ಟೆನಿಸ್‌ ದಿಗ್ಗಜ ಲಿಯಾಂಡರ್‌ ಪೇಸ್ ತೃಣಮೂಲ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರ್ಪಡೆ ಬೆನ್ನಲ್ಲೇ ಕೇಂದ್ರ ಗೃಹ ಇಲಾಖೆಯು ಅವರಿಗೆ ಎಕ್ಸ್ ಕೆಟಗರಿಯ ಭದ್ರತೆ ಒದಗಿಸಿದೆ. ಈ ಪ್ರಕಾರ ಅವರನ್ನು ಸಿಐಎಸ್‌ಎಫ್‌ ಸಿಬ್ಬಂದಿ ಕಾಯಲಿದ್ದಾರೆ.

ಕೋಲ್ಕತಾ: ಟೆನಿಸ್‌ ದಿಗ್ಗಜ ಲಿಯಾಂಡರ್‌ ಪೇಸ್ ತೃಣಮೂಲ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರ್ಪಡೆ ಬೆನ್ನಲ್ಲೇ ಕೇಂದ್ರ ಗೃಹ ಇಲಾಖೆಯು ಅವರಿಗೆ ಎಕ್ಸ್ ಕೆಟಗರಿಯ ಭದ್ರತೆ ಒದಗಿಸಿದೆ. ಈ ಪ್ರಕಾರ ಅವರನ್ನು ಸಿಐಎಸ್‌ಎಫ್‌ ಸಿಬ್ಬಂದಿ ಕಾಯಲಿದ್ದಾರೆ.

ಪಂಚ ರಾಜ್ಯ ಚುನಾವಣಾ ಹೊಸ್ತಿಲಿನಲ್ಲಿ ಬಿಜೆಪಿ ಸೇರಿದ್ದ ಲಿಯಾಂಡರ್‌ ಪಶ್ಚಿಮ ಬಂಗಾಳ ಮತಕಣದಲ್ಲಿ ಸಕ್ರಿಯವಾಗುವ ಸಾಧ್ಯತೆಗಳಿವೆ. ಈ ಹೊತ್ತಲ್ಲಿಯೇ ಕೇಂದ್ರ ಸರ್ಕಾರ ಭದ್ರತೆ ಒದಗಿಸಿದೆ. ಇದರ ನಡುವೆ ಬಿಜೆಪಿ ಅವರನ್ನು ಸ್ಟಾರ್ ಪ್ರಚಾರಕ ಪಟ್ಟಿಗೂ ಸೇರಿಸಿದೆ.

==

ಭೂಮಿಯ ಕಕ್ಷೆ ಬಿಟ್ಟು ನಾಸಾ ಯಾನಿಗಳು ಚಂದ್ರನ ತೆಕ್ಕೆಗೆ

ಮಾನವ ತಲುಪಿದ ಅತ್ಯಧಿಕ ದೂರದ ದಾಖಲೆಗೆ ಸಮೀಪ

ವಾಷಿಂಗ್ಟನ್‌: ಚಂದ್ರನೊಗೊಂದು ಸುತ್ತು ಹಾಕುವ ನಾಸಾದ ಆರ್ಟಿಮಿಸ್‌-2 ಯೋಜನೆಯ ಭಾಗವಾಗಿ ಬಾಹ್ಯಾಕಾಶ ಯಾನವನ್ನು ಕೈಗೊಂಡಿರುವ ನಾಲ್ವರು ಗಗನಯಾನಿಗಳನ್ನು ಹೊತ್ತ ನೌಕೆಯು ಇದೀಗ ಭೂಮಿಯ ಕಕ್ಷೆಯಿಂದ ಪಾರಾಗಿ ಸೋಮವಾರ ಚಂದ್ರನ ಗುರುತ್ವಾಕರ್ಷಣಾ ವಲಯಕ್ಕೆ ತಲುಪಿದೆ.1972ರ ಬಳಿಕ ಯಾವೊಬ್ಬ ಮಾನವನೂ ಭೂಕಕ್ಷೆಯ ಹೊರಗೆ ಹೋಗಿರಲಿಲ್ಲ. ಇದೀಗ ಯಾನ ಮುಂದುವರೆದಂತೆ ಅಮೆರಿಕದ ಮೂವರು ಮತ್ತು ಕೆನಡಾದ ಒಬ್ಬ ಗಗನಯಾತ್ರಿ, ಅತಿ ಎತ್ತರದ ಪ್ರದೇಶ ತಲುಪಿದ ಮಾನವರು ಎಂಬ ಖ್ಯಾತಿಯನ್ನು ಗಳಿಸಲಿದ್ದಾರೆ.

ಇವರನ್ನು ಹೊತ್ತ ಎಸ್‌ಎಲ್‌ಎಸ್‌ ರಾಕೆಟ್‌ ಏ.2ರಂದು ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಯಾಗಿತ್ತು.

==

ರೇಪಿಸ್ಟ್‌ ಜ್ಯೋತಿಷಿ ಖರಾತ್‌ ವಿರುದ್ಧ ಇ.ಡಿ.ಯಿಂದ ಅಕ್ರಮ

ಹಣ ವರ್ಗಾವಣೆ ಪ್ರಕರಣ

ಮುಂಬೈ: 50ಕ್ಕೂ ಅಧಿಕ ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಬಂಧಿತನಾಗಿರುವ ಜ್ಯೋತಿಷಿ ಅಶೋಕ್‌ ಖರಾತ್‌ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ.) ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿದೆ. ಶೀಘ್ರದಲ್ಲೇ ವಿಚಾರಣೆ ನಡೆಯಲಿದೆ ಎಂದು ಸೋಮವಾರ ಅಧಿಕಾರಿಗಳು ತಿಳಿಸಿದ್ದಾರೆ.ಮಹಿಳೆಯೊಬ್ಬರು ಕೊಟ್ಟ ದೂರಿನನ್ವಯ ಮಾರ್ಚ್‌ನಲ್ಲಿ ಖರಾತ್‌ನನ್ನು ಬಂಧಿಸಲಾಗಿತ್ತು. ಈತನ ವಿರುದ್ಧ ಪೊಲೀಸರು 8 ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ. ಇವುಗಳನ್ನು ಗಮನಿಸಿರುವ ಇ.ಡಿ. ಖರಾತ್‌ ಹಾಗೂ ಆತನ ಜೊತೆ ಸಂಪರ್ಕ ಹೊಂದಿರುವ ಇತರರನ್ನು ಶೀಘ್ರದಲ್ಲೇ ವಿಚಾರಣೆಗೆ ಒಳಪಡಿಸಲಿದೆ ಎಂದು ತಿಳಿದುಬಂದಿದೆ.ರಾಜಕೀಯ ಪ್ರಭಾವಿಗಳ ಜೊತೆ ನಂಟು ಹೊಂದಿದ್ದ ಖರಾತ್‌, ಅಕ್ರಮವಾಗಿ ಕೋಟ್ಯಂತರ ಮೌಲ್ಯದ ಆಸ್ತಿ ಮಾಡಿಕೊಂಡಿದ್ದಾನೆ ಎಂಬ ಆಪಾದನೆಯಿದೆ.

==

ಹೆದ್ದಾರಿಗಳಿಗೆ ಬೀದಿ ದನ ಬರದಂತೆ ಕ್ರಮ: ಕೇಂದ್ರದ ಪ್ರತಿಕ್ರಿಯೆ ಕೇಳಿದ ಸುಪ್ರೀಂ

ರಾಜ್ಯ, ಪಶು ಅಭಿವೃದ್ಧಿ ಮಂಡಳಿಗೂ ಆದೇಶ । ಪ್ರತಿಕ್ರಿಯೆ ನೀಡಲು 4 ವಾರಗಳ ಗಡುವು

ನವದೆಹಲಿ: ದೇಶಾದ್ಯಂತ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಿಗೆ ಬೀದಿ ದನಗಳು ಪ್ರವೇಶಿಸದಂತೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಸೋಮವಾರ ಕೇಂದ್ರ, ರಾಜ್ಯ ಸರ್ಕಾರಗಳು ಹಾಗೂ ರಾಷ್ಟ್ರೀಯ ಪಶು ಅಭಿವೃದ್ಧಿ ಮಂಡಳಿಯಿಂದ 4 ವಾರಗಳ ಒಳಗಾಗಿ ಪ್ರತಿಕ್ರಿಯೆ ಕೋರಿದೆ.

ಕೆಲವು ರಾಜ್ಯಗಳು 10 ಪ್ರತಿಶತ ಹಸು ತೆರಿಗೆ ವಸೂಲಿ ಮಾಡುತ್ತಿದ್ದರೂ, ಬೀದಿ ದನಗಳ ಸಮಸ್ಯೆಯನ್ನು ಪರಿಹರಿಸಲು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿದೆ.ದೇಶಾದ್ಯಂತ ಏಕರೂಪದ ರಾಷ್ಟ್ರೀಯ ಮಾರ್ಗಸೂಚಿಗಳನ್ನು ಜಾರಿಗೊಳಿಸಬೇಕು. ರಾಷ್ಟ್ರೀಯ ಹೆದ್ದಾರಿಗಳಿಗೆ ಕಡ್ಡಾಯವಾಗಿ ಬೇಲಿ ಹಾಕಬೇಕು. ಗೋಶಾಲೆ ನಿರ್ಮಿಸಿ, ನಿಗದಿತ ಅನುದಾನ ನೀಡಬೇಕು. ದನಗಳನ್ನು ರಸ್ತೆಗೆ ಬಿಡುವವರಿಗೆ ಕಠಿಣ ಶಿಕ್ಷೆ ವಿಧಿಸಿಬೇಕು ಎಂಬಿತ್ಯಾದಿ ಮನವಿಯನ್ನು ಅರ್ಜಿಯಲ್ಲಿ ಮಾಡಲಾಗಿತ್ತು.ಜ.29ರಂದು ಇದೇ ವಿಷಯದ ಕುರಿತು ತೀರ್ಪು ನೀಡಿದ್ದ ಸುಪ್ರೀಂ, ರಸ್ತೆ ನಿರ್ಮಾಣದಲ್ಲಿ ತೊಡಗಿರುವ ಸಂಸ್ಥೆಗಳು ಗೋಶಾಲೆಗಳನ್ನು ಸ್ಥಾಪಿಸಿ ಹೆದ್ದಾರಿಗಳಲ್ಲಿ ತಿರುಗಾಡುವ ಬೀದಿ ದನಗಳನ್ನು ನೋಡಿಕೊಳ್ಳುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸೂಚಿಸಿತ್ತು. 2025ರ ನ.7ರ ತೀರ್ಪಿನಲ್ಲಿಯೂ ರಾಷ್ಟ್ರೀಯ ಹೆದ್ದಾರಿಗಳಿಂದ ಎಲ್ಲಾ ಬೀದಿ ದನಗಳು ಮತ್ತು ಇತರ ಪ್ರಾಣಿಗಳನ್ನು ತೆರವುಗೊಳಿಸುವಂತೆ ಆದೇಶಿಸಿತ್ತು. ಈ ಕುರಿತು ಕೈಗೊಂಡಿರುವ ಕ್ರಮಗಳ ಬಗ್ಗೆ ಇದೀಗ ಪ್ರತಿಕ್ರಿಯೆ ನೀಡುವಂತೆ ಆದೇಶಿಸಿದೆ.

==

ಪವಾರ್‌, ಅಠಾವಳೆ ಸೇರಿ 19 ಮಂದಿ ರಾಜ್ಯಸಭಾ ಸಂಸದರಾಗಿ ಶಪಥ

ನವದೆಹಲಿ: ಎನ್‌ಸಿಪಿ ನಾಯಕ ಶರದ್ ಪವಾರ್‌, ಕೇಂದ್ರ ಸಚಿವ ರಾಮದಾಸ್‌ ಅಠಾವಳೆ, ಸದನಕ್ಕೆ ಆಯ್ಕೆಯಾದ ಮೊದಲ ತೃತೀಯ ಲಿಂಗಿ ಮನೇಕಾ ಗುರುಸ್ವಾಮಿ ಸೇರಿದಂತೆ 19 ಮಂದಿ ಸೋಮವಾರ ರಾಜ್ಯಸಬಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು.ಉಪ ರಾಷ್ಟ್ರಪತಿಯೂ ಆದ ರಾಜ್ಯಸಭೆ ಸಭಾಪತಿ ಸಿ.ಪಿ. ರಾಧಾಕೃಷ್ಣನ್‌ ಸಮ್ಮುಖದಲ್ಲಿ ನಾಯಕರು ಶಪಥ ಸ್ವೀಕರಿಸಿದರು. ಈ ವೇಳೆ ಉಪ ಸಭಾಪತಿ ಹರಿವಂಶ್‌, ಕೇಂದ್ರ ಸಚಿವ ಕಿರಣ್‌ ರಿಜಿಜು, ವಿವಿಧ ಪಕ್ಷಗಳ ನಾಯಕರು ಉಪಸ್ಥಿತರಿದ್ದರು. ಮಹಾರಾಷ್ಟ್ರದ ಐವರು, ತಮಿಳುನಾಡಿನಿಂದ ಆರು, ಪಶ್ಚಿಮ ಬಂಗಾಳದಿಂದ ಐವರು ಮತ್ತು ಒಡಿಶಾದಿಂದ ಮೂವರು ಶಪಥ ಸ್ವೀಕರಿಸಿದರು. ಬಹುತೇಕರು ತಮ್ಮ ಪ್ರಾದೇಶಿಕ ಭಾಷೆಯಲ್ಲಿಯೇ ಶಪಥ ಮಾಡಿದ್ದು ಗಮನಾರ್ಹವಾಗಿತ್ತು.