- 18 ವಿದೇಶಿಗರೂ ಸೇರಿ 21 ಜನರ ಸಜೀವ ದಹನ । 40 ಮಂದಿ ರಕ್ಷಣೆ
- ಸಾವಿನ ಸಂಖ್ಯೆ ಹೆಚ್ಚಳ ಆತಂಕ । ಎಲ್ಪಿಜಿ ಸ್ಫೋಟದಿಂದ ಘಟನೆ ಶಂಕೆ- ಮೋದಿ ಸಂತಾಪ । ಮೃತರ ಕುಟುಂಬಸ್ಥರಿಗೆ ₹2 ಲಕ್ಷ ನೆರವು
--ಎಲ್ಲಿ?ದೆಹಲಿ ಮಾಳವೀಯ ನಗರದ ಫ್ಲರಿಶ್ ಸ್ಟೇ ಲಾಡ್ಜ್ ಕಂ ರೆಸ್ಟೋರೆಂಟ್‌ನಲ್ಲಿ
ಯಾವಾಗ?
ಬೆಳಗ್ಗೆ 8.30ಕ್ಕೆ
ಏನಾಯ್ತು?ಬೆಳಗ್ಗೆ ಏಕಾಏಕಿ ಹೋಟೆಲ್‌ನಲ್ಲಿ ಸ್ಫೋಟ, ಇಡೀ ಕಟ್ಟಡ ಬೆಂಕಿಗೆ ಆಹುತಿ. ಸಿಲಿಂಡರ್ ಸ್ಫೋಟ ಶಂಕೆ
--ಪಿಟಿಐ ನವದೆಹಲಿ
ದಕ್ಷಿಣ ದೆಹಲಿಯ ಮಾಳವೀಯ ನಗರದಲ್ಲಿರುವ ‘ಫ್ಲರಿಶ್ ಸ್ಟೇ ಲಾಡ್ಜ್ ಕಂ ರೆಸ್ಟೋರೆಂಟ್’ನಲ್ಲಿ ಶಂಕಿತ ಎಲ್ಪಿಜಿ ಸ್ಫೋಟದ ಕಾರಣ ಭಾರೀ ಬೆಂಕಿ ಅವಘಡ ಸಂಭವಿಸಿದೆ. ದುರ್ಘಟನೆಯಲ್ಲಿ 18 ವಿದೇಶಿ ಪ್ರಜೆಗಳು ಸೇರಿ 21 ಮಂದಿ ಸಾವನ್ನಪ್ಪಿದ್ದಾರೆ.5 ಅಂತಸ್ತಿನ ಕಟ್ಟಡದಲ್ಲಿ ನೆಲ ಮಾಳಿಗೆ ರೆಸ್ಟೋರೆಂಟ್ ಆಗಿತ್ತು. ಉಳಿದ ಅಂತಸ್ತುಗಳನ್ನು ಲಾಡ್ಜ್ ಆಗಿ ಬಳಸಲಾಗುತ್ತಿತ್ತು. ಬೆಳಿಗ್ಗೆ 8.30ರ ಸುಮಾರಿಗೆ ಹೋಟೆಲ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಆ ಬಳಿಕ ನೋಡ ನೋಡುತ್ತಿದ್ದಂತೆ ಬೆಂಕಿಯ ಕೆನ್ನಾಲಿಗೆ ಇಡೀ ಕಟ್ಟಡವನ್ನೇ ಆವರಿಸಿದೆ. ದಾರಿಯಲ್ಲಿ ಹೋಗುತ್ತಿದ್ದ ಸಾರ್ವಜನಿಕರು ಹೋಟೆಲ್‌ನಿಂದ ಹೊಗೆ ಹೋಗುತ್ತಿರುವುದನ್ನು ಗಮನಿಸಿದಾಗ ಘಟನೆ ಬೆಳಕಿಗೆ ಬಂದಿದೆ.ವಿಷಯ ತಿಳಿದ ಪೊಲೀಸರು, ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಸ್ಥಳೀಯರು ರಕ್ಷಣಾ ಕಾರ್ಯಾಚರಣೆ ನಡೆಸಿ 40ಕ್ಕೂ ಹೆಚ್ಚು ಮಂದಿಯನ್ನು ರಕ್ಷಿಸಿದ್ದಾರೆ. ಆದರೆ ದುರಾದೃಷ್ಟವಾತ್ ವಿದೇಶಿಗರು ಸೇರಿದಂತೆ 21 ಮಂದಿ ಸಾವನ್ನಪ್ಪಿದ್ದಾರೆ. ಮಧ್ಯ ಏಷ್ಯಾ ಮತ್ತು ಆಫ್ರಿಕನ್ ದೇಶದ ಪ್ರಜೆಗಳಿದ್ದರು ಎಂದು ತಿಳಿದು ಬಂದಿದೆ. ಕೆಲವರು ಕಟ್ಟಡದಿಂದ ಜಿಗಿದು ಪ್ರಾಣ ಉಳಿಸಿಕೊಂಡಿದ್ದರೆ, ಇನ್ನು ಕೆಲವರನ್ನು ಕಿಟಕಿ ಗಾಜು ಒಡೆದು ಸ್ಥಳೀಯರು ರಕ್ಷಿಸಿದ್ದಾರೆ.ಗಾಯಗೊಂಡ ಕೆಲವರ ಸ್ಥಿತಿ ಗಂಭೀರವಾಗಿದೆ. ಹೀಗಾಗಿ ಸಾವಿನ ಸಂಖ್ಯೆ ಹೆಚ್ಚಾಗುವ ಆತಂಕ ಸೃಷ್ಟಿಯಾಗಿದೆ.
ಬೆಂಕಿ ಹೊತ್ತಿಕೊಳ್ಳಲು ನಿಖರ ಕಾರಣವೇನೆಂದು ತಿಳಿದು ಬಂದಿಲ್ಲ. ಆದರೆ ಸಿಲಿಂಡರ್ ಸ್ಫೋಟ ಕಾರಣವಿರಬಹುದು ಎಂದು ಶಂಕಿಸಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಕಟ್ಟಡದಲ್ಲಿ ಅನೇಕ ಅಕ್ರಮ ನಿರ್ಮಾಣಗಳು ನಡೆದಿದ್ದು, ಪೊಲೀಸರು ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆದರೆ ಮಾಲೀಕ ನಾಪತ್ತೆ ಆಗಿದ್ದು, ಆತನಿಗೆ ಲುಕೌಟ್ ನೋಟಿಸ್ ಹೊರಿಡಿಸಲಾಗಿದೆ.ಮೋದಿ ಸಂತಾಪ:
ಅವಘಢಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ. ಮೃತರ ಕುಟುಂಬಕ್ಕೆ ಮೋದಿ 2 ಲಕ್ಷ ರು. ಪರಿಹಾರ ಘೋಷಿಸಿದ್ದು, ಗಾಯಾಳುಗಳಿಗೆ 50,000 ರು. ನೆರವು ನೀಡುವುದಾಗಿ ಹೇಳಿದ್ದಾರೆ.ಮಗುವಿನೊಂದಿಗೆ 3ನೇ ಮಹಡಿಯಿಂದ
ಜಿಗಿದು ಜೀವ ಉಳಿಸಿಕೊಂಡ ತಾಯಿ!
- ಹಾಸಿಗೆ ಹರಡಿ ತಾಯಿ-ಮಗು ರಕ್ಷಿಸಿದ ಸ್ಥಳೀಯರು- ಕಿಟಕಿ ಗಾಜು ಒಡೆದು ಹೋಟೆಲ್‌ನಲ್ಲಿದ್ದವರ ರಕ್ಷಣೆಪಿಟಿಐ ನವದೆಹಲಿದಕ್ಷಿಣ ದೆಹಲಿಯ ಮಾಳವೀಯ ನಗರದ ಬೆಡ್-ಅಂಡ್ ಬ್ರೇಕ್‌ಫಾಸ್ಟ್ ರೆಸ್ಟೋರೆಂಟ್‌ನಲ್ಲಿ ಬೆಳ್ಳಂಬೆಳಿಗ್ಗೆ ಬೆಂಕಿ ಹತ್ತಿಕೊಂಡಿದ್ದರಿಂದ ಹೋಟೆಲ್‌ನಲ್ಲಿದ್ದ ಗ್ರಾಹಕರೆಲ್ಲರೂ ಆತಂಕಕ್ಕೆ ಒಳಗಾಗಿದ್ದರು. ಹೀಗಿರುವಾಗಲೇ ತಾಯಿಯೊಬ್ಬರು ಮೂರನೇ ಮಹಡಿಯಿಂದ ಮಗು ಹೊತ್ತುಕೊಂಡು ಜಿಗಿದು ಜೀವ ಉಳಿಸಿಕೊಂಡಿದ್ದಾರೆ.
ಘಟನೆ ಬಗ್ಗೆ ಸ್ಥಳೀಯರೊಬ್ಬರು ಮಾಧ್ಯಮಗಳಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ‘ಮಹಿಳೆ ತಮ್ಮ ಮಗುವನ್ನು ಹಿಡಿದು ಪ್ರಾಣ ಉಳಿಸಿಕೊಳ್ಳಲು ಮೂರನೇ ಮಹಡಿಯಿಂದ ಜಿಗಿದರು. ಆಗ ಹಾಸಿಗೆ ಅಂಗಡಿ ಮಾಲೀಕರು ಹಾಗೂ ಸ್ಥಳೀಯರು ನೆಲದ ಮೇಲೆ ಹಾಸಿಗೆಗಳನ್ನು ಹರಡಿ ಆಕೆಯನ್ನು ರಕ್ಷಿಸಿದ್ದಾರೆ. ಇಬ್ಬರೂ ಪಾರಾಗಿದ್ದಾರೆ. ಆದರೆ ತಾಯಿಗೆ ಸಣ್ಣಪುಟ್ಟ ಗಾಯಗಳಾಗಿವೆ’ ಎಂದಿದ್ದಾರೆಮತ್ತೊಬ್ಬ ಮಹಿಳೆ ಕೂಡ ಇದೇ ರೀತಿ ತಮ್ಮ ಜೀವ ಉಳಿಸಿಕೊಳ್ಳಲು ಕಟ್ಟಡದಿಂದ ಜಿಗಿದಿದ್ದಾರೆ ಎಂದು ವರದಿಯಾಗಿದೆ. ಆದರೆ ಅವರ ಸದ್ಯದ ಸ್ಥಿತಿ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ.ಗಾಜು ಒಡೆದು ರಕ್ಷಿಸಿದ ಸ್ಥಳೀಯರು:ಕಟ್ಟಡದಲ್ಲಿ ದಟ್ಟ ಹೊಗೆ ಕಾಣಿಸಿಕೊಳ್ಳುತ್ತಿದ್ದಂತೆ ಹೋಟೆಲ್‌ನಲ್ಲಿದ್ದವರು ರಕ್ಷಣೆಗಾಗಿ ಕೂಗಿಕೊಂಡರು. ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕಾಗಮಿಸುವಷ್ಟರಲ್ಲಿ ಸ್ಥಳೀಯರು ನೆರವಿಗೆ ಧಾವಿಸಿದ್ದಾರೆ. ಒಂದೆಡೆ ನೆಲದ ಮೇಲೆ ಹಾಸಿಗೆ, ಕಂಬಳಿಗಳನ್ನು ಹಾಸಿ ಹೊರ ಬರಲು ಪ್ರಯತ್ನಿಸುತ್ತಿದ್ದವರಿಗೆ ನೆರವಾಗಿದ್ದರೆ, ಮತ್ತೊಂದೆಡೆ ಕಿಟಕಿ ಗಾಜುಗಳನ್ನು ಒಡೆದು ರಕ್ಷಿಸಿದ್ದಾರೆ. ಇನ್ನು ಸ್ಥಳೀಯರು ರಕ್ಷಣೆ ಮಾಡುತ್ತಿರುವ ವಿಡಿಯೋಗಳು ಸೆರೆಯಾಗಿದ್ದು, ಘಟನೆಯ ಭೀಕರತೆ ಸಾಕ್ಷೀಕರಿಸುವಂತಿದೆ.6 ರೂಂಗೆ ಅನುಮತಿ ಪಡೆದು 25 ರೂಂ ನಿರ್ಮಾಣ!- ಒಂದೇ ಎಂಟ್ರಿ - ಎಕ್ಸಿಟ್- ಇದರಿಂದ ಹೆಚ್ಚಿದ ಸಾವು-ನೋವು
ನವದೆಹಲಿ: ಮಾಳವೀಯ ನಗರದಲ್ಲಿ ಬೆಂಕಿ ದುರಂತಕ್ಕೀಡಾದ ಬೆಡ್-ಅಂಡ್ ಬ್ರೇಕ್‌ಫಾಸ್ಟ್ ರೆಸ್ಟೋರೆಂಟ್‌ನಲ್ಲಿ 6 ಕೊಠಡಿಗಳನ್ನು ನಿರ್ಮಿಸಲು ಮಾತ್ರ ದೆಹಲಿ ಸರ್ಕಾರ ಪರವಾನಗಿ ನೀಡಿತ್ತು. ಆದರೆ ಹೋಟೆಲ್‌ನವರು ಆ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ 25 ರೂಂಗಳನ್ನು ನಿರ್ಮಿಸಿದ್ದರು ಎನ್ನುವ ವಿಚಾರ ಬೆಳಕಿಗೆ ಬಂದಿದೆ,ಇದರ ಜತೆಗೆ ಪೊಲೀಸರ ಮಾಹಿತಿ ಪ್ರಕಾರ, 5 ಅಂತಸ್ತಿನ ಕಟ್ಟಡದಲ್ಲಿ ಪ್ರವೇಶ ದ್ವಾರ ಮತ್ತು ನಿರ್ಗಮನ ದ್ವಾರ ಬೇರೆ ಬೇರೆ ಆಗಿರದೇ ಒಂದೇ ಆಗಿತ್ತು. ಇಂಥ ಉಲ್ಲಂಘನೆಯೂ ಹೆಚ್ಚಿನ ಸಂಖ್ಯೆಯ ಜೀವಹಾನಿಗೆ ಕಾರಣವಿರಬಹುದು ಎಂದು ಶಂಕಿಸಲಾಗಿದೆ.ಕಟ್ಟಡವು ಹೊಟೇಲ್ ಪ್ರಾರಂಭಕ್ಕೂ ಮುನ್ನ ಖಾದಿ ಭಂಡಾರವಾಗಿತ್ತು. ಲಾಡ್ಜ್ ನಿರ್ಮಾಣವಾದ ಬಳಿಕ ಹತ್ತಿರದ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳ ಸಂಬಂಧಿಕರು ಇಲ್ಲಿ ಉಳಿದುಕೊಳ್ಳುತ್ತಿದ್ದರು ಎಂದು ಸ್ಥಳೀಯರು ಹೇಳಿದ್ದಾರೆ.