು 150ಕ್ಕೂ ಹೆಚ್ಚು ರೈಲುಗಳ ಸಂಚಾರ ರದ್ದುಪಡಿಸಲಾಗಿದೆ. ಅ.23ರಂದು ಸಂಜೆ ವೇಳೆಗೆ ಒಡಿಶಾ ಮತ್ತು ಬಂಗಾಳ ಕರಾವಳಿಯಲ್ಲಿ 60 ಕಿ.ಮಿ. ವೇಗದಲ್ಲಿ ಗಾಳಿ ಬೀಸಲಿದ್ದು, ಅದು ಅ.24ರ ರಾತ್ರಿ ಮತ್ತು ಅ.25ರ ಬೆಳಗ್ಗೆ ವೇಳೆಗೆ ಗಂಟೆಗೆ 120 ಕಿ.ಮೀ ವೇಗ ಪಡೆದುಕೊಳ್ಳಲಿದೆ. ಹೀಗಾಗಿ ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಮುನ್ನೆಚ್ಚರಿಕೆ ನೀಡಿದೆ. ಯಾವುದೇ ಅನಾಹುತ ತಡೆಯಲು ಎನ್‌ಡಿಎರ್‌ಎಫ್‌, ರಾಜ್ಯ ವಿಪತ್ತು ಪಡೆ, ಕರಾವಳಿ ಕಾವಲು ಪಡೆಗಳನ್ನು ಆಯಕಟ್ಟಿನ ಪ್ರದೇಶಗಳಲ್ಲಿ ನಿಯೋಜಿಸಲಾಗಿದೆ.

ಸರ್ಕಾರದಿಂದ ಸಕಲ ಸಿದ್ಧತೆ 6 ಅನುಭವಿ ಅಧಿಕಾರಿಗಳ ನಿಯೋಜನೆ:

ಚಂಡಮಾರುತ ನಿಭಾಯಿಸಿದ ಅನುಭವವಿರುವ 6 ಐಎಎಸ್‌ ಅಧಿಕಾರಿಗಳನ್ನು ಚಂಡಮಾರುತ ಪೀಡಿತವಾಗಲಿರುವ ಜಿಲ್ಲೆಗಳಿಗೆ ಸರ್ಕಾರ ನಿಯೋಜಿಸಿದೆ.

ಶಿಕ್ಷಣ ಸಂಸ್ಥೆಗಳಿಗೆ ರಜೆ:

ರಾಜ್ಯದ 14 ಜಿಲ್ಲೆಗಳ ಶಿಕ್ಷಣ ಸಂಸ್ಥೆಗಳಿಗೆ ಬುಧವಾರದಿಂದ ಶುಕ್ರವಾರದ ತನಕ ರಜೆ ಘೋಷಿಸಲಾಗಿದೆ. ಆಯ್ದ ಮಾರ್ಗಗಳ 200ಕ್ಕೂ ಅಧಿಕ ರೈಲು ಸಂಚಾರ ರದ್ದು.

ಆಶ್ರಯಕ್ಕೆ ವ್ಯವಸ್ಥೆ:

ಸಾವು-ನೋವನ್ನು ತಡೆಗಟ್ಟುವ ಸಲುವಾಗಿ ಜನರಿಗೆ ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಸೂಚಿಸಲಾಗಿದೆ. ಗರ್ಭಿಣಿಯರು, ಮಕ್ಕಳು ಹಾಗೂ ವೃದ್ಧರ ಸ್ಥಳಾಂತರಕ್ಕೆ ಆದ್ಯತೆ ನೀಡಲಾಗಿದ್ದು, 800ರಕ್ಕೂ ಅಧಿಕ ವಿವಿಧೋದ್ದೇಶ ಸೈಕ್ಲೋನ್ ಶೆಲ್ಟರ್‌ಗಳನ್ನು ಸ್ಥಾಪಿಸಲಾಗಿದೆ. ಜೊತೆಗೆ, ಶಾಲಾ ಕಾಲೇಜು ಕಟ್ಟಡಗಳಲ್ಲೂ ಆಶ್ರಯ ಕಲ್ಪಿಸಲಾಗಿದೆ.

ವೈದ್ಯರ ರಜೆ ರದ್ದು:

ವೈದ್ಯರ ರಜೆಗಳನ್ನು ರದ್ದುಗೊಳಿಸಿ ಸೇವೆಗೆ ಮರಳಲು ಆದೇಶಿಸಲಾಗಿದೆ. ಅಂತೆಯೇ, ಅತಿಸಾರ, ವಿಷವಿರೋಧಿ ಚುಚ್ಚುಮದ್ದು ಹಾಗೂ ಅಗತ್ಯ ಔಷಧಿಗಳ ಸಂಗ್ರಹವನ್ನು ಇಟ್ಟುಕೊಳ್ಳುವಂತೆ ಆರೊಗ್ಯ ಇಲಾಖೆ ಸೂಚಿಸಿದೆ.

ಪ್ರವಾಸೋದ್ಯಮಕ್ಕೆ ಬ್ರೇಕ್‌:

ಸರ್ಕಾರದ ಆದೇಶಾನುಸಾರ ಪ್ರವಾಸಿಗರು ಹಾಗೂ ಭಕ್ತರು ಪುರಿಯಿಂದ ಹೊರಡುತ್ತಿದ್ದಾರೆ. ಜೊತೆಗೆ, 2 ದಿನಗಳ ಕಾಲ ಎಲ್ಲಾ ಸ್ಮಾರಕಗಳು ಹಾಗೂ ವಸ್ತುಸಂಗ್ರಹಾಲಯಗಳನ್ನು ಮುಚ್ಚುವಂತೆ ಪುರಾತತ್ವ ಇಲಾಖೆ ಸೂಚಿಸಿದೆ.