ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಕಳೆದ 21 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತ ಸೋನಂ ವಾಂಗ್ಚುಕ್ ಅವರನ್ನು ನಾಗರಿಕರ ವೇಷದಲ್ಲಿ ಬಂದ ಪೊಲೀಸರು ನಾಟಕೀಯವಾಗಿ ಆಸ್ಪತ್ರೆಗೆ ಸ್ಥಳಾಂತರಿಸಿದ ಘಟನೆ ಶನಿವಾರ ಬೆಳಗ್ಗೆ ನಡೆದಿದೆ.
ನವದೆಹಲಿ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಕಳೆದ 21 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತ ಸೋನಂ ವಾಂಗ್ಚುಕ್ ಅವರನ್ನು ನಾಗರಿಕರ ವೇಷದಲ್ಲಿ ಬಂದ ಪೊಲೀಸರು ನಾಟಕೀಯವಾಗಿ ಆಸ್ಪತ್ರೆಗೆ ಸ್ಥಳಾಂತರಿಸಿದ ಘಟನೆ ಶನಿವಾರ ಬೆಳಗ್ಗೆ ನಡೆದಿದೆ. ಈ ವೇಳೆ ಜಿರಳೆ ಪಕ್ಷದ ಕಾರ್ಯಕರ್ತರು ಮಾನವ ಸರಪಳಿ ರಚಿಸಿ ಕೋಲಾಹಲವೆಬ್ಬಿಸಿದ ಪ್ರಸಂಗವೂ ನಡೆದಿದೆ.
ಶನಿವಾರ ಮುಂಜಾನೆ ಜಂತರ್ ಮಂತರ್ ವೇದಿಕೆ ಮೇಲೆ ಇತರ ಪ್ರತಿಭಟನಾಕಾರರ ಜತೆ ವಾಂಗ್ಚುಕ್ ಕುಳಿತಿದ್ದರು. ಆಗ ಪೊಲೀಸರು ಸಾಮಾನ್ಯ ನಾಗರಿಕರ ವೇಷಭೂಷಣದಲ್ಲಿ ಆಗಮಿಸಿದ್ದಾರೆ. ಕೆಲವರು ನೀಲಿ ಮತ್ತು ಬಿಳಿ ಶರ್ಟ್‌ಗಳನ್ನು ತೊಟ್ಟಿದ್ದರೆ, ಇನ್ನು ಕೆಲವರು ಹಳದಿ, ಕೇಸರಿ, ಕಪ್ಪು ಟಿ-ಶರ್ಟ್‌ಗಳನ್ನು ಧರಿಸಿದ್ದರು.
ಅಲ್ಲಿ ಏನು ನಡೆಯುತ್ತಿದೆ ಎಂದು ಸುತ್ತಮುತ್ತಲಿನವರಿಗೆ ಅರ್ಥವಾಗುವ ಮುನ್ನವೇ, ಪೊಲೀಸರು ಬಿಳಿ ಬೆಡ್‌ಶೀಟ್‌ನಲ್ಲಿ ವಾಂಗ್ಚುಕ್‌ರನ್ನು ಸುತ್ತಿ ಅಲ್ಲಿಂದ ಕೊಂಡೊಯ್ದಿದ್ದಾರೆ. ಈ ವೇಳೆ ಪ್ರತಿಭಟನಾಕಾರರು ಅಡೆತಡೆ ಉಂಟುಮಾಡಿದ್ದರಿಂದ ಸಣ್ಣ ಪ್ರಮಾಣದ ಗದ್ದಲ ಉಂಟಾಗಿದೆ. ನಂತರ ಅವರನ್ನು ಸಫ್ದರ್‌ಗಂಜ್ ಆಸ್ಪತ್ರೆಗೆ ದಾಖಲಿಸಲಾಗಿದೆ.‘ಹೈಕೋರ್ಟ್‌ನ ಆದೇಶ ಹಾಗೂ ಹದಗೆಡುತ್ತಿರುವ ಆರೋಗ್ಯದ ಕಾರಣದಿಂದಾಗಿ ತಜ್ಞ ವೈದ್ಯರ ಸಲಹೆಯ ಮೇರೆಗೆ ವಾಂಗ್ಚುಕ್‌ರನ್ನು ಪ್ರತಿಭಟನಾ ಸ್ಥಳದಿಂದ ಕರೆದೊಯ್ಯಲಾಯಿತು. ಸಾಧ್ಯವಾದಷ್ಟು ಶಾಂತ ರೀತಿಯಲ್ಲಿ ಅವರನ್ನು ಸ್ಥಳಾಂತರಿಸಿದ್ದೇವೆ. ಅವರಿಗೆ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಇತರ ಮೂವರಿಂದಲೂ ಉಪವಾಸ:
ಸೋನಂ ವಾಂಗ್ಚುಕ್ ಜತೆಯಲ್ಲೇ ಅಖಿಲ ಭಾರತ ವಿದ್ಯಾರ್ಥಿ ಸಂಘಟನೆಯ ಮೂವರು ಕಾರ್ಯಕರ್ತರು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಇವರ ಉಪವಾಸವೂ 21ನೇ ದಿನ ಪೂರ್ಣಗೊಳಿಸಿದೆ. ಶುಕ್ರವಾರ ವಾಂಗ್ಚುಕ್‌ರನ್ನು ಕರೆದೊಯ್ಯಲು ಬಂದ ಪೊಲೀಸರು ಈ ಮೂವರ ಸ್ಥಳಾಂತರಕ್ಕೂ ಯತ್ನಿಸಿದ್ದಾರೆ. ಆದರೆ ಜಿರಳೆ ಕಾರ್ಯಕರ್ತರು ಮಾನವ ಸರಪಳಿ ರಚಿಸಿ ತಡೆಯೊಡ್ಡಿದ್ದರಿಂದ ಇವರ ಸ್ಥಳಾಂತರ ವಿಫಲವಾಗಿದೆ. ಈ ಮೂವರ ಪೈಕಿ ನೇಹಾ ಎಂಬಾಕೆಯ ರಕ್ತದಲ್ಲಿನ ಸಕ್ಕರೆ ಮಟ್ಟ ಅಪಾಯಕಾರಿ ಮಟ್ಟಕ್ಕೆ ಕುಸಿದಿದ್ದರೆ, ಆಮೀನ್ ಮತ್ತು ಮನೀಶ್ 14 ಮತ್ತು 10 ಕೆಜಿ ತೂಕ ಕಳೆದುಕೊಂಡಿದ್ದಾರೆ.
ಪೊಲೀಸರಿಂದ ಹಲ್ಲೆ- ದೀಪ್ಕೆ ಆರೋಪ:
ಈ ಬೆಳವಣಿಗೆ ಬೆನ್ನಲ್ಲೇ ಜಿರಳೆ ಪಕ್ಷದ ಸ್ಥಾಪಕ ಅಭಿಜೀತ್ ದೀಪ್ಕೆ, ಪೊಲೀಸರು ನನಗೆ ಹೊಡೆದರು ಎಂದು ಆರೋಪಿಸಿದ್ದಾರೆ. ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ‘ವಾಂಗ್ಚುಕ್‌ರನ್ನು ಕೊಂಡೊಯ್ಯಲು ಪೊಲೀಸರು ಬಂದಾಗ ಫ್ರೆಶ್ ಅಪ್ ಆಗಲು ನಾನು ಸ್ನೇಹಿತನ ಮನೆಗೆ ಹೋಗಿದ್ದೆ. ದೆಹಲಿ ಪೊಲೀಸರು ನನ್ನ ಮೇಲೆ ಹಲ್ಲೆ ನಡೆಸಿ, ನನ್ನನ್ನು ವಶಕ್ಕೆ ಪಡೆದಿದ್ದಾರೆ. 20 ದಿನಗಳ ಉಪವಾಸ ಸತ್ಯಾಗ್ರಹದಿಂದ ಅಸ್ವಸ್ಥರಾಗಿರುವ ವೃದ್ಧನನ್ನು (ವಾಂಗ್ಚುಕ್) ಎತ್ತಿಕೊಂಡು, ಬಿಳಿ ಬೆಡ್‌ಶೀಟ್‌ನಲ್ಲಿ ಸುತ್ತಿ ಕರೆದೊಯ್ದಿದ್ದಾರೆ. ಇದು ರಾಷ್ಟ್ರೀಯ ಅವಮಾನ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.