ಡಾನಾ ಚಂಡಮಾರುತ : ಒಡಿಶಾದಲ್ಲಿ 1.75 ಲಕ್ಷ ಎಕರೆ ಬೆಳೆ ಹಾನಿ, 2.80 ಲಕ್ಷ ಎಕರೆ ಮುಳುಗಡೆ

| Published : Oct 27 2024, 02:45 AM IST / Updated: Oct 27 2024, 04:38 AM IST

ಸಾರಾಂಶ

ಒಡಿಶಾ, ಪಶ್ಚಿಮ ಬಂಗಾಳದಲ್ಲಿ ಬೀಸಿದ್ದ ಡಾನಾ ಚಂಡಮಾರುತದಿಂದ ಒಡಿಶಾದಲ್ಲಿ 1.75 ಲಕ್ಷ ಎಕರೆ ಬೆಳೆದ ಬೆಳೆಗಳಿಗೆ ಹಾನಿ ಅಗಿದೆ ಹಾಗೂ 2.80 ಲಕ್ಷ ಎಕರೆ ಮುಳುಗಡೆಯಾಗಿದೆ.

ಭುವನೇಶ್ವರ (ಒಡಿಶಾ): ಒಡಿಶಾ, ಪಶ್ಚಿಮ ಬಂಗಾಳದಲ್ಲಿ ಬೀಸಿದ್ದ ಡಾನಾ ಚಂಡಮಾರುತದಿಂದ ಒಡಿಶಾದಲ್ಲಿ 1.75 ಲಕ್ಷ ಎಕರೆ ಬೆಳೆದ ಬೆಳೆಗಳಿಗೆ ಹಾನಿ ಅಗಿದೆ ಹಾಗೂ 2.80 ಲಕ್ಷ ಎಕರೆ ಮುಳುಗಡೆಯಾಗಿದೆ.

ಚಂಡಮಾರುತದಿಂದ ಆಗಿರುವ ಬೆಳೆಹಾನಿ ಬಗ್ಗೆ ನಿಖರ ಮೌಲ್ಯಮಾಪನಕ್ಕೆ ಸರ್ಕಾರ ನಿರ್ಧರಿಸಿದ್ದು, ಆರಂಭದಲ್ಲಿ ಇಷ್ಟು ಅಂಕಿ ಅಂಶಗಳು ಮೇಲ್ನೋಟಕ್ಕೆ ಕಂಡುಬಂದಿದೆ. ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ನೇತೃತ್ವದಲ್ಲಿ ಶುಕ್ರವಾರ ರಾತ್ರಿ ನಡೆದ ಪರಿಶೀಲನಾ ಸಭೆಯಲ್ಲಿ ಬೆಳೆ ಹಾನಿ ರೈತರಿಗೆ ಪರಿಹಾರ ನೀಡಲು ತೀರ್ಮಾನಿಸಲಾಗಿದೆ.

ಸಾವಿನ ಪ್ರಮಾಣ 4ಕ್ಕೆ ಏರಿಕೆ:

ಡಾನಾ ಚಂಡಮಾರುತದಿಂದ ಪಶ್ಚಿಮ ಬಂಗಾಳದ ಪೂರ್ವ ಬರ್ಧಮಾನ್‌ ಹಾಗೂ ಹೌರಾದಲ್ಲಿ ಮತ್ತೆ ಇಬ್ಬರು ಸಾವನ್ನಪ್ಪಿದ್ದು ಶನಿವಾರ ಗೊತ್ತಾಗಿದೆ. ಹೀಗಾಗಿ ಸಾವಿನ ಪ್ರಮಾಣ 4ಕ್ಕೆ ಏರಿಕೆಯಾಗಿದೆ.

ದಿಲ್ಲಿ: ಪಾರಿವಾಳಕ್ಕೆ ಆಹಾರ ನೀಡುವ ತಾಣಗಳ ನಿಷೇಧಕ್ಕೆ ಪ್ರಸ್ತಾವ

ನವದೆಹಲಿ: ಪಾರಿವಾಳ ಹಿಕ್ಕೆಯಿಂದ ಆರೋಗ್ಯಕ್ಕೆ ಅಪಾಯವುದೆ. ಹೀಗಾಗಿ ದೆಹಲಿಯಾದ್ಯಂತ ಪಾರಿವಾಳಗಳಿಗೆ ಆಹಾರ ನೀಡುವ ತಾಣಗಳನ್ನು ನಿಷೇಧಿಸಬೇಕೆಂದು ದೆಹಲಿಯ ಮುನ್ಸಿಪಲ್‌ ಕಾರ್ಪೋರೆಷನ್‌ (ಎಂಸಿಡಿ), ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದೆ.

 ಒಂದು ವೇಳೆ ಎಂಸಿಡಿಯ ಬೇಡಿಕೆಗೆ ಅನುಮತಿ ಸಿಕ್ಕರೆ , ದೆಹಲಿಯಲ್ಲಿ ಪಾರಿವಾಳಗಳಿಗೆ ಜನಪ್ರಿಯ ಆಹಾರ ತಾಣಗಳಾಗಿರುವ ಪಾದಚಾರಿ ಮಾರ್ಗ, ವೃತ್ತಗಳು ರಸ್ತೆ ಛೇದಕಗಳಲ್ಲಿ ಆಹಾರ ಹಾಕುವುದಕ್ಕೆ ನಿರ್ಬಂಧವಿರಲಿದೆ. ಮುನ್ಸಿಪಲ್‌ ಕಾರ್ಪೋರೆಷನ್‌ ಪ್ರಕಾರ ಈ ಯೋಜನೆ ಇನ್ನೂ ಆರಂಭದ ಹಂತದಲ್ಲಿದೆ. ಪಾರಿವಾಳಗಳ ಹಿಕ್ಕೆ ಸಾಲ್ಮೊನೆಲ್ಲಾ, ಇ.ಕೊಲಿ,ಇನ್‌ಫ್ಲುಯೆಂಜಾದಂತಹ ರೋಗಕ್ಕೆ ಕಾರಣವಾಗುತ್ತದೆ.

ಜೆಇಇ ಪರೀಕ್ಷೆಯಲ್ಲಿ ಫೇಲ್‌ ಆಗಿದ್ದಕ್ಕೆ ವಿದ್ಯಾರ್ಥಿನಿ ಆತ್ಮಹತ್ಯೆ

ನವದೆಹಲಿ: ದೇಶದ ಉನ್ನತ ಇಂಜಿನಿಯರಿಂಗ್‌ ಕಾಲೇಜುಗಳಲ್ಲಿ ಸೀಟು ಪಡೆಯಲು ಬರೆಯುವ ಜೆಇಇ (ಜಂಟಿ ಪ್ರವೇಶ ಪರೀಕ್ಷೆ) ಯಲ್ಲಿ ಅನುತ್ತೀರ್ಣಗೊಂಡ 17 ವರ್ಷದ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೆಹಲಿಯ ಓಖ್ಲಾ ಪ್ರದೇಶದಲ್ಲಿ ನಡೆದಿದೆ.‘ಓದಿನ ಒತ್ತಡ ಹಾಗೂ ನಿರೀಕ್ಷೆಯಂತೆ ಅಂಕ ಪಡೆಯಲು ವಿಫಲಳಾಗಿದ್ದು, ನನ್ನ ಆತ್ಮಹತ್ಯೆಗೆ ಕಾರಣ’ ಎಂದು ಆಕೆ ಡೆತ್‌ನೋಟ್‌ನಲ್ಲಿ ಬರೆದಿದ್ದಾಳೆ. ಶುಕ್ರವಾರ 11.25ಕ್ಕೆ ಓಕ್ಲಾದ ಮಾರುಕಟ್ಟೆ ಮುಖ್ಯ ರಸ್ತೆಯಲ್ಲಿರುವ ಕಟ್ಟಡದ 7ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಸಂಬಂಧ ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಸೆಕ್ಷನ್‌ 194 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಲಾಕಪ್‌ನಲ್ಲೇ ಬಿಷ್ಣೋಯಿ ಟೀವಿ ಸಂದರ್ಶನ: 7 ಪೊಲೀಸರು ಅಮಾನತು

ಚಂಡೀಗಢ: ಪಾತಕಿ ಲಾರೆನ್ಸ್‌ ಬಿಷ್ಣೋಯಿ ಪೊಲೀಸ್‌ ಕಸ್ಟಡಿಯಲ್ಲಿದ್ದಾಗಲೇ ಮಾಧ್ಯಮಗಳಿಗೆ ಸಂದರ್ಶನ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪದ ಮೇಲೆ ಇಬ್ಬರು ಉಪ ಅಧೀಕ್ಷಕರು ಸೇರಿದಂತೆ 7 ಪೊಲೀಸ್‌ ಸಿಬ್ಬಂದಿಗಳನ್ನು ಪಂಜಾಬ್‌ ಸರ್ಕಾರ ಅಮಾನತು ಮಾಡಿದೆ. ಲಾರೆನ್ಸ್‌ ಬಿಷ್ಣೋಯಿಯನ್ನು 2022ರ ಸೆ.3 ಮತ್ತು 4 ರಂದು ವಿಡಿಯೋ ಕಾನ್ಫರೆನ್ಸ್‌ ಮೂಲಕ 2 ಟೀವಿ ಚಾನೆಲ್‌ಗಳು ಸಂದರ್ಶನ ಮಾಡಿದ್ದವು. ಹೀಗಾಗಿ ಆ ಸಂದರ್ಭದಲ್ಲಿ ಕರ್ತವ್ಯದಲ್ಲಿದ್ದ ಏಳು ಪೊಲೀಸ್‌ ಸಿಬ್ಬಂದಿಗಳನ್ನು ಅಮಾನತು ಮಾಡಿ ಗೃಹ ಇಲಾಖೆ ಆದೇಶಿಸಿದೆ.

ಬಿಷ್ಣೋಯಿ 2022ರ ಪಂಜಾಬ್ ಗಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣದ ಆರೋಪಿಯಾಗಿದ್ದಾನೆ.

ಐಟಿ ರಿಟರ್ನ್ಸ್‌: ಕಾರ್ಪೋರೆಟ್‌ ಕಂಪನಿ ಗಡುವು ನ.15ರವರೆಗೆ ವಿಸ್ತರಣೆ

ನವದೆಹಲಿ: ಕಾರ್ಪೊರೇಟ್‌ ಕಂಪನಿಗಳಿಗೆ 2024-25ನೇ ಸಾಲಿನ ಆದಾಯ ತೆರಿಗೆ ರಿಟರ್ನ್ಸ್‌ ಸಲ್ಲಿಸಲು ಕೊನೆ ದಿನಾಂಕವನ್ನು ಅ.31ರಿಂದ ನ.15ರವರೆಗೆ ವಿಸ್ತರಿಸಿ ಆದಯ ತೆರಿಗೆ ಇಲಾಖೆ ಆದೇಶ ಹೊರಡಿಸಿದೆ.ಈ ವಿಸ್ತರಣೆಯು ಕೇವಲ ಕಾರ್ಪೊರೇಟ್‌ ಉದ್ಯಮಕ್ಕೆ ಮಾತ್ರ ಸೀಮಿತವಾಗಿದ್ದು, ಮಿಕ್ಕೆಲ್ಲಾ ಐಟಿ ರಿಟರ್ನ್ಸ್‌ಗಳು ಅ.31ರ ಒಳಗಾಗಿಯೇ ಸಲ್ಲಿಸಬೇಕಿದೆ ಎಂದು ಕೇಂದ್ರ ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (ಸಿಬಿಡಿಟಿ) ಹೇಳಿದೆ.

ಸೆಪ್ಟೆಂಬರ್‌ನಲ್ಲಿ ಆದಾಯ ತೆರಿಗೆ ಮಾಹಿತಿ ಸಲ್ಲಿಸಲು ಕೊನೆ ದಿನಾಂಕವನ್ನು ಅ.7ರವರೆಗೆ ವಿಸ್ತರಣೆ ಮಾಡಿತ್ತು.