ಸಾರಾಂಶ
ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳಲ್ಲೊಂದಾದ ಆಯುಷ್ಮಾನ್ ಭಾರತ್ ಯೋಜನೆ ಇದೇ ಮೊದಲ ಬಾರಿಗೆ ದೆಹಲಿಯಲ್ಲಿ ಜಾರಿಗೆ ಬರಲಿದ್ದು. ರಾಜ್ಯ ಸರ್ಕಾರ ಕೇಂದ್ರದ ಜೊತೆ ಈ ಸಂಬಂಧ ಒಪ್ಪಂದ ಮಾಡಿಕೊಂಡಿದೆ. ಈ ಹಿಂದೆ ಆಪ್ ಸರ್ಕಾರ ಆಯುಷ್ಮಾನ್ ಜಾರಿ ಮಾಡಿರಲಿಲ್ಲ,
ಈ ಯೋಜನೆಯಿಂದ ರಾಷ್ಟ್ರ ರಾಜಧಾನಿ ದೆಹಲಿಯ ಅರ್ಹ ಕುಟುಂಬಗಳ ಚಿಕಿತ್ಸೆಗಾಗಿ ಕೇಂದ್ರ ಸರ್ಕಾರ 5 ಲಕ್ಷ ರು. ಭರಿಸಲಿದೆ, ಇದರ ಜೊತೆಗೆ ಹೆಚ್ಚುವರಿಯಾಗಿ ರಾಜ್ಯ ಸರ್ಕಾರವು 5 ಲಕ್ಷ ರು. ಭರಿಸಲಿದೆ.ಆಯುಷ್ಮಾನ್ ಯೋಜನೆ ಜಾರಿಗೆ ತಂದ ದೇಶದ 35ನೇ ರಾಜ್ಯ/ ಕೇಂದ್ರಾಡಳಿತ ಪ್ರದೇಶ ದೆಹಲಿಯಾಗಿದ್ದು, ಪಶ್ಚಿಮ ಬಂಗಾಳದಲ್ಲಿ ಮಾತ್ರ ಈ ಯೋಜನೆ ಜಾರಿ ಬಾಕಿಯಿದೆ. ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಮತ್ತು ದೆಹಲಿ ಸಿಎಂ ರೇಖಾ ಮತ್ತು ಇತರರ ಸಮ್ಮುಖದಲ್ಲಿ ದೆಹಲಿ ಸರ್ಕಾರ ಮತ್ತು ರಾಷ್ಟ್ರಯ ಆರೋಗ್ಯ ಪ್ರಾಧಿಕಾರ ನಡುವೆ ಈ ಒಪ್ಪಂದಕ್ಕೆ ಸಹಿ ಹಾಕಲಾಯಿತು.ಈ ಹಿಂದೆ ದೆಹಲಿಯಲ್ಲಿ ಅಧಿಕಾರದಲ್ಲಿದ್ದ ಆಮ್ ಆದ್ಮಿ ಪಕ್ಷ ಆಯುಷ್ಮಾನ್ ಭಾರತ್ ಯೋಜನೆ ಜಾರಿಗೆ ವಿರೋಧ ವ್ಯಕ್ತಪಡಿಸಿತ್ತು. ಅಲ್ಲದೇ ಇದೊಂದು ದೇಶದ ದೊಡ್ಡ ಹಗರಣ ಎಂದು ಅರವಿಂದ್ ಕೇಜ್ರಿವಾಲ್ ಕರೆದಿದ್ದರು.
ಕಂತೆ ಹಣ: ನ್ಯಾ. ವರ್ಮಾ ಅಲಹಾಬಾದ್ ಹೈಕೋರ್ಟ್ ಜಡ್ಜ್ ಆಗಿ ಪ್ರಮಾಣ
ಪ್ರಯಾಗ್‌ರಾಜ್: ಮನೆಯಲ್ಲಿ ಕಂತೆ ಕಂತೆ ನೋಟುಗಳು ಸಿಕ್ಕ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್‌ನಿಂದ ಅಲಹಾಬಾದ್ ಹೈಕೋರ್ಟ್‌ಗೆ ವರ್ಗಾವಣೆಗೊಂಡ ನ್ಯಾ. ಯಶವಂತ ವರ್ಮಾ ಶನಿವಾರ ಅಲಹಾಬಾದ್ ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿ ಪ್ರಮಾಣವಚನ ಸ್ವೀಕರಿಸಿದರು.ವರ್ಮಾ ಅವರು ಅಧಿಕಾರ ವಹಿಸಿಕೊಂಡ ನಂತರ ಅವರಿಗೆ ಯಾವುದೇ ನ್ಯಾಯಾಂಗ ಕಾರ್ಯವನ್ನು ನಿಯೋಜಿಸಬೇಡಿ ಎಂದು ಸುಪ್ರೀಂ ಕೋರ್ಟ್ ಅಲಹಾಬಾದ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗೆ ತಿಳಿಸಿತ್ತು. ಆ ಪ್ರಕಾರ ಅವರಿಗೆ ಯಾವುದೇ ಕೆಲವ ವಹಿಸುವುದಿಲ್ಲ.
‘ನ್ಯಾ. ಯಶವಂತ್ ವರ್ಮಾ ಅವರು ಅಲಹಾಬಾದ್ ಹೈಕೋರ್ಟ್‌ನ ನ್ಯಾಯಾಧೀಶರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಅವರಿಗೆ ಯಾವುದೇ ನ್ಯಾಯಾಂಗ ಕೆಲಸವನ್ನು ನಿಯೋಜಿಸದಂತೆ ಅಲಹಾಬಾದ್ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರನ್ನು ತಿಳಿಸಲಾಗಿದೆ’ ಎಂದು ಸುಪ್ರೀಂ ಕೋರ್ಟ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿತ್ತು.