ನ್ಯಾಷನಲ್ ಹೆರಾಲ್ಡ್ ಅಕ್ರಮ ಪರಭಾರೆ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಮತ್ತು ಇತರ 7 ಆರೋಪಿಗಳ ವಿರುದ್ಧ ದೆಹಲಿ ಪೊಲೀಸರು ಹೊಸ ಎಫ್‌ಐಆರ್ ದಾಖಲಿಸಿದ್ದಾರೆ.
ನವದೆಹಲಿ : ನ್ಯಾಷನಲ್ ಹೆರಾಲ್ಡ್ ಅಕ್ರಮ ಪರಭಾರೆ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಮತ್ತು ಇತರ 7 ಆರೋಪಿಗಳ ವಿರುದ್ಧ ದೆಹಲಿ ಪೊಲೀಸರು ಹೊಸ ಎಫ್‌ಐಆರ್ ದಾಖಲಿಸಿದ್ದಾರೆ. ‘ಗಾಂಧಿ ಕುಟುಂಬ ಹಾಗೂ ಅವರ ಕೆಲವು ಆಪ್ತರು ವೈಯಕ್ತಿಕ ಲಾಭಕ್ಕಾಗಿ ತಮ್ಮ ಸ್ಥಾನವನ್ನು ದುರುಪಯೋಗಪಡಿಸಿಕೊಂಡು ಹೆರಾಲ್ಡ್ ಆಸ್ತಿಗಳನ್ನು ಅಕ್ರಮವಾಗಿ ಸ್ವಾಧೀನಪಡಿಸಿಕೊಂಡಿದ್ದಾರೆ’ ಎಂಬ ಇ.ಡಿ. (ಜಾರಿ ನಿರ್ದೇಶನಾಲಯ) ದೂರು ಆಧರಿಸಿ ಹೊಸ ಪ್ರಕರಣ ದಾಖಲಾಗಿದೆ.
ಅಧಿಕೃತ ಮೂಲಗಳು ಮತ್ತು ದಾಖಲೆಗಳ ಪ್ರಕಾರ, ದೆಹಲಿ ಪೊಲೀಸರ ಆರ್ಥಿಕ ಅಪರಾಧಗಳ ವಿಭಾಗ (ಇಒಡಬ್ಲ್ಯೂ) ಅ.3ರಂದೇ ಪ್ರಕರಣ ದಾಖಲಿಸಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಎಫ್‌ಐಆರ್‌ನಲ್ಲಿ ಗಾಂಧಿ ಕುಟುಂಬವಲ್ಲದೆ, ಕಾಂಗ್ರೆಸ್ ನಾಯಕರಾದ ಸುಮನ್ ದುಬೆ ಮತ್ತು ಸ್ಯಾಮ್ ಪಿತ್ರೋಡಾ, ಯಂಗ್ ಇಂಡಿಯನ್ (ವೈಐ) ಮತ್ತು ಡಾಟೆಕ್ಸ್ ಮರ್ಚಂಡೈಸ್ ಲಿಮಿಟೆಡ್, ಡಾಟೆಕ್ಸ್ ಪ್ರವರ್ತಕ ಸುನೀಲ್ ಭಂಡಾರಿ, ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (ಎಜೆಎಲ್) ಹೆಸರಿದೆ.
ಎಫ್ಐಆರ್‌ನಲ್ಲೇನಿದೆ?:
‘ಈಗಾಗಲೇ 2000 ಕೋಟಿ ರು. ಮೌಲ್ಯದ ಆಸ್ತಿ ಹೊಂದಿದ್ದ ನ್ಯಾಷನಲ್ ಹೆರಾಲ್ಡ್‌ನ 90 ಕೋಟಿ ರು. ಮೌಲ್ಯದ ಷೇರನ್ನು ಗಾಂಧಿ ಕುಟುಂಬದ ಒಡೆತನದ ಯಂಗ್ ಇಂಡಿಯನ್ ಖರೀದಿಸಿ ಅಕ್ರಮ ಎಸಗಿದೆ’ ಎಂಬ ಪ್ರಕರಣದ ವಿಚಾರಣೆ ಪ್ರಗತಿಯಲ್ಲಿದೆ. ಅದಕ್ಕೆ ಹೆಚ್ಚುವರಿಯಾಗಿ ಹೊಸ ಎಫ್ಐಆರ್ ದಾಖಲಾಗಿದೆ.
‘ಕೋಲ್ಕತಾ ಮೂಲದ ಶೆಲ್ (ಖೊಟ್ಟಿ) ಕಂಪನಿ ಎಂದು ಹೇಳಲಾಗುವ ಡಾಟೆಕ್ಸ್ ಮರ್ಚಂಡೈಸ್ ಎಂಬ ಕಂಪನಿ, ಸೋನಿಯಾ ಹಾಗೂ ರಾಹುಲ್ ಗಾಂಧಿ ಅವರು ಶೇ.76ರಷ್ಟು ಷೇರು ಹೊಂದಿರುವ ಲಾಭರಹಿತ ಕಂಪನಿಯಾದ ಯಂಗ್ ಇಂಡಿಯನ್‌ಗೆ 1 ಕೋಟಿ ರು.ಗಳನ್ನು ಒದಗಿಸಿದೆ. ಈ ಪೈಕಿ ಗಾಂಧಿಗಳು 50 ಲಕ್ಷ ರು.ಗಳನ್ನು ಪಾವತಿಸಿ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಮಾತೃ ಸಂಸ್ಥೆಯಾಗಿದ್ದ 2000 ಕೋಟಿ ರು. ಮೌಲ್ಯದ ಎಜೆಎಲ್ ಆಸ್ತಿಯನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಈ ರೀತಿ 50 ಲಕ್ಷ ರು. ಪುಡಿಗಾಸು ನೀಡಿ 2000 ಕೋಟಿ ರು. ಮೌಲ್ಯದ ಕಂಪನಿಯನ್ನು ವಶಕ್ಕೆ ತೆಗೆದುಕೊಳ್ಳುವುದು ಅಕ್ರಮ. ಈ ಮೂಲಕ ಎಜೆಎಲ್‌ನ ನೈಜ ಆಸ್ತಿಯನ್ನು ಮರೆಮಾಚಲಾಗಿದೆ’ ಎಂದು ಎಫ್‌ಐಆರ್‌ನಲ್ಲಿದೆ.
ಮೂಲ ಪ್ರಕರಣವೇನು?:
ಮಾಜಿ ಸಂಸದ ಸುಬ್ರಮಣಿಯನ್ ಸ್ವಾಮಿ ಅವರ ಖಾಸಗಿ ದೂರಿನ ಆಧಾರದ ಮೇಲೆ 2014ರಲ್ಲಿ ಮೊದಲ ಬಾರಿ ಪ್ರಕರಣ ದಾಖಲಾಗಿದ್ದು, ಅದರ ತನಿಖೆ ಹಾಗೂ ವಿಚಾರಣೆ ಇನ್ನೂ ಪ್ರಗತಿಯಲ್ಲಿದೆ. ಗಾಂಧಿಗಳ ವಿರುದ್ಧ ಆರೋಪಪಟ್ಟಿ ಕೂಡ ದಾಖಲಿಸಲಾಗಿದೆ.
1938ರಲ್ಲಿ ಜವಾಹರಲಾಲ್ ನೆಹರು ಮತ್ತು ಇತರ ಸ್ವಾತಂತ್ರ್ಯ ಹೋರಾಟಗಾರರು ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಸ್ಥಾಪಿಸಿದ್ದರು. ಈ ಪತ್ರಿಕೆಯನ್ನು ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ ಕಂಪನಿ ನೋಡಿಕೊಳ್ಳುತ್ತಿತ್ತು. ಆದರೆ ಹಣಕಾಸಿನ ತೊಂದರೆಗಳಿಂದಾಗಿ 2008ರಲ್ಲಿ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಮುದ್ರಣವನ್ನು ಸ್ಥಗಿತಗೊಳಿಸಿತು. ಈ ವೇಳೆ ಅದು 90 ಕೋಟಿ ರು. ಸಾಲ ಮಾಡಿತ್ತು.
ಕಂಪನಿಯನ್ನು ಈ ಬಿಕ್ಕಟ್ಟಿನಿಂದ ಹೊರತರಲು, ಕಾಂಗ್ರೆಸ್ ಪಕ್ಷವು ಎಜೆಎಲ್‌ಗೆ 10 ವರ್ಷಗಳ ಅವಧಿಯಲ್ಲಿ ಸುಮಾರು 100 ಕಂತುಗಳಲ್ಲಿ 90 ಕೋಟಿ ರು. ಸಾಲ ನೀಡಿತ್ತು. ಆದರೆ ಈ ಸಾಲ ಮರುಪಾವತಿಸಲು ಕೂಡ ಎಜೆಎಲ್‌ಗೆ ಸಾಧ್ಯವಾಗಲಿಲ್ಲ.
ಹೀಗಾಗಿ ಈ ಸಾಲವನ್ನೇ ಷೇರುಗಳಾಗಿ ಪರಿವರ್ತಿಸಲಾಯಿತು. ಈ ಮೂಲಕ ಷೇರು ಖರೀದಿಸಿದ ಕಂಪನಿಗಳಿಗೆ ಎಜೆಎಲ್ ಮೇಲೆ ಹಿಡಿತ ಸಾಧಿಸಲು ಅನುವು ಮಾಡಿಕೊಡಲಾಯಿತು.
ಸಾಲ ನೀಡಿದ್ದ ಕಾಂಗ್ರೆಸ್ ರಾಜಕೀಯ ಪಕ್ಷವಾದ ಕಾರಣ, ನಿಯಮಾನುಸಾರ ಷೇರು ಖರೀದಿ ಮಾಡುವಂತಿಲ್ಲ. ಹೀಗಾಗಿ ಈ 90 ಕೋಟಿ ರು. ಮೌಲ್ಯದ ಷೇರುಗಳನ್ನು ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರು ಶೇ.76ರಷ್ಟು ಷೇರು ಹೊಂದಿದ್ದ ಯಂಗ್ ಇಂಡಿಯನ್ (ವೈಐ) ಸ್ವಯಂಸೇವಾ ಸಂಸ್ಥೆ ಖರೀದಿ ಮಾಡಿತು. ಈ ಮೂಲಕ 2000 ಕೋಟಿ ರು. ಮೌಲ್ಯದ ಆಸ್ತಿ ಹೊಂದಿದ್ದ ಎಜೆಎಲ್ ಅನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತು. ಈ ರೀತಿಯಾಗಿ 2000 ಕೋಟಿ ರು. ಮೌಲ್ಯದ ಎಜೆಎಲ್ ಅನ್ನು ಕೇವಲ 90 ಕೋಟಿ ರು. ಪುಡಿಗಾಸು ನೀಡಿ ಗಾಂಧಿ ಕುಟುಂಬದ ಸ್ವಯಂಸೇವಾ ಸಂಸ್ಥೆ ತನ್ನ ವಶಕ್ಕೆ ತೆಗೆದುಕೊಂಡಿತು. ಈ ರೀತಿ ಕಾಂಗ್ರೆಸ್ ನಾಯಕರು ವಂಚನೆ ಮತ್ತು ನಂಬಿಕೆ ದ್ರೋಹದಲ್ಲಿ ಭಾಗಿಯಾಗಿದ್ದಾರೆ ಎಂದು ಪ್ರಕರಣದ ತನಿಖೆ ನಡೆಸಿದ್ದ ಇ.ಡಿ. ಹೇಳಿತ್ತು.
ಇದು ರಾಜಕೀಯ ಪ್ರೇರಿತಮೋದಿ-ಶಾ ಜೋಡಿಯು ಕಾಂಗ್ರೆಸ್‌ನ ಉನ್ನತ ನಾಯಕತ್ವದ ವಿರುದ್ಧ ಕಿರುಕುಳ, ಬೆದರಿಕೆ ಮತ್ತು ಸೇಡಿನ ದುರುದ್ದೇಶಪೂರಿತ ರಾಜಕೀಯವನ್ನು ಮುಂದುವರೆಸಿದೆ. ಬೆದರಿಕೆ ಹಾಕುವವರು ಸ್ವತಃ ಅಸುರಕ್ಷಿತರು ಮತ್ತು ಭಯಭೀತರಾಗಿದ್ದಾರೆ. ನ್ಯಾಷನಲ್ ಹೆರಾಲ್ಡ್ ವಿಷಯವು ಸಂಪೂರ್ಣವಾಗಿ ನಕಲಿ ಪ್ರಕರಣ. ನ್ಯಾಯವು ಅಂತಿಮವಾಗಿ ಜಯಗಳಿಸುತ್ತದೆ. ಸತ್ಯಮೇವ ಜಯತೇ.- ಜೈರಾಂ ರಮೇಶ್, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ
ವಂಚನೆ ಸಾಬೀತಾಗಿದೆ
ಕಾಂಗ್ರೆಸ್ ಹೇಳಿದಂತೆ ಇದು ರಾಜಕೀಯ ಪ್ರೇರಿತ ಕೇಸಲ್ಲ. ಮನಮೋಹನ ಸಿಂಗ್ ಅಧಿಕಾರದಲ್ಲಿದ್ದಾಗಲೇ ಇದರ ದೂರು ದಾಖಲಾಗಿತ್ತು. ನಂತರ ಗಾಂಧಿಗಳು ಇದನ್ನು ಪ್ರಶ್ನಿಸಿ ಕೋರ್ಟಿಗೆ ಹೋದರೂ, ವಿಚಾರಣೆ ಎದುರಿಸಿ ಎಂದು ಆದೇಶಿಸಿತ್ತು. ಈಗ ನಿಮ್ಮ ವಂಚನೆ ಸಾಬೀತಾಗುತ್ತಿದೆ. ಭಾಷಣ ಬಿಗಿಯುವುದನ್ನು ಬಿಟ್ಟು ಏನು ಅಕ್ರಮ ಎಸಗಿದ್ದೀರಿ ಎಂದು ಕೋರ್ಟ್ ಮುಂದೆ ಹೇಳಿ.
- ರವಿಶಂಕರ ಪ್ರಸಾದ್, ಬಿಜೆಪಿ ನಾಯಕ
ಕೋಲ್ಕತಾದ ಡಾಟೆಕ್ಸ್ ಕಂಪನಿಯಿಂದ ಸೋನಿಯಾ, ರಾಹುಲ್ ಷೇರುದಾರರಾಗಿರುವ ಯಂಗ್ ಇಂಡಿಯಾಗೆ ₹1 ಕೋಟಿ ಸಾಲ
ಇದರಲ್ಲಿ ₹50 ಲಕ್ಷ ನೀಡಿ ನ್ಯಾಷನಲ್ ಹೆರಾಲ್ಡ್‌ನ ಮಾತೃ ಸಂಸ್ಥೆ ಎಜೆಎಲ್‌ನ ₹2000 ಕೋಟಿ ರು.ಮೌಲ್ಯದ ಆಸ್ತಿ ತೆಕ್ಕೆಗೆ ಪಡೆದ ರಾಹುಲ್
ಕೇವಲ 50 ಲಕ್ಷ ರು. ಹಣಕ್ಕೆ 2000 ಕೋಟಿ ಮೌಲ್ಯದ ಕಂಪನಿ ವಶ ಅಕ್ರಮ ಎಂಬುದು ಇ.ಡಿ. ಆರೋಪ. ಇದನ್ನು ಆಧರಿಸಿ ಹೊಸ ಕೇಸು
