ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಪೌರತ್ವದ ಬಗ್ಗೆ ಸಲ್ಲಿಸಿರುವ ಅರ್ಜಿ : ಕೇಂದ್ರದ ನಿಲುವು ಕೇಳಿದ ದೆಹಲಿ ಹೈಕೋರ್ಟ್‌

| Published : Dec 07 2024, 12:34 AM IST / Updated: Dec 07 2024, 04:40 AM IST

ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಪೌರತ್ವದ ಬಗ್ಗೆ ಸಲ್ಲಿಸಿರುವ ಅರ್ಜಿ : ಕೇಂದ್ರದ ನಿಲುವು ಕೇಳಿದ ದೆಹಲಿ ಹೈಕೋರ್ಟ್‌
Share this Article
  • FB
  • TW
  • Linkdin
  • Email

ಸಾರಾಂಶ

ರಾಜಕಾರಣಿ ಸುಬ್ರಮಣಿಯನ್ ಸ್ವಾಮಿ ಅವರು ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿಯವರ ಪೌರತ್ವದ ಬಗ್ಗೆ ಸಲ್ಲಿಸಿರುವ ಅರ್ಜಿಗೆ ಸಂಬಂಧಪಟ್ಟಂತೆ ನಿಲುವು ತಿಳಿಸುವಂತೆ ಕೇಂದ್ರ ಗೃಹ ಇಲಾಖೆಗೆ ದೆಹಲಿ ಹೈಕೋರ್ಟ್‌ ಸೂಚಿಸಿದೆ.

ನವದೆಹಲಿ: ರಾಜಕಾರಣಿ ಸುಬ್ರಮಣಿಯನ್ ಸ್ವಾಮಿ ಅವರು ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿಯವರ ಪೌರತ್ವದ ಬಗ್ಗೆ ಸಲ್ಲಿಸಿರುವ ಅರ್ಜಿಗೆ ಸಂಬಂಧಪಟ್ಟಂತೆ ನಿಲುವು ತಿಳಿಸುವಂತೆ ಕೇಂದ್ರ ಗೃಹ ಇಲಾಖೆಗೆ ದೆಹಲಿ ಹೈಕೋರ್ಟ್‌ ಸೂಚಿಸಿದೆ.

2019ರ ಆ. 6ರಂದು ಸ್ವಾಮಿ ಸಲ್ಲಿಸಿದ್ದು, ರಾಹುಲ್ ಗಾಂಧಿ ಬ್ರಿಟಿಷ್‌ ಸರ್ಕಾರಕ್ಕೆ ಅವರ ಪೌರತ್ವದ ಕುರಿತು ಸ್ವಯಂಪ್ರೇರಿತವಾಗಿ ಬಹಿರಂಗಪಡಿಸಿದ್ದಾರೆ. ಅಲ್ಲದೇ ಅವರು ಬ್ರಿಟಿಷ್‌ ಪಾಸ್‌ಪೋರ್ಟ್‌ ಹೊಂದಿದ್ದಾರೆ. ಈ ಬಗ್ಗೆ ನಿರ್ಣಯ ಕೈಗೊಳ್ಳಲು ಗೃಹ ಸಚಿವಾಲಯಕ್ಕೆ ಸೂಚಿಸಬೇಕು ಎಂದು ದೂರಿದ್ದರು.ವಿಚಾರಣೆ ನಡೆಸಿದ ನ್ಯಾಯಪೀಠ, ಗೃಹ ಸಚಿವಾಲಯಕ್ಕೆ ನೋಟಿಸ್‌ ಜಾರಿ ಮಾಡಿದೆ.

ಬೈದಿದ್ದಕ್ಕೆ 12ನೇ ಕ್ಲಾಸ್‌ ಹುಡುಗನ ಗುಂಡಿನ ದಾಳಿ; ಪ್ರಾಂಶುಪಾಲ ಹತ್ಯೆ

ಛತರ್‌ಪುರ(ಮ.ಪ್ರ.): ಬೈದರು ಎಂಬ ಕ್ಷುಲ್ಲಕ ಕಾರಣಕ್ಕೆ 12ನೇ ತರಗತಿಯ ವಿದ್ಯಾರ್ಥಿಯೊಬ್ಬ ಶಾಲೆಯ ಪ್ರಾಂಶುಪಾಲರನ್ನು ಗುಂಡು ಹಾರಿಸಿ ಕೊಂದು, ಅವರದ್ದೇ ಸ್ಕೂಟರ್‌ನಲ್ಲಿ ಪರಾರಿಯಾದ ಘಟನೆ ಛತರ್‌ಪುರದ ಧಮೋರಾ ಸರ್ಕಾರಿ ಶಾಲೆಯಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದೆ.‘ಪ್ರಾಂಶುಪಾಲ ಎಸ್‌.ಕೆ. ಸಕ್ಸೇನಾ ಶಾಲೆಯ ಶೌಚಾಲಯದ ಬಳಿ ಇದ್ದಾಗ ಅವರ ತಲೆಗೆ ಗುಂಡು ಹಾರಿಸಲಾಗಿದೆ. ಅದಾದ ಕೂಡಲೇ ಆರೋಪಿ ವಿದ್ಯಾರ್ಥಿ ಅದೇ ಶಾಲೆಯ ವಿದ್ಯಾರ್ಥಿ ಎನ್ನಲಾಗಿರುವ ತನ್ನ ಸಹಚರನೊಂದಿಗೆ ಮೃತ ಪ್ರಾಂಶುಪಾಲರ ಸ್ಕೂಟರ್‌ನಲ್ಲೇ ಪರಾರಿಯಾಗಿದ್ದಾನೆ’ ಎಂದು ಪೊಲೀಸ್ ವರಿಷ್ಠಾಧಿಕಾರಿ ಆಗಮ್‌ ಜೈನ್‌ ತಿಳಿಸಿದ್ದಾರೆ.

55 ವರ್ಷದ ಸಕ್ಸೇನಾ ಕಳೆದ 5 ವರ್ಷದಿಂದ ಆ ಶಾಲೆಯ ಪ್ರಾಂಶುಪಾಲರಾಗಿದ್ದರು.

ಶಬರಿಮಲೆಯಲ್ಲಿ ನಟ ದಿಲೀಪ್‌ಗೆ ವಿಐಪಿ ದರ್ಶನ: ಕೇರಳ ಹೈ ಕಿಡಿ

ಕೊಚ್ಚಿ: ಮಕರವಿಳಕ್ಕು ಪ್ರಯುಕ್ತ ತೆರೆಯಲಾಗಿರುವ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಮಲಯಾಳಂ ನಟ ದಿಲೀಪ್‌ ಅವರಿಗೆ ಡಿ.5ರಂದು ವಿಐಪಿ ದರ್ಶನಕ್ಕೆ ಅವಕಾಶ ಮಾಡಿಕೊಟ್ಟು ಅನ್ಯರ ದರ್ಶನಕ್ಕೆ ತೊಂದರೆ ಉಂಟುಮಾಡಿದ ಬಗ್ಗೆ ಕೇರಳ ಹೈಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿದೆ.ಈ ಕುರಿತು ಪೊಲೀಸರು ಹಾಗೂ ದೇವಸ್ಥಾನ ಆಡಳಿತ ಮಂಡಳಿ ಟಿಡಿಬಿಯನ್ನು ತರಾಟೆಗೆ ತೆಗೆದುಕೊಂಡ ನ್ಯಾ। ಅನಿಲ್‌ ನರೇಂದ್ರನ್‌ ಹಾಗೂ ಮುರಳೀ ಕೃಷ್ಣ ಅವರ ಪೀಠ, ‘ಯಾವ ಆಧಾರದ ಮೇಲೆ ನಟನಿಗೆ ವಿಶೇಷ ಸೌಲಭ್ಯ ಕಲ್ಪಿಸಲಾಯಿತು? ಇದರಿಂದ ಗಂಟೆಗಟ್ಟಲೆ ದರ್ಶನಕ್ಕಾಗಿ ನಿಂತ ಮಕ್ಕಳು, ವೃದ್ಧರು ಸೇರಿದಂತೆ ಅನ್ಯ ಭಕ್ತರಿಗೆ ತೊಡಕಾಗುವುದಿಲ್ಲವೇ? ದರ್ಶನವಿಲ್ಲದೆ ಮರಳಿದವರು ಯಾರಲ್ಲಿ ದೂರಬೇಕು?’ ಎಂದು ಪ್ರಶ್ನಿಸಿದೆ. ಅಂತೆಯೇ, ಇದರ ಸಿಸಿಟಿವಿ ದೃಶ್ಯಗಳನ್ನು ಸಲ್ಲಿಸುವಂತೆ ಸೂಚಿಸಿದೆ.

ಅಯ್ಯಪ್ಪಸ್ವಾಮಿಗೆ ಜೋಗುಳ ಹಾಡಿ ದೇವಸ್ಥಾನ ಮುಚ್ಚುವ ವರೆಗೂ ದಿಲೀಪ್‌ ಮುಂದಿನ ಸಾಲಲ್ಲಿ ನಿಂತಿದ್ದುದನ್ನು ಗಮನಿಸಿದ ಪೀಠ, ಸಾಂವಿಧಾನಿಕ ಹುದ್ದೆಗಳಲ್ಲಿರುವವರಿಗೆ ಮಾತ್ರ ಈ ಸೌಲಭ್ಯ ಪಡೆಯುವ ಅವಕಾಶವಿದೆ ಎಂದು ಹೇಳಿದೆ. ಜೊತೆಗೆ, ಈ ಪ್ರಕರಣದಲ್ಲಿ ನಟನನ್ನೂ ಆರೋಪಿಯಾಗಿ ಪರಿಗಣಿಸುವುದಾಗಿ ತಿಳಿಸಿದೆ.

ಮತ್ತೊಬ್ಬ ಹಮಾಸ್‌ ಕಮಾಂಡರ್‌ ಹತ್ಯೆ

ಜೆರುಸಲೇಂ: ಅ.7ರಂದು ಇಸ್ರೇಲ್‌ ಮೇಲೆ ಹಮಾಸ್‌ ನಡೆಸಿದ ದಾಳಿಯ ಮೇಲ್ವಿಚಾರಕನಾಗಿದ್ದ ಕಮಾಂಡರ್‌ನನ್ನು ಹೊಡೆದುರುಳಿಸಿರುವುದಾಗಿ ಇಸ್ರೇಲ್‌ ಸೇನೆ ಹೇಳಿದೆ.ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಇಸ್ರೇಲ್‌ನ ರಕ್ಷಣಾ ಪಡೆಗಳು, ‘ಸೇನಾ ನೆಲೆಗಳನ್ನು ಗುರಿಯಾಗಿಸಿ ನಡೆಸಲಾಗುತ್ತಿರುವ ವಾಯು ದಾಳಿಯಲ್ಲಿ ಹಮಾಸ್‌ ಕಮಾಂಡರ್‌ ಆಗಿದ್ದ ಮಜ್ದಿ ಅಖಿಲನ್ ಎಂಬುವನನ್ನು ಹತ್ಯೆಗೈದಿದ್ದೇವೆ. ಈತ ಸುರಂಗ ನಿರ್ಮಾಣ ಹಾಗೂ ಭೂಗತ ಕಾರ್ಯಾಚರಣೆಗಳಿಗೆ ತರಬೇತಿ ನೀಡುತ್ತಿದ್ದ’ ಎಂದು ಮಾಹಿತಿ ನೀಡಿದೆ.

ಆದರೆ ಹತ್ಯೆ ನಡೆದದ್ದು ಎಂದು ಎಂಬ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಈವರೆಗೆ ಇಸ್ರೇಲ್‌ ಸೇನೆ ಹಮಾಸ್‌ನ ಹಲವು ಪ್ರಮುಖ ನಾಯಕರನ್ನು ಹತ್ಯೆಗೈದಿದೆ.