ದಿಲ್ಲಿಯ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಆಪ್ ನಾಯಕಿ ಆತಿಶಿ ಸೆ. 21 ರಂದು ಪ್ರಮಾಣವಚನ

| Published : Sep 19 2024, 01:52 AM IST / Updated: Sep 19 2024, 05:01 AM IST

Atishi

ಸಾರಾಂಶ

ದಿಲ್ಲಿಯ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಆಪ್ ನಾಯಕಿ ಆತಿಶಿ ಅವರು ಸೆಪ್ಟೆಂಬರ್ 21 ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ.  

ನವದೆಹಲಿ: ದಿಲ್ಲಿಯ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಆಪ್ ನಾಯಕಿ ಆತಿಶಿ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ಸೆ. 21 ರಂದು ನಡೆಯಲಿದೆ. ದೆಹಲಿಯ ಲೆಫ್ಟಿನೆಂಟ್‌ ಗವರ್ನರ್‌ ವಿಕೆ ಸಕ್ಸೇನಾ ರಾಷ್ಟ್ರಪತಿ ದ್ರೌಪದಿ ಮುರ್ಮ ಜೊತೆ ಮಾತುಕತೆ ನಡೆಸಿ ಪ್ರಮಾಣ ವಚನ ಕಾರ್ಯಕ್ರಮಕ್ಕೆ ದಿನಾಂಕ ನಿಗದಿ ಮಾಡಿದ್ದಾರೆ. 

ದೆಹಲಿ ಮದ್ಯ ಹಗರಣದಲ್ಲಿ ಜೈಲು ಪಾಲಾಗಿ ಇತ್ತೀಚೆಗೆ ಜಾಮೀನು ಪಡೆದು ಹೊರಬಂದಿದ್ದ ಅರವಿಂದ್ ಕೇಜ್ರಿವಾಲ್‌ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ಆತಿಶಿ ಅವರನ್ನು ನೂತನ ಸಿಎಂ ಆಗಿ ಆಯ್ಕೆ ಮಾಡಲಾಗಿತ್ತು.

==

15 ದಿನದಲ್ಲಿ ಕೇಜ್ರಿ ಮತ್ತೆ ಆಮ್‌ಆದ್ಮಿ

ನವದೆಹಲಿ: ದೆಹಲಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಆಪ್ ನಾಯಕ ಅರವಿಂದ್‌ ಕೇಜ್ರಿವಾಲ್ ಮುಂದಿನ 15 ದಿನದೊಳಗೆ ಮುಖ್ಯಮಂತ್ರಿಯಾಗಿದ್ದಾಗ ನೀಡಿರುವ ಸರ್ಕಾರಿ ಸೌಲಭ್ಯ, ಭದ್ರತೆ ಜೊತೆಗೆ ಸಿಎಂ ಬಂಗಲೆಯನ್ನು ತೊರೆಯಲಿದ್ದಾರೆ ಎಂದು ಆಪ್ ತಿಳಿಸಿದೆ. ರಾಜೀನಾಮೆ ನೀಡಿದ ಬಳಿಕ ಕೇಜ್ರಿವಾಲ್ ಸದ್ಯ ವಾಸವಿರುವ ಸಿಎಂ ನಿವಾಸವನ್ನು ಖಾಲಿ ಮಾಡುವ ಬಗ್ಗೆ ಯೋಚಿಸಿದ್ದು, ಎರಡು ವಾರದೊಳಗೆ ದಿಲ್ಲಿಯ ಫ್ಲಾಗ್‌ಸ್ಟಾಪ್ 6 ರಸ್ತೆಯಲ್ಲಿರುವ ಬಂಗಲೆಯನ್ನು ತೊರೆಯಲಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ಮೂಲಗಳು ತಿಳಿಸಿವೆ. 

ಈ ಕುರಿತು ಆಪ್‌, ‘ಎಕ್ಸ್‌’ನಲ್ಲಿ ಟ್ವೀಟ್‌ ಮಾಡಿದ್ದು, ‘ ಪ್ರಾಮಾಣಿಕತೆ ಮತ್ತು ತ್ಯಾಗಕ್ಕೆ ಅರವಿಂದ್‌ ಕೇಜ್ರಿವಾಲ್ ಒಂದು ಉತ್ತಮ ಉದಾಹರಣೆ. ಕೇಜ್ರಿವಾಲ್ ಸಿಎಂ ನಿವಾಸ ಮತ್ತು ಸರ್ಕಾರಿ ಭದ್ರತೆಯನ್ನು ಕೂಡ ತೊರೆಯಲಿದ್ದಾರೆ’ ಎಂದಿದೆ.