ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್‌ಗೆ ಸೇರಿದ 700 ಕೋಟಿ ರು. ಆಸ್ತಿ ಜಪ್ತಿ ಆರಂಭ

| N/A | Published : Apr 13 2025, 02:02 AM IST / Updated: Apr 13 2025, 06:38 AM IST

ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್‌ಗೆ ಸೇರಿದ 700 ಕೋಟಿ ರು. ಆಸ್ತಿ ಜಪ್ತಿ ಆರಂಭ
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರಿಗೆ ಸಂಬಂಧಿಸಿದ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್‌ಗೆ   ಸೇರಿದ 700 ಕೋಟಿ ರು.ಗಳಿಗೂ ಹೆಚ್ಚು ಮೌಲ್ಯದ ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳಲು ಜಾರಿ ನಿರ್ದೇಶನಾಲಯ (ಇ.ಡಿ.)  ಪ್ರಕ್ರಿಯೆ ಪ್ರಾರಂಭಿಸಿದೆ.

 ನವದೆಹಲಿ: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರಿಗೆ ಸಂಬಂಧಿಸಿದ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್‌ಗೆ (ಎಜೆಎಲ್) ಸೇರಿದ 700 ಕೋಟಿ ರು.ಗಳಿಗೂ ಹೆಚ್ಚು ಮೌಲ್ಯದ ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳಲು ಜಾರಿ ನಿರ್ದೇಶನಾಲಯ (ಇ.ಡಿ.) ಶನಿವಾರ ಪ್ರಕ್ರಿಯೆ ಪ್ರಾರಂಭಿಸಿದೆ.

ಈ ಆಸ್ತಿಗಳಲ್ಲಿ ದೆಹಲಿ, ಮುಂಬೈ ಮತ್ತು ಲಖನೌನಲ್ಲಿರುವ ಪ್ರಮುಖ ಆಸ್ತಿಗಳು ಸೇರಿವೆ. ಅವುಗಳಲ್ಲಿ, ರಾಷ್ಟ್ರ ರಾಜಧಾನಿಯ ಬಹದ್ದೂರ್ ಶಾ ಜಾಫರ್ ಮಾರ್ಗದಲ್ಲಿರುವ ಐಕಾನಿಕ್ ಹೆರಾಲ್ಡ್ ಹೌಸ್ ಕೂಡ ಒಂದು. ಇವುಗಳ ಮೇಲೆ ಜಪ್ತಿ ನೋಟಿಸ್‌ಗಳನ್ನು ಈಗ ಇ.ಡಿ. ಅಂಟಿಸಿದೆ.

2002ರ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಸೆಕ್ಷನ್ 8 ಮತ್ತು 2013ರ ಹಣ ವರ್ಗಾವಣೆ ತಡೆ ನಿಯಮಗಳ ಅಡಿಯಲ್ಲಿ ಈ ಕ್ರಮ ಜರುಗಿಸಲಾಗಿದೆ ಎಂದು ಇ.ಡಿ. ಮೂಲಗಳು ಹೇಳಿವೆ.

ಏನಿದು ಪ್ರಕರಣ?:

ಈ ಪ್ರಕರಣವು ಒಂದು ಕಾಲದಲ್ಲಿ ‘ನ್ಯಾಷನಲ್ ಹೆರಾಲ್ಡ್’ ಪತ್ರಿಕೆಯನ್ನು ಪ್ರಕಟಿಸುತ್ತಿದ್ದ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (ಎಜೆಎಲ್) ಅನ್ನು ಯಂಗ್ ಇಂಡಿಯನ್ ಲಿಮಿಟೆಡ್ (ವೈಐಎಲ್) ಎಂಬ ಅನ್ಯ ಕಂಪನಿ ಸ್ವಾಧೀನ ಮಾಡಿಕೊಂಡಿದ್ದಕ್ಕೆ ಸಂಬಂಧಿಸಿದೆ. ‘ಈ ಸ್ವಾಧೀನ ಅಕ್ರಮವಾಗಿದ್ದು, 2000 ಕೋಟಿ ರು. ಮೌಲ್ಯದ ಆಸ್ತಿ ಮೇಲೆ ಹಿಡಿತ ಸಾಧಿಸಲು ದುರುದ್ದೇಶಪೂರಿತವಾಗಿ ನಡೆಸಲಾಗಿದೆ’ ಎಂದು ರಾಜಕಾರಣಿ ಸುಬ್ರಮಣಿಯನ್ ಸ್ವಾಮಿ ದೆಹಲಿ ಹೈಕೋರ್ಟ್‌ ಮೊರೆ ಹೋಗಿದ್ದರು. ಕೋರ್ಟು ಇ.ಡಿ. ತನಿಖೆಗೆ ಅನುಮತಿಸಿತ್ತು. ಇದರ ಭಾಗವಾಗಿ ಈಗ ಇ.ಡಿ., ಆಸ್ತಿ ಜಪ್ತಿ ಮಾಡಿದೆ.

ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಇತರ ಹಿರಿಯ ಕಾಂಗ್ರೆಸ್ ನಾಯಕರು ಯಂಗ್‌ ಇಂಡಿಯನ್‌ ಕಂಪನಿಯ ಪದಾಧಿಕಾರಿಗಳಾಗಿದ್ದಾರೆ.