ತಮಿಳುನಾಡು ಕಳ್ಳಬಟ್ಟಿ ದುರಂತಕ್ಕೆ 38 ಬಲಿ

| Published : Jun 21 2024, 01:04 AM IST / Updated: Jun 21 2024, 05:05 AM IST

ಸಾರಾಂಶ

ಚೆನ್ನೈನಿಂದ 250 ಕಿಮೀ ದೂರದ ತಮಿಳುನಾಡಿನ ಕಲ್ಲಕುರಿಚಿ ಜಿಲ್ಲೆಯಲ್ಲಿ ನಕಲಿ ಮದ್ಯ (ಕಳ್ಳಬಟ್ಟಿ) ಸೇವಿಸಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 38ಕ್ಕೇರಿದೆ.

 ಚೆನ್ನೈ : ಚೆನ್ನೈನಿಂದ 250 ಕಿಮೀ ದೂರದ ತಮಿಳುನಾಡಿನ ಕಲ್ಲಕುರಿಚಿ ಜಿಲ್ಲೆಯಲ್ಲಿ ನಕಲಿ ಮದ್ಯ (ಕಳ್ಳಬಟ್ಟಿ) ಸೇವಿಸಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 38ಕ್ಕೇರಿದೆ. ಇನ್ನೂ100 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಂಭವವಿದೆ. ಘಟನೆಗೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದೆ.

‘ಮೆಥನಾಲ್‌ ಮಿಶ್ರಿತ ಮದ್ಯ ಸೇವನೆಯೇ ಇದಕ್ಕೆ ಕಾರಣವಾಗಿದೆ. ಇಂತಹ ಘಟನೆಗಳು ಮರುಕಳಿಸದಂತೆ ಶಿಫಾರಸು ಮಾಡಲು ಹೈಕೋರ್ಟ್ ನಿವೃತ್ತ ನ್ಯಾ। ಬಿ. ಗೋಕುಲದಾಸ್ ನೇತೃತ್ವದ ಏಕವ್ಯಕ್ತಿ ಆಯೋಗಕ್ಕೆ ಸೂಚಿಸಲಾಗಿದೆ. ಮೃತರ ಕುಟುಂಬಕ್ಕೆ ತಲಾ 10 ಲಕ್ಷ ರು. ನೀಡಲಾಗುತ್ತದೆ’ ಎಂದು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಹೇಳಿದ್ದಾರೆ.

ಕಳ್ಳಬಟ್ಟಿ ಸೇವಿಸಿದ ಕರುಣಾಪುರಂ ಕಾಲೋನಿಯ 100ಕ್ಕೂ ಹೆಚ್ಚು ಜನ ದೃಷ್ಟಿ ಮತ್ತು ಶ್ರವಣ ದೋಷ, ತೀವ್ರ ಹೊಟ್ಟೆ ನೋವು ಮತ್ತು ವಾಂತಿ ಎಂದು ದೂರಿದ್ದರು. ನಂತರ ಅವರನ್ನು ಬುಧವಾರ ನಸುಕಿನಲ್ಲಿ ಕಲ್ಲಕುರಿಚಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಭಾರಿ ಪ್ರಮಾಣದ ಸಾವಿನ ಸರಣಿ ಸಂಭವಿಸಿದೆ. ಈಗ ಅನೇಕ ರೋಗಿಗಳನ್ನು ಉನ್ನತ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಇವರು ಸ್ಥಳೀಯ ಮದ್ಯ ಮಾರಾಟಗಾರ ಗೋವಿಂದರಾಜ್ ಎಂಬಾತನಿಂದ ಮದ್ಯ ಖರೀದಿಸಿದ್ದರು. ಗೋವಿಂದರಾಜ ಸೇರಿ ನಾಲ್ವರನ್ನು ಬಂಧಿಸಲಾಗಿದೆ. ಆತನಿಂದ 200 ಲೀ. ಮದ್ಯ ವಶಪಡಿಸಿಕೊಳ್ಳಲಾಗಿದೆ. ಮದ್ಯಕ್ಕೆ ಮೆಥೆನಾಲ್ ಅನ್ನು ಸೇರಿಸಿರುವುದು ದುರಂತಕ್ಕೆ ಕಾರಣವಾಗಿದೆ ಎಂದು ಲ್ಯಾಬ್‌ ವರದಿ ಹೇಳಿದೆ.