ಸಾರಾಂಶ
ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆ ಸಹ ಸಂಸ್ಥಾಪಕ ಯಾಸೀನ್ ಭಟ್ಕಳ್‌ಗೆ ತಾಯಿ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಲು ದೆಹಲಿ ಕೋರ್ಟ್ ಅವಕಾಶ ಕಲ್ಪಿಸಿದೆ.
ನವದೆಹಲಿ: ಪ್ರಸ್ತುತ ತಿಹಾರ್ ಜೈಲಿನಲ್ಲಿರುವ ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆ ಸಹ ಸಂಸ್ಥಾಪಕ ಯಾಸೀನ್ ಭಟ್ಕಳ್‌ಗೆ ತಾಯಿ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಲು ಅವಕಾಶ ಕಲ್ಪಿಸುವಂತೆ ದೆಹಲಿ ಕೋರ್ಟ್ ಜೈಲಿನ ಅಧಿಕಾರಿಗಳಿಗೆ ಸೂಚಿಸಿದೆ.
ಯಾಸಿನ್ ಭಟ್ಕಳ್ ತಾಯಿ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಹೀಗಾಗಿ ತಾಯಿ ಭೇಟಿ ಆಗಲು ಪೆರೋಲ್ ನೀಡುವಂತೆ ಯಾಸಿನ್ ಮನವಿ ಸಲ್ಲಿಸಿದ್ದರು.
ಪೆರೋಲ್ ನೀಡುವಂತೆ ಒತ್ತಾಯಿಸುವುದಿಲ್ಲ, ಆದರೆ ತಿಂಗಳಿಗೆ ಒಂದು ಬಾರಿ ಮಾನವೀಯತೆ ನೆಲೆಯಲ್ಲಿ ತಾಯಿ ಜೊತೆಗೆ ವರ್ಚ್ಯುವಲ್ ಮೂಲಕ ಮಾತನಾಡಲು ಅನುಮತಿ ನೀಡುವಂತೆ ಮನವಿ ಮಾಡಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ದಿಲ್ಲಿ ಕೋರ್ಟ್ ತಾಯಿ ಜೊತೆಗೆ ಮಾತುಕತೆಗೆ ಅನುಮತಿಸಿದ್ದು, ಹಿಂದಿಯಲ್ಲಿ ಮಾತ್ರ ಸಂವಹನ ನಡೆಸಬೇಕು ಎಂದು ಷರತ್ತು ವಿಧಿಸಿದೆ. ಜೊತೆಗೆ ಭದ್ರತೆ ದೃಷ್ಟಿಯಿಂದ ರೆಕಾರ್ಡ್ ಮಾಡಿಕೊಳ್ಳಲು ಸೂಚಿಸಿದೆ.
==
ಅಕ್ರಮ ಹಣ ವರ್ಗಾವಣೆ: ತಮಿಳ್ನಾಡು ಮಾಜಿ ಸಚಿವ ಸೆಂಥಿಲ್‌ಗೆ ಸುಪ್ರೀಂ ಬೇಲ್
ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿರುವ ತಮಿಳುನಾಡಿನ ಮಾಜಿ ಸಚಿವ ಸೆಂಥಿಲ್ ಬಾಲಾಜಿ ಅವರಿಗೆ ಗುರುವಾರ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ನ್ಯಾ। ಅಭಯ್ ಎಸ್ ಓಕಾ ಮತ್ತು ನ್ಯಾ।ಅಗಸ್ಟಿನ್ ಜಾರ್ಜ್ ಮಸಿಹ್ ಅವರಿದ್ದ ಪೀಠ, ಕಠಿಣ ಷರತ್ತುಗಳನ್ನು ವಿಧಿಸುವ ಮೂಲಕ ಜಾಮೀನು ಮಂಜೂರು ಮಾಡಿದೆ. 2023 ಜೂ. 14 ರಂದು ಬಾಲಾಜಿ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿತ್ತು. ನಂತರ ಆ.12 ರಂದು 3 ಸಾವಿರ ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿತ್ತು. ಆ.19 ರಂದು ಹೈಕೋರ್ಟ್ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು.
==
ಚುನಾವಣೆ ಬಳಿಕ ಪಿಒಕೆ ಜಮ್ಮು- ಕಾಶ್ಮೀರದ ಭಾಗ: ಸಿಎಂ ಯೋಗಿ ವಿಶ್ವಾಸ
ಜಮ್ಮು: ಜಮ್ಮು ಕಾಶ್ಮೀರದಲ್ಲಿ ನಡೆಯುತ್ತಿರುವ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಪಾಕ್ ಆಕ್ರಮಿತ ಪ್ರದೇಶ ಜಮ್ಮು ಕಾಶ್ಮೀರದ ಭಾಗವಾಗಲಿದೆ ಎಂದು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಜಮ್ಮು ಕಾಶ್ಮೀರದ ಆರ್ ಎಸ್ ಪುರದಲ್ಲಿ ಚುನಾವಣಾ ರ್‍ಯಾಲಿಯಲ್ಲಿ ಭಾಗಿಯಾದ ವೇಳೆ ಮಾತನಾಡಿದ ಯೋಗಿ, ‘ ಶಾಂತಿಯುತ ಚುನಾವಣೆ ಬಳಿಕ ಬಿಜೆಪಿ ಅಧಿಕಾರಕ್ಕೆ ಬರಲಿದ್ದು, ಅ ನಂತರ ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶವು ಜಮ್ಮು ಕಾಶ್ಮೀರದ ಭಾಗವಾಗಲಿದೆ. ಪಾಕಿಸ್ತಾನದಲ್ಲಿ ಜನರು ಪ್ರಜಾಪ್ರಭುತ್ವವನ್ನು ಉಳಿಸಲು ತೀವ್ರವಾಗಿ ಹೆಣಗಾಡುತ್ತಿದ್ದಾರೆ. ಪಾಕಿಸ್ತಾನಕ್ಕೆ ಇಂದು ತನ್ನ ದೇಶದ ಜನತೆಯನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಪಾಕ್ ಆಕ್ರಮಿತ ಪ್ರದೇಶದ ಜನರು ಪಾಕಿಸ್ತಾನದಿಂದ ಪ್ರತ್ಯೇಕವಾಗಲು ಧ್ವನಿ ಎತ್ತುತ್ತಿದ್ದಾರೆ’ ಎಂದರು.