ಆಪ್‍ ವಿರುದ್ಧ ಎನ್ಐಎ ತನಿಖೆ : ದಿಲ್ಲಿ ಎಲ್‌ಜಿ ಶಿಫಾರಸು

| Published : May 07 2024, 01:01 AM IST / Updated: May 07 2024, 07:49 AM IST

Aravind Kejriwal
ಆಪ್‍ ವಿರುದ್ಧ ಎನ್ಐಎ ತನಿಖೆ : ದಿಲ್ಲಿ ಎಲ್‌ಜಿ ಶಿಫಾರಸು
Share this Article
  • FB
  • TW
  • Linkdin
  • Email

ಸಾರಾಂಶ

ಮದ್ಯ ಲೈಸೆನ್ಸ್‌ ಹಗರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧಿತರಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ಗೆ ಮತ್ತೊಂದು ಸಂಕಷ್ಟ ಎದುರಾಗಿದೆ.

ನವದೆಹಲಿ: ಮದ್ಯ ಲೈಸೆನ್ಸ್‌ ಹಗರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧಿತರಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ನಿಷೇಧಿತ ಖಲಿಸ್ತಾನಿ ಸಂಘಟನೆಯಿಂದ ಆಪ್‌ಗೆ ದೇಣಿಗೆ ಸಂಗ್ರಹಿಸಿದ ಕುರಿತು ಎನ್‌ಐಎ ತನಿಖೆ ನಡೆಸಬೇಕು ಎಂದು ಉಪರಾಜ್ಯಪಾಲ ವಿ.ಕೆ. ಸಕ್ಸೇನಾ ಕೇಂದ್ರ ಕೇಂದ್ರೀಯ ಗೃಹ ಸಚಿವಾಲಯಕ್ಕೆ ಶಿಫಾರಸು ಮಾಡಿದ್ದಾರೆ.

ಇದರ ಬೆನ್ನಲ್ಲೇ ಆಪ್‌ ಕಿಡಿಕಾರಿದ್ದು, ‘ದಿಲ್ಲಿಯ 7 ಸ್ಥಾನದಲ್ಲೂ ಸೋಲು ಖಚಿತ ಎಂದು ಬಿಜೆಪಿಗೆ ಮನವರಿಕೆ ಆಗಿದೆ. ಅದರ ಅಣತಿಯ ಮೇರೆಗೆರ ಉಪರಾಜ್ಯಪಾಲರು ಈ ಶಿಫಾರಸು ಮಾಡಿದ್ದಾರೆ’ ಎಂದು ಕಿಡಿಕಾರಿದೆ.

ಆಪ್‌ಗೆ ನಿಷೇಧಿತ ಖಲಿಸ್ತಾನಿ ಸಂಘಟನೆ ‘ಸಿಖ್ಸ್‌ ಫಾರ್‌ ಜಸ್ಟೀಸ್‌ ನಂಟಿದೆ. ಈ ಕುರಿತು ಕ್ರಮ ಕೈಗೊಳ್ಳಿ’ ಎಂದು ಮಾಜಿ ಆಪ್‌ ಕಾರ್ಯಕರ್ತ ಮನೀಶ್‌ ಕುಮಾರ್‌ ರೈಜಾ಼ದ ಅವರು, ವಿಶ್ವ ಹಿಂದೂ ಸಂಘಟನೆಯ ಕಾರ್ಯದರ್ಶಿ ಆಶೂ ಮೋಂಗಿಯಾ ಜೊತೆಗೂಡಿ ಸಕ್ಸೇನಾಗೆ ದೂರಿದ್ದರು.

‘ಸಿಖ್‌ ಫಾರ್‌ ಜಸ್ಟಿಸ್‌ ದೇಶದ್ರೋಹಿ ಸಂಘಟನೆಯಾಗಿದ್ದು, ಭಾರತದಲ್ಲಿ ಹಲವು ವಿಧ್ವಂಸಕ ಚಟುವಟಿಕೆಗಳನ್ನು ನಡೆಸುತ್ತಿರುವ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಆ ಸಂಘಟನೆಯನ್ನು ನಿಷೇಧ ಮಾಡಿದೆ. ಆದಾಗ್ಯೂ ಆ ಸಂಘಟನೆಯಿಂದ 132 ಕೋಟಿ ರು.ಗೂ ಅಧಿಕ ದೇಣಿಗೆಯನ್ನು ಆಪ್‌ ಸ್ವೀಕರಿಸಿತ್ತು. ಇದಕ್ಕೆ ಪ್ರತಿಯಾಗಿ ಸಂಘಟನೆಯ ಉಗ್ರ ದೇವೇಂದ್ರ ಪಾಲ್‌ ಭಲ್ಲಾರ್‌ನನ್ನು ಜೈಲಿನಿಂದ ಬಿಡುಗಡೆ ಮಾಡಲು ಶಿಫಾರಸು ಮಾಡಿತ್ತು’ ಎಂದು ದೂರಿದ್ದರು. ಇದಕ್ಕೆ ಓಗೊಟ್ಟು ಸಕ್ಸೇನಾ ಈಗ ಎನ್ಐಎ ತನಿಖೆಗೆ ಶಿಫಾರಸು ಮಾಡಿದ್ದಾರೆ. 

ಯಾವುದು ಸಿಖ್‌ ಫಾರ್‌ ಜಸ್ಟಿಸ್‌ ಸಂಘಟನೆ?:

ಸಿಖ್‌ ಫಾರ್‌ ಜಸ್ಟಿಸ್ ಸಂಘಟನೆಯು ಪಂಜಾಬನ್ನು ಪ್ರತ್ಯೇಕಿಸಿ ಪ್ರತ್ಯೇಕ ಖಲಿಸ್ತಾನಿ ರಾಷ್ಟ್ರ ಸ್ಥಾಪನೆಯ ಉದ್ದೇಶ ಹೊಂದಿದೆ. ಇದರ ಸ್ಥಾಪಕ ಗುರುಪತ್ವಂತ್ ಸಿಂಗ್‌ ಪನ್ನೂನ್‌ ಕೆನಡಾದಿಂದ ಭಾರತದ ಮೇಲೆ ಸದಾ ಬೆದರಿಕೆ ಒಡ್ಡುತ್ತಿರುತ್ತಾನೆ. ಹಲವು ಮಹತ್ವದ ಸನ್ನಿವೇಶಗಳಲ್ಲಿ ಬಾಂಬ್‌ ದಾಳಿ, ವಾಯುದಾಳಿ ನಡೆಸುವ ಬೆದರಿಕೆ ಸಂದೇಶ ಹಾಕುತ್ತಿರುತ್ತಾನೆ. ವಿಶ್ವಕಪ್‌ ವೇಳೆ ವಿಮಾನದಲ್ಲಿ ಬಾಂಬ್‌ ಸ್ಫೋಟಿಸುವುದೂ ಸೇರಿದಂತೆ ಅಯೋಧ್ಯಾ ರಾಮಮಮಂದಿರ ಪ್ರಾಣಪ್ರತಿಷ್ಠಾಪನೆ ವೇಳೆ ಬಾಂಬ್‌ ದಾಳಿ ನಡೆಸುವ ಕುರಿತು ಸಂದೇಶ ನೀಡಿದ್ದ.

ಇಂದು ಅರವಿಂದ್ ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು ?

ನವದೆಹಲಿ: ಅಬಕಾರಿ ಹಗರಣದಲ್ಲಿ ಬಂಧನಕ್ಕೊಳಗಾಗಿ ತಿಹಾರ ಜೈಲಿನಲ್ಲಿರುವ ಅರವಿಂದ್ ಕೇಜ್ರಿವಾಲ್ ತಮ್ಮ ಬಂಧನ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಜಾಮೀನು ಅರ್ಜಿ ತೀರ್ಪು ಮಂಗಳವಾರ ಪ್ರಕಟಗೊಳ್ಳಲಿದೆ. ಮೇ 3ರಂದು ಆಪ್ ಮುಖ್ಯಸ್ಥ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ‘ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಅರವಿಂದ್ ಕೇಜ್ರಿವಾಲ್ ಅವರಿಗೆ ಜಾಮೀನು ನೀಡುವುದರ ಬಗ್ಗೆ ಪರಿಗಣಿಸಬಹುದು. ಆದರೆ ಅಂತಿಮವಾಗಿ ತಾನೂ ಏನನ್ನೂ ಹೇಳಿಲ್ಲ. ವಿಚಾರಣೆ ಶೀಘ್ರವೇ ಮುಕ್ತಾಯಗೊಳ್ಳುವ ಸಾಧ್ಯತೆಯಿಲ್ಲದಿದ್ದರೆ ಮಧ್ಯಂತರ ಜಾಮೀನನ್ನು ಪರಿಗಣಿಸಬಹುದು’ ಎಂದು ಹೇಳಿ ತನ್ನ ತೀರ್ಪನ್ನು ಮಂಗಳವಾರಕ್ಕೆ ಮುಂದೂಡಿಕೆ ಮಾಡಿತ್ತು. ಇಂದು ಆ ತೀರ್ಪು ಪ್ರಕಟವಾಗಲಿದೆ. ಮಾ.21 ರಿಂದ ಬಂಧನದಲ್ಲಿರುವ ಅರವಿಂದ್ ಕೇಜ್ರಿವಾಲ್‌ಗೆ ಜಾಮೀನು ಸಿಗುತ್ತದೆಯೋ ಅಥವಾ ತಿಹಾರ ಜೈಲುವಾಸ ಮುಂದುವರೆಯಲಿದೆಯೇ ಎಂಬ ಕುತೂಹಲ ಮೂಡಿದೆ.

ಜಾಮೀನು ಕೋರಿ ಸುಪ್ರೀಂ ಕೋರ್ಟ್‌ಗೆ ಮಾಜಿ ಸಿಎಂ ಸೊರೇನ್‌

ನವದೆಹಲಿ: ಭೂ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನವಾಗಿರುವ ಜಾರ್ಖಂಡ್‌ ಮಾಜಿ ಮುಖ್ಯಮಂತ್ರಿ ಹೇಮಂತ್‌ ಸೊರೇನ್‌ ತಮ್ಮ ಜಾಮೀನು ಅರ್ಜಿಯನ್ನುಜಾರ್ಖಂಡ್‌ ಹೈಕೋರ್ಟ್‌ ತಿರಸ್ಕರಿಸಿದ್ದನ್ನು ಪ್ರಶ್ನಸಿ ಸೋಮವಾರ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದಾರೆ.ಜಾರ್ಖಂಡ್ ಹೈಕೋರ್ಟ್ ಸೊರೇನ್‌ ಜಾಮೀನು ಅರ್ಜಿಯನ್ನು ಶುಕ್ರವಾರ ತಿರಸ್ಕರಿಸಿತ್ತು. ಇದರ ಬೆನ್ನಲ್ಲೇ ಅವರು ಸುಪ್ರಿಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.ಸೊರೇನ್ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, ನ್ಯಾ। ಡಿ.ವೈ. ಚಂದ್ರಚೂಡ್ ನೇತೃತ್ವದ ಪೀಠದ ಮುಂದೆ ತುರ್ತಾಗಿ ಅರ್ಜಿಯನ್ನು ವಿಚಾರಣೆ ನಡೆಸಬೇಕೆಂದು ಕೋರಿದರು.ಇ.ಡಿ. ಸೊರೇನ್‌ ಅವರನ್ನು ಜನವರಿ 31 ರಂದು ಬಂಧಿಸಿತ್ತು.

ದಿಲ್ಲಿ ಅಬಕಾರಿ ಹಗರಣ: ಬಿಆರ್‌ಎಸ್‌ ನಾಯಕಿ ಕವಿತಾ ಜಾಮೀನು ಅರ್ಜಿ ವಜಾ

ನವದೆಹಲಿ: ದೆಹಲಿ ಅಬಕಾರಿ ಹಗರಣದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧಿತ ಆಗಿರುವ ತೆಲಂಗಾಣ ಮಾಜಿ ಮುಖ್ಯಮಂತ್ರಿ ಕೆಸಿಆರ್‌ ಅವರ ಪುತ್ರಿ ಹಾಗೂ ಬಿಆರ್‌ಎಸ್‌ ಪಕ್ಷದ ನಾಯಕಿ ಕೆ. ಕವಿತಾ ಅವರು ಸಲ್ಲಿಸಿದ ಜಾಮೀನು ಅರ್ಜಿಯನ್ನು ದಿಲ್ಲಿ ಇ.ಡಿ. ಕೋರ್ಟ್‌ ವಜಾಗೊಳಿಸಿದೆ.ಸಿಬಿಐ ಮತ್ತು ಇ.ಡಿ. ವಿಶೇಷ ನ್ಯಾಯಾಧೀಶೆ ಕಾವೇರಿ ಬವೇಜಾ ಅವರು ಕವಿತಾ ಅವರ ಜಾಮೀನು ಅರ್ಜಿಯನ್ನು ವಜಾಗೊಳಿಸಿದ್ದಾರೆ. ಇದರಿಂದ ಲೋಕಸಭೆ ಚುನಾವಣೆ ಹೊತ್ತಲ್ಲಿ ಬಿಡುಗಡೆ ನಿರೀಕ್ಷೆಯಲ್ಲಿದ್ದ ಕವಿತಾಗೆ ನಿರಾಸೆಯಾಗಿದೆ.

ಮಾ.15ರಂದು ಬಂಧನವಾಗಿದ್ದ ಕವಿತಾ, ಈಗ ನ್ಯಾಯಾಂಗ ಬಂಧನದಲ್ಲಿದ್ದಾರೆ ಹಾಗೂ ತಿಹಾರ್‌ ಜೈಲಲ್ಲಿ ವಾಸವಾಗಿದ್ದಾರೆ.