-ಬೇಧಿ, ಕಿಡ್ನಿ ವೈಫಲ್ಯ ಉಂಟುಮಾಡುವ ಆತಂಕ
-ಅನೇಕ ನಿಲ್ದಾಣಗಳಲ್ಲಿ ಶೌಚಾಲಯಕ್ಕೂ ತತ್ವಾರ-ವರದಿ ಬೆನ್ನಲ್ಲೇ ಸೂಕ್ತ ಕ್ರಮಕ್ಕೆ ಸರ್ಕಾರ ಆದೇಶ
ನವದೆಹಲಿ: ಬೆಂಗಳೂರು, ಮುಂಬೈ ಸೇರಿದಂತೆ ದೇಶದ ವಿವಿಧ ನಗರಗಳ ಹೋಟೆಲ್, ರೆಸ್ಟೋರೆಂಟ್, ಬೇಕರಿಗಳ ಮೇಲೆ ನಡೆದ ದಾಳಿ ವೇಳೆ ಕೊಳಕು ಆಹಾರ, ಮಾಂಸ, ತರಕಾರಿ ಪದಾರ್ಥಗಳು ಪತ್ತೆಯಾಗಿ ಆತಂಕ ಸೃಷ್ಟಿಯಾದ ಬೆನ್ನಲ್ಲೇ ದೇಶದ ವಿವಿಧ ರೈಲ್ವೆ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಒದಗಿಸಲಾಗುವ ಕುಡಿಯುವ ನೀರಿನಲ್ಲಿ ಅಪಾಯಕಾರಿ ಇ. ಕೋಲೈ ಬ್ಯಾಕ್ಟೀರಿಯಾ ಪತ್ತೆಯಾಗಿದೆ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.ಈ ವಿಷಯ ಬೆಳಕಿಗೆ ಬಂದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ರೈಲ್ವೆ ಖಾತೆ ಸಚಿವ ಅಶ್ವಿನ್ ವೈಷ್ಣವ್ ಹಿರಿಯ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿ 20,000 ಕೇಂದ್ರಗಳಲ್ಲಿ ವಾಟರ್ ಕೂಲರ್‌ಗಳು ಮತ್ತು ಮೇಲ್ವಿಚಾರಣಾ ವ್ಯವಸ್ಥೆಯನ್ನು ಅಳವಡಿಸಲು ಸೂಚಿಸಿದ್ದಾರೆ.
ಬ್ಯಾಕ್ಟೀರಿಯಾ ಪತ್ತೆ:
ಕೊಯಮತ್ತೂರು, ಪಾಲಕ್ಕಾಡ್, ಹೈದರಾಬಾದ್, ಮುಂಬೈ ಸಿಎಸ್‌ಎಂಟಿ, ಕಲ್ಯಾಣ್, ಲೋನಾವಲಾ ಹಾಗೂ ಮಧುಪುರ ನಿಲ್ದಾಣಗಳ ಕುಡಿಯುವ ನೀರಿನಲ್ಲಿ ಈ ಬ್ಯಾಕ್ಟೀರಿಯಾ ಕಂಡುಬಂದಿದೆ. ಇಂತಹ ಕಲುಷಿತ ನೀರನ್ನು ಸೇವಿಸುವುದರಿಂದ ಫುಡ್ ಪಾಯಿಸನಿಂಗ್, ಭೇದಿ ಮತ್ತು ಮೂತ್ರಪಿಂಡ ವೈಫಲ್ಯದಂತಹ ತೀವ್ರ ಆರೋಗ್ಯ ಸಮಸ್ಯೆಗಳು ಎದುರಾಗುವ ಸಾಧ್ಯತೆಯಿದೆ ಎಂದು ಎಂದು ಮಹಾಲೇಖಪಾಲರ (ಸಿಎಜಿ) ಕಚೇರಿ ತನ್ನ ಇತ್ತೀಚಿನ ವರದಿಯಲ್ಲಿ ಆತಂಕ ವ್ಯಕ್ತಪಡಿಸಿದೆ.
ಪರಿಶೀಲನೆ ನಡೆಸಲಾದ 512 ನಿಲ್ದಾಣಗಳ ಪೈಕಿ ಶೇ.89ಕ್ಕೂ ಹೆಚ್ಚು (458) ನಿಲ್ದಾಣಗಳಲ್ಲಿ ಫ್ಯಾನ್, ಶೌಚಾಲಯದಂತಹ ಮೂಲಭೂತ ಸೌಕರ್ಯಗಳ ಕೊರತೆಯಿದೆ. ಅನೇಕ ನಿಲ್ದಾಣಗಳ ಶೌಚಾಲಯಗಳು ಅತ್ಯಂತ ಅಶುಚಿಯಾಗಿವೆ. ಈ ಹಿನ್ನೆಲೆಯಲ್ಲಿ, ರೈಲ್ವೆ ಇಲಾಖೆಯು ಪ್ರಯಾಣಿಕರಿಗೆ ಶುದ್ಧ ನೀರು ಹಾಗೂ ನೈರ್ಮಲ್ಯವನ್ನು ಖಚಿತಪಡಿಸಬೇಕು ಎಂದು ವರದಿಯಲ್ಲಿ ಕಟ್ಟುನಿಟ್ಟಿನ ಶಿಫಾರಸು ಮಾಡಲಾಗಿದೆ.ವರದಿ ಬೆನ್ನಲ್ಲೇ ಎಚ್ಚೆತ್ತ ಸರ್ಕಾರ:
ಸಿಎಜಿ ವರದಿಯ ಬೆನ್ನಲ್ಲೇ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಿರಿಯ ಅಧಿಕಾರಿಗಳ ಜತೆ ಸುದೀರ್ಘ ಪರಿಶೀಲನಾ ಸಭೆ ನಡೆಸಿದ್ದಾರೆ. ಸಭೆಯ ನಂತರ, 20,000 ಕೇಂದ್ರಗಳಲ್ಲಿ ವಾಟರ್ ಕೂಲರ್‌ಗಳು ಮತ್ತು ಮೇಲ್ವಿಚಾರಣಾ ವ್ಯವಸ್ಥೆಯನ್ನು ಅಳವಡಿಸಲು ನಿರ್ಧರಿಸಲಾಗಿದೆ. ಹಳೆಯ ನೀರಿನ ಟ್ಯಾಂಕ್‌ಗಳನ್ನು ಬದಲಿಸುವುದು, ನಿಗದಿತ ವೇಳಾಪಟ್ಟಿಯಂತೆ ಟ್ಯಾಂಕ್‌ಗಳ ಶುಚಿಗೊಳಿಸುವಿಕೆ ಹಾಗೂ ನೀರಿನ ಗುಣಮಟ್ಟ ತಪಾಸಣೆಗೆ ಸರ್ಕಾರ ಸೂಚಿಸಿದೆ. ಈ ಕಾರ್ಯವನ್ನು ರೈಲ್ವೆ ಮಂಡಳಿಯ ಹಂತದಲ್ಲೇ ನೇರವಾಗಿ ಮೇಲ್ವಿಚಾರಣೆ ಮಾಡಲಾಗುವುದು ಹಾಗೂ ಪಾರದರ್ಶಕತೆಗಾಗಿ ನಿಯಮಿತವಾಗಿ ನೀರು ಪರೀಕ್ಷೆಯ ವರದಿಗಳನ್ನು ಪ್ರಕಟಿಸಲಾಗುವುದು ಎಂದು ಸಚಿವಾಲಯ ತಿಳಿಸಿದೆ.