ಫ್ರಾನ್ಸ್‌ನ ಅತ್ಯಾಧುನಿಕ ಯುದ್ಧವಿಮಾನ ರಫೇಲ್‌ನ ಬಾಡಿ (ಫ್ಯೂಸೆಲಾಜ್‌) ಇನ್ನು ಭಾರತದಲ್ಲೇ ನಿರ್ಮಾಣವಾಗಲಿದೆ. ಈ ಸಂಬಂಧ ಫ್ರಾನ್ಸ್‌ನ ಡಸಾಲ್ಟ್‌ ಏವಿಯೇಷನ್ ಕಂಪನಿಯು ಭಾರತದ ಟಾಟಾ ಅಡ್ವಾನ್ಸ್ಡ್‌ ಸಿಸ್ಟಮ್ಸ್‌ ಜತೆಗೆ ಒಪ್ಪಂದ ಮಾಡಿಕೊಂಡಿದೆ.  

 ನವದೆಹಲಿ : ಫ್ರಾನ್ಸ್‌ನ ಅತ್ಯಾಧುನಿಕ ಯುದ್ಧವಿಮಾನ ರಫೇಲ್‌ನ ಬಾಡಿ (ಫ್ಯೂಸೆಲಾಜ್‌) ಇನ್ನು ಭಾರತದಲ್ಲೇ ನಿರ್ಮಾಣವಾಗಲಿದೆ. ಈ ಸಂಬಂಧ ಫ್ರಾನ್ಸ್‌ನ ಡಸಾಲ್ಟ್‌ ಏವಿಯೇಷನ್ ಕಂಪನಿಯು ಭಾರತದ ಟಾಟಾ ಅಡ್ವಾನ್ಸ್ಡ್‌ ಸಿಸ್ಟಮ್ಸ್‌ ಜತೆಗೆ ಒಪ್ಪಂದ ಮಾಡಿಕೊಂಡಿದೆ. 2028ರಿಂದ ದೇಶೀ ನಿರ್ಮಿತ ಬಾಡಿಯ ರಫೇಲ್‌ ಯುದ್ಧವಿಮಾನ, ಭಾರತಕ್ಕೆ ಪೂರೈಕೆಯಾಗುವ ನಿರೀಕ್ಷೆ ಇದೆ.

ಈ ಸಹಭಾಗಿತ್ವದ ಪ್ರಕಾರ, ಟಾಟಾ ಅಡ್ವಾನ್ಸ್‌ಡ್‌ ಸಿಸ್ಟಮ್ಸ್‌(ಟಿಎಎಸ್‌ಎಲ್‌) ಹೈದರಾಬಾದ್‌ನಲ್ಲಿ ರಫೇಲ್‌ ಯುದ್ಧ ವಿಮಾನ ತಯಾರಿಕೆಯ ಅತ್ಯಾಧುನಿಕ ಉತ್ಪಾದನಾ ಘಟಕ ನಿರ್ಮಿಸಲಿದೆ. ರಫೇಲ್‌ ಯುದ್ಧವಿಮಾನದ ಮೊದಲ ಬಾಡಿ 2028ನೇ ವಿತ್ತವರ್ಷದಲ್ಲಿ ಹೊರಬರಲಿದೆ. ಈ ಘಟಕ ಸಂಪೂರ್ಣವಾಗಿ ಸಿದ್ಧಗೊಂಡಾಗ ಪ್ರತಿ ತಿಂಗಳು ಎರಡು ಬಾಡಿಗಳು ನಿರ್ಮಾಣವಾಗಿ ಹೊರಬರಲಿವೆ. ಆ ಬಳಿಕ ಈ ಯುದ್ಧವಿಮಾನಕ್ಕೆ ಇತರೆ ಬಿಡಿಭಾಗಗಳನ್ನು ಜೋಡಿಸುವ ಕೆಲಸ ಆಗಲಿದೆ ಎಂದು ಟಾಟಾ ಅಡ್ವಾನ್ಸ್‌ಡ್‌ ಸಿಸ್ಟಮ್ಸ್‌ ಲಿ. ಹೇಳಿದೆ.

ಏನಿದು ಫ್ಯೂಸೆಲಾಜ್‌?:

ಫ್ಯೂಸೆಲಾಜ್‌ ಎಂಬುದು ಯಾವುದೇ ಯುದ್ಧ ವಿಮಾನದ ಪ್ರಮುಖ ಚೌಕಟ್ಟಾಗಿದೆ. ಇದು ಕಾಕ್‌ಪಿಟ್‌, ಇಂಜಿನ್‌, ಇಲೆಕ್ಟ್ರಾನಿಕ್‌ ವಿಭಾಗವನ್ನು ಜೋಡಿಸುತ್ತದೆ. ಅಲ್ಲದೆ ರೆಕ್ಕೆಗಳು ಮತ್ತು ಬಾಲವನ್ನು ಬ್ಯಾಲೆನ್ಸ್‌ ಮಾಡುತ್ತದೆ. ರಫೇಲ್‌ನ ಈ ಫ್ಯೂಸೆಲಾಜ್‌ ವಿಶೇಷ ರೀತಿಯಲ್ಲಿ ನಿರ್ಮಾಣವಾಗುವ ಕಾರಣ ಯುದ್ಧವಿಮಾನವು ಶತ್ರುಗಳ ರೇಡಾರ್‌ನಿಂದ ತಪ್ಪಿಸಿಕೊಳ್ಳಲು ನೆರವು ನೀಡುತ್ತದೆ. ವಿಶೇಷವೆಂದರೆ ಡಸಾಲ್ಟ್‌ ಏವಿಷೇಯನ್‌ ಕಂಪನಿ ತನ್ನ ಯುದ್ಧವಿಮಾನದ ಬಾಡಿಯನ್ನು ಫ್ರಾನ್ಸ್‌ನ ಹೊರಗೆ ನಿರ್ಮಿಸುತ್ತಿರುವುದು ಇದೇ ಮೊದಲು.

ಈ ಸಹಭಾಗಿತ್ವವು ಭಾರತದ ಏರೋಸ್ಪೇಸ್‌ ಕ್ಷೇತ್ರದ ಬೆಳವಣಿಗೆಯಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದು ಟಿಎಎಸ್‌ಎಲ್‌ ಹೇಳಿಕೊಂಡಿದೆ.

ಈಗಾಗಲೇ ಹಲವು ರಫೇಲ್‌ ಯುದ್ಧವಿಮಾನಗಳು ಭಾರತದ ವಾಯುಸೇನೆಗೆ ಸೇರ್ಪಡೆಯಾಗಿವೆ. ಇನ್ನು ನೌಕಾದಳಕ್ಕೆ 26 ಯುದ್ಧವಿಮಾನಗಳು 2028ರಿಂದ 2030ರ ನಡುವೆ ಹಂತ ಹಂತವಾಗಿ ಪೂರೈಕೆಯಾಗಲಿದೆ.